ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟದ ಶಿಕ್ಷಣ ಅಗತ್ಯ. ಶಿಕ್ಷಣದಿಂದ ಯಾವುದೇ ಮಕ್ಕಳು ವಂಚಿತರಾಗಬಾರದು. ನೆರೆಹೊರೆಯಲ್ಲಿ ಶಿಕ್ಷಣ ವಂಚಿತ ಮಕ್ಕಳು ಕಂಡು ಬಂದಲ್ಲಿ ಅವರನ್ನು ಶಾಲೆಗೆ ಕರೆದುಕೊಂಡು ಬನ್ನಿ ಎಂದು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಯರಗುದ್ರಿ ಹೇಳಿದರು.ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನದ ಆಶಯದಂತೆ ಪ್ರತಿ ಮಗುವು ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ನಮ್ಮ ಬದುಕು ಹಸನಾಗುತ್ತದೆ. ದೇಶದ ಭವಿಷ್ಯವು ಬೆಳಗುತ್ತದೆ. ಹಾಗಾಗಿ ಪಾಲಕರೆಲ್ಲರೂ ಗ್ರಾಮದ ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹೊಣೆಗಾರಿಕೆ ನಿಭಾಯಿಸಬೇಕು ಎಂದು ಹೇಳಿದರು.ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಜ್ಞಾನದಿಂದ ವಿಶ್ವವೇ ಬದಲಾಗುತ್ತದೆ. ಜಗತ್ತನ್ನು ಗೆಲ್ಲುವ ಶಕ್ತಿ ನಮ್ಮ ಮಕ್ಕಳಲ್ಲಿದೆ. ಪಾಲಕರು ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳಿಸಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರೊಂದಿಗೆ ಕೈಜೋಡಿಸಿ ಅವರ ಭವಿಷ್ಯ ಉಜ್ಜಲವಾಗಲು ನೆರವಾಗಬೇಕು ಎಂದರು.
ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ರಂಗೋಲಿ ಬಿಡಿಸಿ, ಪ್ರತಿ ವಿದ್ಯಾರ್ಥಿಗೆ ಗುಲಾಬಿ ಹೂ ನೀಡಿ, ಆರತಿ ಬೆಳಗಿ ಬರಮಾಡಿಕೊಂಡು, ಸಿಹಿ ವಿತರಿಸಲಾಯಿತು.ಎಸ್‌ಡಿಎಂಸಿ ಉಪಾಧ್ಯಕ್ಷ ಪರಶುರಾಮ ಹೊಸಮನಿ, ಸದಸ್ಯ ಜಟ್ಟಪ್ಪ ನಡುವಿನಮನಿ,ಮುಖ್ಯ ಶಿಕ್ಷಕಿ ವ್ಹಿ. ವೈ ಪತ್ತಾರ,ಶಿಕ್ಷಕ ಸಂತೋಷ ಬಂಡೆ, ಎಸ್ ಎಸ್. ಅರಬ, ಎಸ್ ಎಂ ಪಂಚಮುಖಿ, ಎಸ್ ಡಿ ಬಿರಾದಾರ, ಎಸ್. ಬಿ ಕುಲಕರ್ಣಿ, ಜೆ .ಎಂ ಪತಂಗಿ, ಸಾವಿತ್ರಿ ಸಂಗಮದ, ಎನ್ .ಬಿ ಚೌಧರಿ, ಎಸ್. ಪಿ ಪೂಜಾರಿ, ಎಸ್. ಎನ್ ಡಂಗಿ, ಜೆ. ಸಿ ಗುಣಕಿ, ಎಸ್. ವ್ಹಿ ಬೇನೂರ, ಎಫ್ .ಎ ಹೊರ್ತಿ, ಶಾಂತೇಶ ಹಳಗುಣಕಿ, ಸುರೇಶ ದೊಡ್ಯಾಳಕರ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.