ಸಾರಾಂಶ
ನವೆಂಬರ್ 1ರಂದು ಆಚರಿಸಲಾಗುವ 69ನೇ ಕನ್ನಡ ರಾಜ್ಯೋತ್ಸವವನ್ನು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ಸೂಚಿಸಿದ್ದು, ಧ್ವಜಾರೋಹಣ ನೆರವೇರಿಸಲು ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಜ್ಯ ಆಯುಕ್ತರ ಸುತ್ತೋಲೆ ಹೊರಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಅಥಣಿ
ನವೆಂಬರ್ 1ರಂದು ಆಚರಿಸಲಾಗುವ 69ನೇ ಕನ್ನಡ ರಾಜ್ಯೋತ್ಸವವನ್ನು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ಸೂಚಿಸಿದ್ದು, ಧ್ವಜಾರೋಹಣ ನೆರವೇರಿಸಲು ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಜ್ಯ ಆಯುಕ್ತರ ಸುತ್ತೋಲೆ ಹೊರಡಿಸಿದ್ದಾರೆ. ಆದರೆ, ಆದೇಶದಲ್ಲಿ ರಾಜ್ಯ ಅಥವಾ ರಾಷ್ಟ್ರಧ್ವಜಾರೋಹಣ ಎಂಬುದರ ಉಲ್ಲೇಖ ಇಲ್ಲದಿರುವುದು ಶಿಕ್ಷಕರಲ್ಲಿ ಗೊಂದಲ ಸೃಷ್ಟಿಸಿದೆ.ಬೆಂಗಳೂರು ವಲಯದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಗೀತೆ ಹೇಳಬೇಕು. ನಂತರ ಪ್ರತ್ಯೇಕ ಕಂಬದಲ್ಲಿ ರಾಷ್ಟ್ರಧ್ವಜಕ್ಕಿಂತ ಕೆಳಭಾಗದಲ್ಲಿ ಮತ್ತು 5 ಅಡಿ ಅಂತರದಲ್ಲಿ ನಾಡಧ್ವಜಾರೋಹಣ ನೆರವೇರಿಸಿ ನಾಡಗೀತೆ ಹೇಳಬೇಕು ಎಂಬ ಆದೇಶವಿದೆ. ಚಿಕ್ಕೋಡಿ ವಲಯದ ಡಿಡಿಪಿಐ ಮತ್ತು ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಧ್ವಜ ಸಂಹಿತೆಯಂತೆ ಧ್ವಜಾರೋಹಣ ನೆರವೇರಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತೆ ಸೂಚನೆ ನೀಡಲಾಗಿದೆ. ಆದರೆ ಧ್ವಜಾರೋಹಣ ಎಂದರೆ ರಾಷ್ಟ್ರಧ್ವಜವೋ ಅಥವಾ ನಾಡಧ್ವಜವೋ ಎಂಬ ಗೊಂದಲ ಸೃಷ್ಟಿಯಾಗಿದೆ. ಒಂದು ವೇಳೆ ನಾಡಧ್ವಜ ಹಾರಿಸಲೇಬೇಕಾದರೆ ಆ ಧ್ವಜ ಸಹಿತ ಏನು ಮಾಡಬೇಕು. ಎಂತಹ ಧ್ವಜ ಖರೀದಿಸಬೇಕು. ಅಧಿಕೃತ ಧ್ವಜಗಳನ್ನು ತರುವುದು ಎಲ್ಲಿಂದ ಇತ್ಯಾದಿ ಮಾಹಿತಿ ಇಲ್ಲದಿವುದರಿಂದ ಶಿಕ್ಷಕರು ಎಂಬ ಗೊಂದಲದಲ್ಲಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಇಲ್ಲವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ಪಷ್ಟ ಆದೇಶ ನೀಡಬೇಕು ಎಂದು ಕನ್ನಡಪರ ಹೋರಾಟಗಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ.ಎಲ್ಲ ಶಾಲಾ ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ಆಚರಿಸಲು ಸರ್ಕಾರ ಸೂಚನೆ ನೀಡಿದ್ದು, ಆದರೆ ಧ್ವಜಾರೋಹಣದ ಬಗ್ಗೆ ಇರುವ ಗೊಂದಲವನ್ನು ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ತಹಸೀಲ್ದಾರ್ ಅವರ ಜೊತೆಗೆ ಚರ್ಚಿಸಿ ಎಲ್ಲ ಶಾಲೆಯ ಮುಖ್ಯಸ್ಥರಿಗೆ ತಿಳಿಸುತ್ತೇವೆ.
-ಎಂ.ಬಿ. ಮೊರಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಥಣಿ