ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಸೋಮವಾರ ನಡೆದ ಮತದಾನದಲ್ಲಿ ಶೇ.84.26 ಮತ ಚಲಾವಣೆಯಾಗಿದ್ದು, ಶಿಕ್ಷಕರ ಕ್ಷೇತ್ರದಲ್ಲಿ ಶೇ. 92.15 ಮತಗಳು ಚಲಾವಣೆಯಾಗಿದೆ.ತಾಲೂಕಿನಲ್ಲಿ 2142 ಮಂದಿ ಪದವೀಧರ ಮತದಾರರು ತಮ್ಮ ಹೆಸರು ನೋಂದಾಯಿಸಿದ್ದು ಅವರಲ್ಲಿ 84.26 ಸರಾಸರಿಯಲ್ಲಿ1805 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ನೈರುತ್ಯ ಕ್ಷೇತ್ರದ ಶಿಕ್ಷಕರ ಚುನಾವಣೆಗೆ ತಾಲೂಕಿನಲ್ಲಿ 408 ಮತದಾರರಿದ್ದು, ಅವರಲ್ಲಿ 376 ಜನ ಮತದಾನ ಮಾಡಿದ್ದಾರೆ.
ತಾಲೂಕು ಕಚೇರಿಯಲ್ಲಿ ನಿರ್ಮಿಸಲಾಗಿದ್ದ ಪದವೀಧರ ಕ್ಷೇತ್ರದ 61 ಮತ್ತು 61ಎ ಸಂಖ್ಯೆಯ ಎರಡು ಮತದಾನ ಕೇಂದ್ರಗಳನ್ನು ನಿರ್ಮಿಸಲಾಗಿತ್ತು. ಹಾಗೂ ಒಂದು ಶಿಕ್ಷಕರ ಮತದಾನ ಕೇಂದ್ರ ಸ್ಥಾಪಿಸಲಾಗಿತ್ತು. ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬೆಳಗ್ಗಿನಿಂದಲೇ ಮತದಾನ ಕೇಂದ್ರದಲ್ಲಿ ಉದ್ದನೆಯ ಸಾಲು ನಿರ್ಮಾಣವಾಗಿದ್ದು ಚುರುಕಿನ ಮತದಾನ ನಡೆದಿದೆ.ಈ ಬಾರಿಯೂ ಗೆಲುವು:ಈ ಚುನಾವಣೆಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಶಾಸಕ ಆರಗ ಜ್ಞಾನೇಂದ್ರ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತದಾನ ಕೇಂದ್ರದಲ್ಲಿ ಬೆಳಗಿನಿಂದಲೇ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಹಿಂದಿನಿಂದಲೂ ಗೆಲುವು ಸಾಧಿಸುತ್ತಿದ್ದಾರೆ. ನಮ್ಮ ಪಕ್ಷದ ಇಬ್ಬರು ಅಭ್ಯರ್ಥಿಗಳು ಮೊದಲ ಹಂತದಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಜಯಗಳಿಸಲಿದ್ದಾರೆ. ಈ ಕ್ಷೇತ್ರಗಳು ಬಿಜೆಪಿ ವಶದಲ್ಲಿದ್ದು ಕರಂಬಳ್ಳಿ ಸಂಜೀವ ಶೆಟ್ಟಿ ಮತ್ತು ಡಿ.ಎಚ್. ಶಂಕರಮೂರ್ತಿಈ ಮೊದಲು ಸತತವಾಗಿ ಆಯ್ಕೆಯಾಗುತ್ತಿದ್ದರು ಎಂದರು .
ಆರಂಭದಲ್ಲಿ 61ನೇ ಸಂಖ್ಯೆಯ ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ ಕಾಂಗ್ರೆಸ್ ಪಕ್ಷದ ಉತ್ತರ ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ ಬಿಜೆಪಿಯಲ್ಲಿ ಮತಗಳು ವಿಭಜನೆಯಾಗುವುದರಿಂದ ಈ ಬಾರಿಯ ಚುನಾವಣೆ ಫಲಿತಾಂಶ ಎರಡು ವಿಭಾಗದಲ್ಲಿ ಕಾಂಗ್ರೆಸ್ ಪರವಾಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.-----ಭದ್ರಾವತಿಯಲ್ಲಿ ಬಿರುಸಿನ ಮತದಾನಭದ್ರಾವತಿ: ನೈಋತ್ಯ ಕ್ಷೇತ್ರದ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆ ವೇಳೆ ಮತದಾನ ಕೇಂದ್ರಗಳ ಬಳಿ ಅಭ್ಯರ್ಥಿಗಳ ಪರ ಪಕ್ಷದ ಮುಖಂಡರು, ಕಾರ್ಯಕರ್ತರು ಮತದಾನ ಆರಂಭ ಬೆಳಿಗ್ಗೆ ೮ರಿಂದ ಸಂಜೆ ೪ ರವರೆಗೂ ಮತಯಾಚಿಸಿದರು. ನ್ಯೂಟೌನ್ ಸರ್ಕಾರಿ ಬಾಲಿಕ ಪದವಿ ಪೂರ್ವ ಕಾಲೇಜಿನ ಮತದಾನ ಕೇಂದ್ರದ ಬಳಿ ಎಲ್ಲಾ ಅಭ್ಯರ್ಥಿಗಳ ಮುಖಂಡರು, ಕಾರ್ಯಕರ್ತರು ಹೆಚ್ಚಾಗಿರುವುದು ಕಂಡು ಬಂದಿತು. ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಕ್ಷೇತ್ರದ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಮಾಹಿತಿ ಪಡೆದರು. ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ರಾಜ್ಯ ಪ್ರಕೋಷ್ಠಗಳ ಸಂಯೋಜಕ ದತ್ತಾತ್ರಿ, ಮುಖಂಡರಾದ ಮಂಗೋಟೆ ರುದ್ರೇಶ್, ವಿ. ಕದಿರೇಶ್, ತೀರ್ಥಯ್ಯ, ಜಿ.ಆನಂದ್ ಕುಮಾರ್, ಪದವೀಧರ ಕ್ಷೇತ್ರದ ಚುನಾವಣಾ ಸಂಚಾಲಕ ಕೆ.ಎನ್ ಶ್ರೀಹರ್ಷ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ. ಮಂಡಲದ ಪ್ರಧಾನ ಕಾರ್ಯದರ್ಶಿ ಚನ್ನೇಶ್ ಹಾಗೂ ಅಣ್ಣಪ್ಪ ಸೇರಿ ಇನ್ನಿತರರಿದ್ದರು.