ಸಾರಾಂಶ
ಮುಂಡರಗಿ: ನಮ್ಮ ಹೆಣ್ಣು ಮಕ್ಕಳನ್ನು ವೈದ್ಯ, ಎಂಜಿನೀಯರ್ ಮಾಡುವ ಬದಲು ಕಿತ್ತೂರು ರಾಣಿ ಚೆನ್ನಮ್ಮನಂತೆ ಧೈರ್ಯ, ಸ್ಥೈರ್ಯ ಹೊಂದಿರುವಂತಹ ಹೆಣ್ಣು ಮಕ್ಕಳನ್ನಾಗಿ ಮಾಡೋಣ ಎಂದು ವೀರಶೈವ ಪಂಚಮಸಾಲಿ ಮಹಿಳಾ ಘಟಕದ ರಾಜ್ಯ ಅಧ್ಯಕ್ಷ ವಸಂತಾ ಹುಲ್ಲತ್ತಿ ಹೇಳಿದರು.
ಅವರು ಗುರುವಾರ ಮುಂಡರಗಿ ಪಟ್ಟಣ ಕಿತ್ತೂರ ರಾಣಿ ಚೆನ್ನಮ್ಮ ಸಮುದಾಯ ಭವನದ ಜಾಗೆಯಲ್ಲಿ ಮುಂಡರಗಿ ಶಹರ ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಸಂಘದ ವತಿಯಿಂದ ಜರುಗಿದ ವೀರರಾಣಿ ಕಿತ್ತೂರು ಚೆನ್ನಮ್ಮ 247ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಹರ ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಸಂಘ ಉದ್ಘಾಟಿಸಿ ಮಾತನಾಡಿದರು.ಬ್ರೀಟಿಷರನ್ನು ತನ್ನ ಧೈರ್ಯ,ಸಾಹಸಗಳಿಂದ ಹಿಮ್ಮೆಟ್ಟಿಸಿದ ಪ್ರಥಮ ಮಹಿಳಾ ಹೋರಾಟಗಾರ್ತಿ ಕಿತ್ತೂರು ಚೆನ್ನಮ್ಮಳ ಆದರ್ಶ ನಮಗೆ ದಾರಿದೀಪವಾಗಬೇಕು.
51 ವರ್ಷದಲ್ಲಿ ಚೆನ್ನಮ್ಮ ಅಪಾರ ಸಾಧನೆ ಮಾಡುವ ಮೂಲಕ ಇಂದಿನ ಮಹಿಳೆಯರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಮಹಿಳೆಯರು ತಮ್ಮ ಕುಟುಂಬ ಜತೆಗೆ ಸಮಾಜದ ಕೆಲಸಕ್ಕೂ ಸಮ ಸಮವಾಗಿ ತೊಡಗಿಕೊಳ್ಳಬೇಕು. ಮನೆ ಗೆದ್ದು ಮಾರು ಗೆಲ್ಲಬೇಕು. ನಮ್ಮ ಮಕ್ಕಳಿಗೆ ಅಕ್ಷರ ಕಲಿಸುವುದರ ಜತೆಗೆ ಉತ್ತಮ ಸಂಸ್ಕಾರ ನೀಡಬೇಕಾಗಿದೆ ಎಂದರು.ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ರಾಜ್ಯ ಪಂಚಮಸಾಲಿ ಸಮಾಜದ ಅಧ್ಯಕ್ಷ ಸೋಮನಗೌಡ ಮಾಲಿಪಾಟೀಲ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಏರ್ಪಡುತ್ತಿದ್ದು, ಪಂಚಮಸಾಲಿ ಸಮಾಜದ ಮಕ್ಕಳು, ಯುವಕರು ಉನ್ನತ ಹುದ್ದೆ ಪಡೆಯುವಂತಾಗಲು ಅವರಿಗೆ ಅದಕ್ಕೆ ಪೂರಕವಾಗುವಂತಹ ಕಾರ್ಯಕ್ರಮ ರಾಜ್ಯ ಘಟಕ ಹಮ್ಮಿಕೊಳ್ಳುವ ಯೋಜನೆ ಹೊಂದಿದ್ದು, ಅದಕ್ಕೆ ಸಮಾಜದ ಆಯಾ ತಾಲೂಕಿನ ಘಟಕದವರ ಸಹಕಾರ ಅವಶ್ಯವಾಗಿದೆ ಎಂದರು.
ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಮಾತನಾಡಿ, ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರದ ಅವಶ್ಯಕತೆ ಇದ್ದು, ಸಮಾಜಮುಖಿಯಾಗಿ ಬೆಳೆಯುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ. ಇದು ಮಹಿಳೆಯರಿಂದ ಹೆಚ್ಚು ಸಾಧ್ಯವಾಗುತ್ತದೆ ಎಂದರು.ಚೈತನ್ಯ ಗ್ರಾಮೀಣಾಭಿವೃದ್ಧಿ ಮತ್ತು ಶೈಕ್ಷಣಿಕ ಸಂಸ್ಥೆ ಅಧ್ಯಕ್ಷೆ ವೀಣಾ ಪಾಟೀಲ ಚೆನ್ನಮ್ಮಳ ಜೀವನ ಸಾಧನೆ ಮತ್ತು ಈಗಿನ ಮಹಿಳೆಯರ ಸಮಾಜದ ಬಗ್ಗೆ ಇರುವ ಕಳಕಳಿ ಮತ್ತು ಕಾರ್ಯನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.
ಶಹರ ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಹೊಟ್ಟೀನ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ರಾಜ್ಯ ಉಪಾಧ್ಯಕ್ಷ ಎಫ್.ಎಂ. ಮರಿಗೌಡ್ರ, ಜಿಲ್ಲಾಧ್ಯಕ್ಷ ಈರಣ್ಣ ಕರಿಬಿಷ್ಟಿ, ತಾಲೂಕಾಧ್ಯಕ್ಷ ಎಸ್.ವಿ. ಪಾಟೀಲ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ರಮೇಶಗೌಡ ಪಾಟೀಲ, ರೇಖಾ ಮೇಟಿ, ಶಕುಂತಲಾ ಗುಡದಪ್ಪನವರ, ಅಶೋಕ ಹಂದ್ರಾಳ, ರಜನೀಕಾಂತ ದೇಸಾಯಿ, ನೇತ್ರಾ ಭಾವಿಹಳ್ಳಿ, ಅನ್ನಪೂರ್ಣ ದೇಸಾಯಿ, ರೇಖಾ ದೇಸಾಯಿ, ಸಿದ್ದಲಿಂಗಪ್ಪ ದೇಸಾಯಿ, ಸೋಮಶೇಖರ ಹಕ್ಕಂಡಿ, ವಿರೇಶ ಹಡಗಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ದೀಪಾ ಹಕ್ಕಂಡಿ ಸ್ವಾಗತಿಸಿದರು, ಶೋಭಾ ಪಾಟೀಲ ನಿರೂಪಿಸಿದರು.