ಕಾನೂನು ಬಾಹಿರ ಕೃತ್ಯಗಳನ್ನು ಗಮನಕ್ಕೆ ತನ್ನಿ

| Published : Oct 25 2025, 01:00 AM IST

ಸಾರಾಂಶ

ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಭಾಗವಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುರಲೆ ಸಿದ್ದೇಶ್ವರ ಸಮುದಾಯ ಭವನದಲ್ಲಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಶಿವಮೊಗ್ಗ: ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಭಾಗವಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುರಲೆ ಸಿದ್ದೇಶ್ವರ ಸಮುದಾಯ ಭವನದಲ್ಲಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ನಿಮ್ಮ ಗ್ರಾಮಗಳಲ್ಲಿ ಹಾಗೂ ನಿಮ್ಮ ಸುತ್ತಮುತ್ತ ಯಾವುದೇ ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿದ್ದಲ್ಲಿ, ಅಂತಹ ವಿಚಾರಗಳನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತರುವುದು ನಿಮ್ಮ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ಈ ಕುರಿತು ನೀವು ಹತ್ತಿರದ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112ಗೆ ಕರೆಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ವಿವರವನ್ನು ಪೊಲೀಸ್ ಇಲಾಖೆಯು ಗೌಪ್ಯವಾಗಿ ಇರಿಸುತ್ತದೆ ಎಂದರು.ಯಾವುದೇ ಅಪರಾಧಗಳು ಜರುಗದಂತೆ ತಡೆಯಲು ಹಾಗೂ ಒಂದು ವೇಳೆ ಯಾವುದೇ ರೀತಿಯ ಅಪರಾಧ ಕೃತ್ಯಗಳು ಜರುಗಿದಲ್ಲಿ ಕೂಡಲೇ ಪತ್ತೆ ಹಚ್ಚುವ ಸಂಬಂಧ ಸಾರ್ವಜನಿಕರು ತಮ್ಮ ಅಂಗಡಿ ಮುಂಗಟ್ಟು ಹಾಗೂ ಮನೆಗಳಲ್ಲಿ ರಸ್ತೆ ಕಾಣುವ ರೀತಿಯಲ್ಲಿ, ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ. ಜೊತೆಗೆ ನಿಮ್ಮ ಗ್ರಾಮದ ಸೂಕ್ಷ್ಮ ಮತ್ತು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ನಿಮ್ಮ ಹಂತದಲ್ಲಿ ಅಳವಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.ಸಮಾಜ ಮತ್ತು ಪೊಲೀಸ್ ಇಲಾಖೆಯ ನಡುವೆ ಇರುವಂತಹ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು ಪೊಲೀಸ್ ಇಲಾಖೆಯ ಎಲ್ಲಾ ಹಂತದ ಅಧಿಕಾರಿ ಹಾಗೂ ಸಿಬ್ಬಂದಿ ನಿರಂತರವಾಗಿ ಶ್ರಮವಹಿಸುತ್ತಾ ದುಡಿಯುತ್ತಿದ್ದಾರೆ. ನಾವೆಲ್ಲರೂ ಒಂದಾಗಿ ಮುನ್ನಡೆದಾಗ ಮಾತ್ರ ಅಪರಾಧ ಮುಕ್ತ ಸಮಾಜ ನಿರ್ಮಿಸಲು ಸಾಧ್ಯವಿದೆ ಎಂದರು.ಮನೆ ಮನೆಗೆ ಪೊಲೀಸ್ ಎಂಬುದು ರಾಜ್ಯ ಸರ್ಕಾರದ ಒಂದು ಮುಖ್ಯವಾದ ಯೋಜನೆಯಾಗಿದೆ. ಈ ಹಿಂದೆ ಗ್ರಾಮಗಳನ್ನು ಬೀಟ್‌ಗಳೆಂದು ವಿಂಗಡಿಸಿಕೊಂಡು, ಬೀಟ್ ವ್ಯವಸ್ಥೆಯ ಮುಖಾಂತರವಾಗಿ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ ಈಗ ಮುಂದುವರಿದು ಪ್ರತಿ ಸಾರ್ವಜನಿಕರ ಮನೆ ಮನೆಗೆ ಪೊಲೀಸ್ ಇಲಾಖೆಯು ತಲುಪಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.ನಂತರ ಪೊಲೀಸ್ ಅಧಿಕ್ಷಕರು, ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿ ಅವರುಗಳ ಸಮಸ್ಯೆಗಳನ್ನು ಆಲಿಸಿ, ಮನೆ ಮನೆಗೆ ಪೊಲೀಸ್‌ ಸ್ಟಿಕರ್‌ಗಳನ್ನು ಅಳವಡಿಸಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಜಿ.ಕಾರ್ಯಪ್ಪ, ಡಿವೈಎಸ್‌ಪಿ ಸಂಜೀವ್ ಕುಮಾರ್, ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಸತ್ಯನಾರಾಯಣ, ಪುರಲೆ, ಚಿಕ್ಕಲ್, ಗುರುಪುರ, ಸಿದ್ದೇಶ್ವರ ನಗರ, ವೆಂಕಟೇಶ ನಗರ, ಹೊಳೆಬೆನವಳ್ಳಿ ಗ್ರಾಮಗಳ ಮುಖಂಡರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.