ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸಂಶೋಧನಾರ್ಥಿಗಳು ದ್ವಂದ್ವತೆ ಪರಿಹರಿಸಿಕೊಳ್ಳಬೇಕು. ಸಂಶೋಧನೆ ಚಮತ್ಕಾರ, ತಿರಸ್ಕಾರ ಆಗದೆ ಅದು ಪುರಸ್ಕಾರರಾಗಬೇಕು. ಸಂಶೋಧನೆ ಮಾಡುವವರು ವಿದ್ಯೆ, ಜ್ಞಾನ ಕದ್ದರೆ ಉತ್ತಮ ಶಿಕ್ಷಕ ಆಗಲಾರ, ಸತತ ಅಧ್ಯಯನ-ಅಧ್ಯಾಪನ ಸಮಯೋಚಿತವಾಗಿದ್ದರೆ ಗುಣಮಟ್ಟದ ಸಂಶೋಧನಾ ಮಹಾಪ್ರಬಂಧಗಳು ರಚನೆಯಾಗುತ್ತವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಹೇಳಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯ ಹಾಗೂ ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ಸಹಯೋಗದಲ್ಲಿ ವಿವಿಯ ಕುವೆಂಪು ಸಭಾಗೃಹದಲ್ಲಿ ನಡೆದ ಸಂಶೋಧನೆ ಮತ್ತು ಪ್ರಕಟಣೆಗಳಲ್ಲಿ ನೈತಿಕತೆ ವಿಷಯದ ಕುರಿತು ಎರಡು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಪ್ರೊ.ಪಿ.ಜಿ.ತಡಸದ ಮಾತನಾಡಿ, ಪಾಶ್ಚಾತ್ಯರಿಗಿಂತ ಮೊದಲೇ ಭಾರತೀಯರು ತತ್ವಜ್ಞಾನ ಮತ್ತು ಮಾನವೀಯ ಮೌಲ್ಯ ಬೋಧಿಸಿದ್ದಾರೆ. ರಾಮಾಯಣ ಮಹಾಭಾರತದಲ್ಲಿಯೂ ಇಂತಹ ಸಾಕಷ್ಟು ನಿದರ್ಶನಗಳಿವೆ. ವೇದಗಳು, ಪುರಾಣಗಳು ನೈತಿಕತೆಯ ಆಧಾರಗಳಾಗಿವೆ. ಇದರ ನಂತರ ಅರಿಸ್ಟಾಟಲ್, ಪ್ಲೇಟೋ ಮುಂತಾದವರ ತತ್ವಜ್ಞಾನವನ್ನು ಅರಿತುಕೊಳ್ಳಬಹುದು. ನಮ್ಮ ವಚನಕಾರರು ಮತ್ತು ದಾಸರು ನೈತಿಕತೆ, ತತ್ವಜ್ಞಾನ ಬೋಧಿಸಿದ್ದಾರೆ. ಆರಂಭದಲ್ಲಿ ಕುತೂಹಲಕ್ಕಾಗಿ ಸಂಶೋಧನೆಗಳು ಪ್ರಾರಂಭವಾದವು. ಆದರೆ ಇಂದು ಅನಿವಾರ್ಯವಾಗಿ ಸಂಶೋಧನೆಗಳು ನಡೆಯುತ್ತಿವೆ. ತಪಸ್ಸು, ಧ್ಯಾನದ ಮೂಲಕ ಋಷಿಮುನಿಗಳು ಭಗವಂತನ ಹುಡುಕಾಟ ಮಾಡಿರುವುದು ಸಹ ಸಂಶೋಧನೆಯ ನಿದರ್ಶನಗಳಾಗಿವೆ ಎಂದು ಅಭಿಪ್ರಾಯಪಟ್ಟರು.ಕೇಂದ್ರೀಯ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಡಾ.ಸಂತೋಷ ಸಿ.ಎಚ್. ವೈಜ್ಞಾನಿಕ ದುರ್ನಡತೆ ಎಂಬ ವಿಷಯದ ಕುರಿತು ಮಾತನಾಡಿ, ಸಂಶೋಧನಾ ವಿದ್ಯಾರ್ಥಿಗಳಿಗೆ ಗುರುತಿಸುವಿಕೆ, ಪ್ರಕರಣಗಳು, ದೂರುಗಳು ಮತ್ತು ಮೇಲ್ಮನವಿಗಳು, ನ್ಯಾಯಯುತ ಮತ್ತು ಮೌಲ್ಯಯುತ ಬರವಣಿಗೆ, ತಂದೆ-ತಾಯಿ ಗುರುಗಳಿಂದಲೇ ಮೌಲ್ಯಗಳ ಕಲಿಕೆ, ಸಂಶೋಧನೆಯಲ್ಲಿ ಚಿಕ್ಕಚಿಕ್ಕ ಅಂಶಗಳು ಸಹ ತುಂಬಾ ಪ್ರಾಮುಖ್ಯತೆ ಹೊಂದಿರುತ್ತವೆ. ಯಾವುದೋ ಒಂದು ವಿಷಯ ವಸ್ತುವನ್ನು ಕೃತಿಯಿಂದ ತಗೆದುಕೊಂಡಾಗ ಅದನ್ನು ಕಡ್ಡಾಯವಾಗಿ ನಮೂದಿಸಬೇಕು, ಇಲ್ಲದಿದ್ದರೆ ಕೃತಿಚೌರ್ಯದಿಂದ ಸಂಶೋಧನಾ ಮಹಾಪ್ರಬಂಧದ ಗುಣಮಟ್ಟ ಕುಸಿಯುತ್ತದೆ ಎಂದು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಕಾರ್ಯಾಗಾರದಲ್ಲಿ ಸುಮಾರು 100ಕ್ಕೂ ಅಧಿಕ ಸಂಶೋಧನಾರ್ಥಿಗಳು ಹಾಗೂ ಸ್ನಾತಕೋತ್ತರ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ. ಸುಮನ ಮುದ್ದಾಪೂರ ಹಾಗೂ ಡಾ.ರಮೇಶ ಕುರಿ, ಪ್ರೊ. ವಿ.ಎಂ.ಬಂಕಾಪುರ ಇತರರು ಉಪಸ್ಥಿತರಿದ್ದರು. ಡಾ.ಕಿರಣ ಸವಣೂರ ಸ್ವಾಗತಿಸಿದರು.ಸೋಮನಗೌಡ ಪಾಟೀಲ ನಿರೂಪಸಿದರು.
ಸಂಶೋಧನೆ ವ್ಯವಹಾರಿಕ ಚಟುವಟಿಕೆಗಳಾಗದೆ ಕಲಿಕಾ ಚಟುವಟಿಕೆಗಳು ಆದಲ್ಲಿ ವಿಶ್ವವಿದ್ಯಾಲಯಕ್ಕೆ ದೊಡ್ಡ ಮಟ್ಟದ ಗೌರವ ಬರುವ ಹಾಗೆ ಸಂಶೋಧನೆ ಮಾಡಬೇಕು. ಇದಕ್ಕೆ ವಿಶ್ವವಿದ್ಯಾಲಯ ನಿರಂತರವಾಗಿ ಬೆಂಬಲ ನೀಡುತ್ತದೆ. ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆಯ ಕುರಿತು ನಿರಂತರ ಯೋಜನೆ, ಯೋಚನೆಗಳನ್ನು ಮಾಡಿ ಅದರ ಆಳ, ಅರಿವು ತಿಳಿಯಬೇಕು. ಸಂಶೋಧನಾಕಾರ್ಯ ಸುಂದರವಾಗಿ ಸಾಗಲಿ.-ಪ್ರೊ.ಸಿ.ಎಂ.ತ್ಯಾಗರಾಜ ಆರ್‌ಸಿಯು ಕುಲಪತಿ