ಸಾರಾಂಶ
ಅಮಾವಾಸ್ಯೆ, ಪಾಡ್ಯ ಪೂಜೆಗೆ ಹೂ, ಹಣ್ಣು, ಕಬ್ಬು, ಬಾಳೆದಿಂಡು ಖರೀದಿ
ಗಜೇಂದ್ರಗಡ: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಬೇಕಾಗುವ ಪೂಜಾ ಪರಿಕರಗಳು, ಹೊಸ ಬಟ್ಟೆ ಹಾಗೂ ಬಂಗಾರ ಖರೀದಿಗೆ ಜನರು ಪಟ್ಟಣಕ್ಕೆ ಆಗಮಿಸುತ್ತಿದ್ದು, ಸ್ಥಳೀಯ ಜೋಡು ರಸ್ತೆ, ಕುಷ್ಟಗಿ ಹಾಗೂ ರೋಣ ರಸ್ತೆಗಳು ಜನಜಂಗುಳಿಯಿಂದ ಕೂಡಿವೆ.ದೀಪಾವಳಿ ಅಮಾವಾಸ್ಯೆ ಮತ್ತು ಪಾಡ್ಯ ಪೂಜೆಗೆ ಬೇಕಾಗುವ ಹೂ, ಹಣ್ಣು, ಕಬ್ಬು, ಬಾಳೆ ದಿಂಡು, ಅಲಂಕಾರಿಕ ವಸ್ತುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸಲು ನೆರೆಯ ತಾಲೂಕು ಹಾಗೂ ಗ್ರಾಮಗಳ ಜನರು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಪೊಲೀಸ್ ಹಾಗೂ ಪುರಸಭೆ ಅಧಿಕಾರಿಗಳ ನಿರಂತರ ಶ್ರಮ ಮತ್ತು ಮುಂಜಾಗ್ರತಾ ಕ್ರಮದಿಂದಾಗಿ ಇಲ್ಲಿನ ಜೋಡು ರಸ್ತೆಯ ಒಂದು ಬದಿಯನ್ನು ಸಂಪೂರ್ಣ ವ್ಯಾಪಾರಕ್ಕೆ ಮೀಸಲಿಟ್ಟಿದ್ದರಿಂದ ಜೋಡು ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆಗೆ ಕಡಿವಾಣ ಬಿದ್ದಿದೆ.ಜೋಡು ರಸ್ತೆಯಲ್ಲಿ ಹಣ್ಣು, ತರಕಾರಿ, ಅಲಂಕಾರಿಕ ವಸ್ತುಗಳು ಮಾರಾಟಕ್ಕೆ ಹಾಗೂ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ಕಬ್ಬು, ಹೂ, ಬಾಳೆ ದಿಂಡು, ಡೈರಿ ಹೂವಿನ ಗಿಡಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ಒಂದು ಜೊತೆ ಬಾಳೆ ದಿಂಡಿಗೆ ೪೦-೬೦ ರು., ಐದು ಕಬ್ಬು ಇರುವ ಒಂದು ಕಟ್ಟಿಗೆ ೮೦-೧೦೦ ರು., ಡೈರಿ ಹೂವಿನ ಗಿಡಗಳಿಗೆ ೧೦-೨೦ ರು., ಒಂದು ಮಳ ಸೇವಂತಿಗೆ ೩೦-೪೦ ರು. ಹಾಗೂ ಐದು ಬಗೆಯ ತಲಾ ಎರಡೆರಡು ಹಣ್ಣುಗಳನ್ನು ೧೦೦-೧೨೦ ರು. ವರೆಗೆ ಮಾರಾಟವಾಗುತ್ತಿದ್ದು ಕಂಡು ಬಂದಿತು.
ಬೆಳಕಿನ ಹಬ್ಬಕ್ಕೆ ಸಂಪ್ರದಾಯ ಮುರಿಯದವರು ಮಾತ್ರ ಪಿಂಗಾಣಿ ಹಣತೆ ಬದಲಾಗಿ ಮಣ್ಣಿನ ಹಣತೆಗಳನ್ನು ಕೊಳ್ಳುತ್ತಿದ್ದರಿಂದ ಮಣ್ಣಿನ ಹಣತೆ ಮಾರುವ ಕುಂಬಾರರು ಮಾತ್ರ ಪ್ರತಿ ವರ್ಷದಂತೆ ಈ ವರ್ಷ ವ್ಯಾಪಾರ ಇಲ್ಲ ಎನ್ನುವುದು ಕೇಳಿ ಬಂತು. ಬಟ್ಟೆ, ಬಂಗಾರದ ಅಂಗಡಿಗಳಲ್ಲಿ ಜನರು ತುಂಬಿದ್ದು ಸಾಮಾನ್ಯವಾಗಿತ್ತು.ದೀಪಾವಳಿ ಹಬ್ಬದ ನಿಮಿತ್ತ ಪೊಲೀಸ್ ಹಾಗೂ ಪುರಸಭೆ ಅಧಿಕಾರಿಗಳು ಪಟ್ಟಣದಲ್ಲಿ ಸುಗಮ ಸಂಚಾರ ಮತ್ತು ವ್ಯಾಪಾರ ವಹಿವಾಟಕ್ಕೆ ತೊಂದರೆಯಾಗದಂತೆ ಅಲ್ಲಲ್ಲಿ ಬ್ಯಾರಿಕೇಡ್‌ಗಳ ಜತೆಗೆ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನೇಮಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಹೀಗಾಗಿ ಶನಿವಾರ ಸಂಜೆಯಿಂದಲೇ ಆರಂಭವಾಗಿರುವ ವ್ಯಾಪಾರ ಭಾನುವಾರ ಬಿರುಸು ಪಡೆದುಕೊಂಡಿದ್ದು, ಸೋಮವಾರ ಸಹ ಜನಜಂಗುಳಿ ಇರಲಿದೆ. ಸ್ಥಳೀಯ ಜೋಡು ರಸ್ತೆಯಲ್ಲಿ ದ್ವಿಚಕ್ರ ವಾಹನ ಹೊರತು ಪಡಿಸಿ ದೊಡ್ಡ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ. ಆದರೂ ಸಹ ಪಟ್ಟಣದಲ್ಲಿ ಪಿಎಸ್‌ಐ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸುಗಮ ಸಂಚಾರವನ್ನು ಯಥಾಸ್ಥಿತಿಯಲ್ಲಿಡಲು ಗಸ್ತು ತಿರುಗುತ್ತಿರುವುದು ಕಂಡು ಬಂದಿತು.
ದೀಪಾವಳಿ ಹಬ್ಬ ಸಂಭ್ರಮದಿಂದ ಸಾರ್ವಜನಿಕರು ಆಚರಿಸಲು ಹಾಗೂ ವಾಹನ ಸವಾರರಿಗೆ ಸುಗಮ ಸಂಚಾರಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಬ್ಬ ಎಂದು ಜೂಜಾಟ ಚಟುವಟಿಕೆಗಳಲ್ಲಿ ತೊಡಗಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಪಿಎಸ್‌ಐ ಸೋಮನಗೌಡ ಗೌಡ್ರ ಹೇಳಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))