ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಅಂತರ್ಜಲ ಅಭಿವೃದ್ಧಿಗೆ ಕೆರೆಗಳನ್ನು ತುಂಬಿಸಲಾಗುತ್ತಿದ್ದು, ಇದು ತಾತ್ಕಲಿಕ ಪರಿಹಾರವಾಗಿದೆ. ಆದರೆ ಅವಿಭಜಿತ ಜಿಲ್ಲೆಗೆ ಶಾಶ್ವತವಾದ ಕುಡಿಯುವ ನೀರು ತರದಿದ್ದರೆ ಮುಂದಿನ ಪೀಳಿಗೆಯು ಭವಿಷ್ಯದಲ್ಲಿ ಎಲ್ಲಾ ರೀತಿಯ ನೋವುಗಳನ್ನು ಅನುಭವಿಸಬೇಕಾಗುತ್ತದೆ ಎಂದು ತುಮಕೂರಿನ ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ ಎಚ್ಚರಿಸಿದರು.ತಾಲೂಕಿನ ವೇಮಗಲ್ ಹೋಬಳಿ ಮಟ್ಟದಲ್ಲಿ ಒಕ್ಕಲಿಗರ ಸಂಘದಿಂದ ಕೆಂಪೇಗೌಡರ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದರು.ಕೋಲಾರ- ಚಿಕ್ಕಬಳ್ಳಾಪುರ ಅವಿಭಜಿತ ಜಿಲ್ಲೆಗೆ ಶುದ್ಧವಾದ ಕುಡಿಯುವ ನೀರು ಒದಗಿಸಲು ಕಳೆದ ಎರಡೂವರೆ ದಶಕದಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿದ್ದರೂ ಸಹ ಸರ್ಕಾರವೂ ನಿರ್ಲಕ್ಷಿಸಿ ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಹರಿಸುತ್ತಿರುವುದು ಶಾಶ್ವತ ಪರಿಹಾರವಲ್ಲ. ಕೂಡಲೇ ಶುದ್ಧ ಕುಡಿಯುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತಂದು ಶುದ್ಧವಾದ ಕುಡಿಯುವ ನೀರನ್ನು ದೊರಕಿಸುವಂತೆ ಜನಪ್ರತಿನಿಧಿಗಳು ಸರ್ಕಾರದ ಮೇಲೆ ನಿರಂತರವಾದ ಒತ್ತಡಗಳನ್ನು ಹಾಕಬೇಕೆಂದು ಆಗ್ರಹಿಸಿದರು.ನಾಡಪ್ರಭು ಕೆಂಪೇಗೌಡರು ಭವಿಷ್ಯದ ದೊರದೃಷ್ಟಿ ಇಟ್ಟುಕೊಂಡು ಬೆಂಗಳುರು ನಗರ ನೀರಿನ ಆಸರೆಗಾಗಿ ನೂರಾರು ಕೆರೆಕಟ್ಟೆಗಳನ್ನು ನಿರ್ಮಿಸಿರುವುದನ್ನು ಸರ್ಕಾರವು ಮಾದರಿಯಾಗಿ ಪರಿಗಣಿಸಬೇಕು. ಹೊರತಾಗಿ ಕೆರೆಕಟ್ಟೆಗಳನ್ನು ಕಬಳಿಸಲು ಅವಕಾಶ ನೀಡದೆ ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.ಆದಿ ಚುಂಚನ ಗಿರಿ ಶ್ರೀಕ್ಷೇತ್ರದ ಪೀಠಾಧ್ಯಕ್ಷರಾದ ಡಾ. ನಿರ್ಮಾಲನಂದನಾಥ ಸ್ವಾಮೀಜಿ ಆಶೀರ್ವಾಚನ ನೀಡಿ, ಸಮಾಜಕ್ಕೆ ಆದರ್ಶಪ್ರಾಯ ಗಣ್ಯರು ಇಲ್ಲದೆ ಹೋದರೆ ಸಮಾಜ ವಿಕಸಿತವಾಗದು. ಈ ನಿಟ್ಟಿನಲ್ಲಿ ಕೆಂಪೇಗೌಡರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಮೈಗೊಡಿಸಿಕೊಂಡಾಗ ಅರ್ಥಪೂರ್ಣವಾಗುವುದು ಎಂದರು.ಅಕ್ಬರ್, ಗಜನಿ ಮಹ್ಮದ್ ಮತ್ತು ವಿದೇಶದ ವೈಸರಾಯ್ ಇವರು ಬಗ್ಗೆ ನಮ್ಮ ಮಕ್ಕಳಿಗೆ ಪಠ್ಯಗಳಲ್ಲಿ ತಿಳಿಸುವ ವ್ಯವಸ್ಥೆಗಳಿದೆ. ಆದರೆ ತಮ್ಮದೇ ಛಾಪು ಮೂಡಿಸಿರುವಂತ ನಾಡಪ್ರಭುಗಳಾದ ಕೆಂಪೇಗೌಡರಂತ ದೇಶಿಯ ರಾಜರ ಇತಿಹಾಸವನ್ನು ನಮ್ಮ ಮಕ್ಕಳಿಗೆ ಅರಿವು ಮೂಡಿಸುವಲ್ಲಿ ವಿಫಲರಾಗಿದ್ದೇವೆಂದು ವಿಷಾದಿಸಿದರು.ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಬೆಂಗಳೂರು ಪೂರ್ವ ವಲಯದ ಡಿ.ಜಿ.ಪಿ ದೇವರಾಜ್, ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್, ಕುರ್ಕಿ ರಾಜೇಶ್ವರಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಬೆಗ್ಲಿ ಸೂರ್ಯಪ್ರಕಾಶ್, ನಾಗನಾಳ ಸೋಮಣ್ಣ, ಲಕ್ಷ್ಮಣಗೌಡ, ವಕ್ಕಲೇರಿ ರಾಮು, ಮುನಿರಾಜು, ಸಿ.ಡಿ.ರಾಮಚಂದ್ರ ಇದ್ದರು.