ದೀಪಾವಳಿ ಹಬ್ಬದ ವಿಶೇಷ ಖರೀದಿಗಳಲ್ಲಿ ಒಂದಾದ ಹಿಂಡಲಕಾಯಿ ಹಾಗೂ ಮಾವಿನ ಎಲೆಗಳ ತೋರಣಕ್ಕೂ ಉತ್ತಮ ಬೇಡಿಕೆ ಕಂಡುಬಂದಿದೆ. ಈ ಬಾರಿ ಹಿಂಡಲಕಾಯಿ ಬೆಲೆ ಏರಿಕೆಯಾಗಿದ್ದು, 10 ಹಿಂಡಲಕಾಯಿಗಳಿಗೆ ₹50ರ ವರೆಗೆ ಮಾರಾಟವಾಗುತ್ತಿತ್ತು.
ಕಾರವಾರ: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಕಾರವಾರ ನಗರ ಸಜ್ಜಾಗಿದ್ದು, ಹಬ್ಬದ ಖರೀದಿಗಾಗಿ ಭಾನುವಾರವೂ ನಗರದ ಮಾರುಕಟ್ಟೆಯಲ್ಲಿ ಜನಸಾಗರವೇ ಹರಿದುಬಂದಿತ್ತು. ಬೆಳಗ್ಗೆಯಿಂದಲೇ ಆರಂಭವಾದ ಖರೀದಿ ಭರಾಟೆ ಸಂಜೆ ವೇಳೆಗೆ ಮತ್ತಷ್ಟು ಹೆಚ್ಚಾಗಿದ್ದು, ಮಾರುಕಟ್ಟೆಯ ಪ್ರಮುಖ ರಸ್ತೆಗಳು ಜನದಟ್ಟಣೆಯಿಂದ ಕೂಡಿದ್ದವು.ಹಬ್ಬದ ಪೂಜೆಗೆ ಅಗತ್ಯವಾದ ಹೂವು, ಹಣ್ಣುಗಳ ಖರೀದಿಗೆ ಜನರು ಮುಗಿಬಿದ್ದಿದ್ದರು. ಇದರೊಂದಿಗೆ ಮಣ್ಣಿನ ದೀಪಗಳು, ಬಣ್ಣಬಣ್ಣದ ಆಕಾಶಬುಟ್ಟಿಗಳು, ಆಕರ್ಷಕ ವಿದ್ಯುತ್ ದೀಪಗಳು ಹಾಗೂ ಮನೆಗಳ ಅಲಂಕಾರಕ್ಕೆ ಬೇಕಾದ ವಿವಿಧ ಸಾಮಗ್ರಿಗಳ ಖರೀದಿಯೂ ಜೋರಾಗಿತ್ತು. ಸಿಹಿತಿಂಡಿ ಹಾಗೂ ವಿವಿಧ ಬಗೆಯ ತಿನಿಸುಗಳ ಅಂಗಡಿಗಳಲ್ಲಿಯೂ ಗ್ರಾಹಕರು ಖರೀದಿಗೆ ಮುಗಿಬಿದ್ದ ದೃಶ್ಯಗಳು ಹಬ್ಬದ ಅಬ್ಬರವನ್ನು ತೋರಿಸುವಂತಿತ್ತು.
ದೀಪಾವಳಿ ಹಬ್ಬದ ವಿಶೇಷ ಖರೀದಿಗಳಲ್ಲಿ ಒಂದಾದ ಹಿಂಡಲಕಾಯಿ ಹಾಗೂ ಮಾವಿನ ಎಲೆಗಳ ತೋರಣಕ್ಕೂ ಉತ್ತಮ ಬೇಡಿಕೆ ಕಂಡುಬಂದಿದೆ. ಈ ಬಾರಿ ಹಿಂಡಲಕಾಯಿ ಬೆಲೆ ಏರಿಕೆಯಾಗಿದ್ದು, 10 ಹಿಂಡಲಕಾಯಿಗಳಿಗೆ ₹50ರ ವರೆಗೆ ಮಾರಾಟವಾಗುತ್ತಿತ್ತು.ಹೂವು ಮತ್ತು ಹಣ್ಣುಗಳ ಬೆಲೆಯಲ್ಲಿಯೂ ಏರಿಕೆ ಕಂಡುಬಂದಿದ್ದರೂ, ಹಬ್ಬದ ಸಂಭ್ರಮಕ್ಕೆ ಯಾವುದೇ ಕೊರತೆಯಾಗದಂತೆ ಜನರು ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು. ಸೇವಂತಿ, ಮಲ್ಲಿಗೆ ಹಾಗೂ ಚೆಂಡುಹೂವಿನ ಮಾರುದ್ದದ ಹಾರಗಳು ₹150ರಿಂದ ₹250ರ ವರೆಗೆ ಮಾರಾಟವಾಗುತ್ತಿದ್ದವು.
ಇನ್ನು ಸೇಬು ಹಣ್ಣು ಕೆಜಿಗೆ ₹150ರಿಂದ ₹250ರ ಆಸುಪಾಸಿನಲ್ಲಿದ್ದರೆ, ದಾಳಿಂಬೆ ಹಣ್ಣಿಗೆ 200ರ ವರೆಗೆ ದರ ನಿಗದಿಯಾಗಿತ್ತು. ಉಳಿದಂತೆ ಸಿಹಿತಿನಿಸುಗಳಲ್ಲಿ ರವೆ, ಬೂಂದಿ ಲಾಡುಗಳಿಗೆ ಭಾರೀ ಬೇಡಿಕೆ ಕಂಡುಬಂದಿದ್ದು, ಕೆಜಿಗೆ ₹250ರಿಂದ ₹300ರ ವರೆಗೆ ದರವಿದ್ದರೆ, ತುಪ್ಪದ ಜಿಲೇಬಿಗಳನ್ನೂ ಹೆಚ್ಚಿನ ಜನರು ಹಬ್ಬಕ್ಕೆಂದು ಖರೀದಿ ಮಾಡುತ್ತಿದ್ದ ದೃಶ್ಯಗಳು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿತ್ತು.ಈ ಬಾರಿ ಹಾಲು, ತುಪ್ಪ, ಮೊಸರು ಸೇರಿದಂತೆ ಹೂವು- ಹಣ್ಣುಗಳ ಬೆಲೆಗಳಲ್ಲಿಯೂ ಏರಿಕೆ ಕಂಡುಬಂದಿದ್ದರೂ ಜನರು ವರ್ಷದ ಕೊನೆಯ ಅತಿ ದೊಡ್ಡ ಹಬ್ಬವಾದ ಹಿನ್ನೆಲೆ ಸಂಪ್ರದಾಯದಂತೆ ಹಬ್ಬದ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ.