ಸಾರಾಂಶ
ಹುಬ್ಬಳ್ಳಿ:
ನಗರದಲ್ಲಿ ನಡೆಯುತ್ತಿರುವ ಹತ್ಯೆ, ಅತ್ಯಾಚಾರದಂತಹ ಘಟನೆಗಳಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಈ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ತರಬೇಕೆಂದು ಶುಕ್ರವಾರ ಶ್ರೀರಾಮಸೇನೆ ನಗರದಲ್ಲಿ ಪ್ರತಿಭಟನೆ ನಡೆಸಿತು.ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಶ್ರೀರಾಮಸೇನೆ, ರಾಜ್ಯದಲ್ಲಿ ಐದಾರು ತಿಂಗಳಿಂದ ಆಶಾಂತಿ ತಾಂಡವಾಡುತ್ತಿದೆ. ಕೊಲೆ, ಸುಲಿಗೆ, ಅತ್ಯಾಚಾರ, ಮಾರಣಾಂತಿಕ ಹಲ್ಲೆ, ಗುಂಡಾಗಿರಿ, ಮಾದಕವಸ್ತು ಮಾರಾಟ ಇತ್ಯಾದಿ ನಿರಂತರವಾಗಿ ನಡೆಯುತ್ತಿದೆ. ಇವರಿಗೆ ದೇಶದ ಕಾನೂನು, ಪೊಲೀಸರು, ಸರ್ಕಾರದ ಭಯವಿಲ್ಲದೇ ಸಮಾಜಘಾತಕರ ಅಟ್ಟಹಾಸ ಎಗ್ಗಿಲ್ಲದೇ ನಡೆಯುತ್ತಿದೆ. ಇದೆಲ್ಲವನ್ನು ನೋಡಿಯೂ ನೋಡದ ಹಾಗೆ ಪರೋಕ್ಷವಾಗಿ ಬೆಂಬಲಿಸುವ ರೀತಿ ರಾಜ್ಯ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಮಹಿಳೆಯರು ಕೈಯಲ್ಲಿ ಜೀವ ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿಯಲ್ಲಿ 1 ತಿಂಗಳೊಳಗೆ ಇಬ್ಬರು ಯುವತಿಯರ ಕೊಲೆ ಹಾಗೂ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮೇಲೆ ಬರ್ಬರ ಹಲ್ಲೆ, ಯುವತಿಯರ ಅಪಹರಣ ನಿಜಕ್ಕೂ ಬೆಚ್ಚಿ ಬೀಳಿಸಿವೆ. ಈ ಹಿನ್ನೆಲೆಯಲ್ಲಿ ತಾವು ಪರಿಸ್ಥಿತಿಯ ಗಂಭೀರತೆ ಅರಿತು ತುರ್ತು ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಲು ಆಗ್ರಹಿಸುವುದಾಗಿ ತಿಳಿಸಿದರು.ಈ ವೇಳೆ ರಾಜಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ಕಾಟಕರ್, ತಾಲೂಕು ಅಧ್ಯಕ್ಷ ಬಸು ದುರ್ಗದ, ನಗರ ಅಧ್ಯಕ್ಷ ಬಸವರಾಜ ಗೌಡರ, ಪ್ರವೀಣ ಮಾಳದಕರ, ಗುಣಧರ ದಡೋತಿ, ವಿಜಯ ದೇವರಮನಿ, ನಾಗರಾಜ ಸೌತೆಕಾಯಿ, ನಾಗರಾಜ ಹುರಕಡ್ಲಿ ಸೇರಿದಂತೆ ಹಲವರಿದ್ದರು.ಜೈ ಭೀಮ್ ಯುವ ಸಂಘದಿಂದ ಮನವಿ
ಅಂಜಲಿ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಶುಕ್ರವಾರ ಜೈ ಭೀಮ್ ಯುವ ಸಂಘದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡರು, ಅಮಾಯಕ ಯುವತಿಯನ್ನು ಚಾಕುವಿನಿಂದ ಹಿರಿದು ಹತ್ಯೆ ಮಾಡಿದ ಆರೋಪಿ ಗಿರೀಶನಿಗೆ ಯುಪಿ ಮಾದರಿಯ ಶಿಕ್ಷೆ ನೀಡಬೇಕು. ಅಲ್ಲದೇ ಈ ಆರೋಪಿಗೆ ನೀಡುವ ಶಿಕ್ಷೆ ಇಂತಹ ಕೃತ್ಯಕ್ಕೆ ಕೈಹಾಕುವವರಿಗೆ ಎಚ್ಚರಿಕೆಯ ಗಂಟೆಯಾಗಬೇಕು. ಆದಷ್ಟು ಬೇಗ ಸರ್ಕಾರ ಇವನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಸಂಘಟನೆಯ ಅಧ್ಯಕ್ಷ ಪರಶುರಾಮ ದಾವಣಗೇರಿ, ಉಪಾಧ್ಯಕ್ಷ ರಾಜು ತೇರದಾಳ ಸೇರಿದಂತೆ ಹಲವರಿದ್ದರು.