ವರ್ಗ ಕಾರ್ಖಾನೆ ಕಾರ್ಮಿಕರಿಗೆ ನ್ಯಾಯ ದೊರಕಿಸಿ

| Published : Jul 28 2025, 12:30 AM IST

ಸಾರಾಂಶ

ಕೈಗಾರಿಕೆಯಲ್ಲಿ ಕಾರ್ಮಿಕರಿಗೆ ನೀಡುತ್ತಿದ್ದ ಸಂಬಳ ಕಡಿಮೆ ಇದ್ದ ಪರಿಣಾಮ ಸಂಬಳ ಹೆಚ್ಚು ಮಾಡುವಂತೆ ೨೦೨೦ ರಲ್ಲಿ ಬೇಡಿಕೆ ಪಟ್ಟಿ ಸಲ್ಲಿಸಲಾಗಿತ್ತು. ಆದರೆ ಅದಕ್ಕೆ ಮಾಲೀಕ ವರ್ಗ ಸ್ಪಂದಿಸಿಲ್ಲ. ೨೦೨೩ ರ ಜೂನ್ ೨೬ ರಿಂದ ೯ ತಿಂಗಳ ಕಾಲ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದು, ಕಾರ್ಮಿಕ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಹೋರಾಟ ನಿಲ್ಲಿಸಿದ್ದರಿಂದ ೨೦೨೫ರ ಮೇ ೨೩ ರಿಂದ ಮತ್ತೆ ಕೆಲಸ ಆರಂಭಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಟೇಕಲ್

ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ವರ್ಗ ಕೈಗಾರಿಕೆಯಲ್ಲಿ ಹಲವು ವರ್ಷಗಳಿಂದ ಕಾಯಂ ಕೆಲಸ ಕಾರ್ಯನಿರ್ವಹಿಸುತ್ತಿರುವ ೮೧ ಕ್ಕೂ ಹೆಚ್ಚು ಕಾರ್ಮಿಕರನ್ನು ತೆಗೆದುಹೈಕಲು ಮತ್ತು ಕೈಗಾರಿಕೆಯನ್ನು ಮುಚ್ಚುವ ನೋಟಿಸ್ ಹೊರಡಿಸಿದ್ದು ತಮಗೆ ನ್ಯಾಯ ದೊರಕಿಸುವಂತೆ ಅಂಜನಿ ಡಾ. ಕಿರಣ್‌ಸೋಮಣ್ಣನವರ ನೇತೃತ್ವದಲ್ಲಿ ಕಾರ್ಮಿಕರು ಶಾಸಕ ಕೆ.ವೈ.ನಂಜೇಗೌಡರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ.ಕಿರಣ್‌ ಸೋಮಣ್ಣ ಮಾತನಾಡಿ, ಈ ವರ್ಗ ಕೈಗಾರಿಕೆಯಲ್ಲಿ ಬುಲ್ಡೋಜರ್‌ ಬಕೆಟ್‌ಗೆ ಬೇಕಾಗುವ ಎಕ್ಸ್‌ಕವೇಟರ್, ರಿಪ್ಪರ್ಸ್ ಮತ್ತು ಕಪ್ಲರ್ಸ್ ಮುಂತಾದ ಸಾಮಗ್ರಿಗಳನ್ನು ತಯಾರು ಮಾಡಿ ಅಮೆರಿಕಾ, ನ್ಯೂಜಿಲೆಂಡ್, ನೆದರ್‌ಲ್ಯಾಂಡ್, ಆಸ್ಟ್ರೇಲಿಯಾ, ಯುಕೆ, ನಾರ್ವೆ ದೇಶಗಳಿಗೆ ರಪ್ತು ಮಾಡುತ್ತಿದ್ದು ಲಾಭದಾಯವಾಗಿ ನಡೆಯುತ್ತಿರುವ ಕೈಗಾರಿಕೆಯಾಗಿದೆ ಎಂದರು.

ಕಾರ್ಖಾನೆ ಹೆಸರು ಬದಲಾವಣೆ

ಕೈಗಾರಿಕೆಯಲ್ಲಿ ಕಾರ್ಮಿಕರಿಗೆ ನೀಡುತ್ತಿದ್ದ ಸಂಬಳ ಕಡಿಮೆ ಇದ್ದ ಪರಿಣಾಮ ಸಂಬಳ ಹೆಚ್ಚು ಮಾಡುವಂತೆ ೨೦೨೦ ರಲ್ಲಿ ಬೇಡಿಕೆ ಪಟ್ಟಿ ಸಲ್ಲಿಸಲಾಗಿತ್ತು. ಆದರೆ ಅದಕ್ಕೆ ಮಾಲೀಕ ವರ್ಗ ಸ್ಪಂದಿಸಿಲ್ಲ. ೨೦೨೩ ರ ಜೂನ್ ೨೬ ರಿಂದ ೯ ತಿಂಗಳ ಕಾಲ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದು, ಕಾರ್ಮಿಕ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಹೋರಾಟ ನಿಲ್ಲಿಸಿದ್ದರಿಂದ ೨೦೨೫ರ ಮೇ ೨೩ ರಿಂದ ಮತ್ತೆ ಕೆಲಸ ಆರಂಭಿಸಲಾಗಿತ್ತು. ಇದೀಗ ಕಾರ್ಖಾನೆಯ ಹೆಸರು ಬದಲಾವಣೆ ಮಾಡಿ ಕಾಯಂ ಕಾರ್ಮಿಕರನ್ನೂ ಗುತ್ತಿಗೆ ಆಧಾರವೆಂದು ಪರಿಗಣಿಸುತ್ತಿದೆ ಹಾಗೂ ಕಾರ್ಖಾನೆಯನ್ನು ಮುಚ್ಚುವುದಾಗಿ ಹೇಳುತ್ತಿದ್ದಾರೆ ಎಂದರು.

ಚರ್ಚಿಸುವುದಾಗಿ ಶಾಸಕರ ಭರವಸೆ

ಮನವಿ ಸ್ವೀಕರಿಸಿದ ಶಾಸಕ ನಂಜೇಗೌಡರು, ಈ ವಾರಾಂತ್ಯದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ವರ್ಗ ಕಾರ್ಖಾನೆ ಮುಖ್ಯಸ್ಥರನ್ನು ಕರೆಯಿಸಿ ಚರ್ಚಿಸಿ ನಿಮಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್‌ರಾಜಣ್ಣ, ಬೆಂಗಳೂರು ಈಸ್ಟ್ ಇಂಡಸ್ಟ್ರೀಯಲ್ ವರ್ಕರ್ಸ್‌ ಯೂನಿಯನ್ ಅಧ್ಯಕ್ಷ ಹೆಚ್.ಎನ್.ಗೋಪಾಲಗೌಡ, ಪ್ರಭಾಕರನ್, ಶ್ರೀಧರರಾವ್, ಆಂಜಿನಪ್ಪ, ಅಶ್ವಥ, ಸುರೇಶ್‌ಕುಮಾರ್, ಹರೀಶ್, ಮುಂತಾದವರು ಹಾಜರಿದ್ದರು.