ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ ವತಿಯಿಂದ ಮಂಗಳೂರು, ಉಡುಪಿ, ಮಣಿಪಾಲ ಮತ್ತು ಬೆಂಗಳೂರು ನಗರದ ವಿವಿಧೆಡೆಗಳಲ್ಲಿ ಕಳೆದ ಏಳು ದಿನಗಳಿಂದ ನಡೆದ ಕರ್ನಾಟಕ ಕ್ರೀಡಾಕೂಟ ಗುರುವಾರ ಸಮಾಪನಗೊಂಡಿತು.
ವಾಲಿಬಾಲ್ ಫಲಿತಾಂಶ: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮಹಿಳೆಯರ ವಾಲಿಬಾಲ್ ಫೈನಲ್ ಪಂದ್ಯದಲ್ಲಿ ಉಡುಪಿ ತಂಡಕ್ಕೆ ಚಿನ್ನ, ಮೈಸೂರು ತಂಡಕ್ಕೆ ಬೆಳ್ಳಿ ಹಾಗೂ ಕೊಪ್ಪಳ ತಂಡಕ್ಕೆ ಕಂಚು ಪದಕ ಲಭಿಸಿದೆ. ಪುರುಷರ ವಿಭಾಗದಲ್ಲಿ ಬೆಂಗಳೂರು ಚಿನ್ನ, ಉಡುಪಿ ಬೆಳ್ಳಿ ಹಾಗೂ ಬೆಳಗಾವಿ ತಂಡ ಕಂಚಿನ ಪದಕ ಗಳಿಸಿದೆ. ಖೋಖೋ ಫಲಿತಾಂಶ:ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಪುರುಷರ ಖೋ ಖೋ ಪಂದ್ಯಾಟದಲ್ಲಿ ಬೆಳಗಾವಿ ಹಾಗೂ ಬಾಗಲಕೋಟೆಯ ನಡುವಿನ ಹಣಾಹಣಿಯಲ್ಲಿ ಬೆಳಗಾವಿ 25-19ರ ಅಂತರದಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ ಬೆಳಗಾವಿ ತಂಡದ ರೋಹಿತ್, ನಂದನ್ ಹಾಗೂ ಬಾಗಲಕೋಟೆಯ ರಾಕೇಶ್ ಉತ್ತಮ ಪ್ರದರ್ಶನ ನೀಡಿದರು. ಧಾರವಾಡ ತಂಡ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಮಹಿಳಾ ವಿಭಾಗದಲ್ಲಿ ಬೆಳಗಾವಿ ಹಾಗೂ ಮೈಸೂರು ತಂಡದ ನಡುವಿನ ಹಣಾಹಣಿಯಲ್ಲಿ ಬೆಳಗಾವಿ ತಂಡ 13-12 ರ ಅಂತರದಲ್ಲಿ ಮೈಸೂರು ತಂಡವನ್ನು ಸೋಲಿಸಿತು. ಬೆಳಗಾವಿ ತಂಡದ ನಿಖಿಲಾ ಉತ್ತಮ ಪ್ರದರ್ಶನ ನೀಡಿದರೆ, ಮೈಸೂರು ತಂಡದ ಸ್ವರ್ಣ ಉತ್ತಮ ಪ್ರದರ್ಶನ ನೀಡಿದರು. ಬೆಂಗಳೂರು ಗ್ರಾಮಾಂತರ ತಂಡಕ್ಕೆ ಕಂಚು ಪದಕ ಲಭಿಸಿತು.
ಬಾಸ್ಕೆಟ್ ಬಾಲ್ ಫಲಿತಾಂಶ: ಮಂಗಳೂರಿನ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪುರುಷರ ಬಾಸ್ಕೆಟ್ ಬಾಲ್‌ನಲ್ಲಿ ಬ್ಯಾಂಕ್ ಆಫ್ ಬರೋಡಾ ತಂಡಕ್ಕೆ ಚಿನ್ನ, ಡಿವೈಇಎಸ್ ಬೆಂಗಳೂರು ತಂಡಕ್ಕೆ ಬೆಳ್ಳಿ, ದಕ್ಷಿಣ ಕನ್ನಡ ಜಿಲ್ಲಾ ತಂಡಕ್ಕೆ ಕಂಚು ಲಭಿಸಿದೆ. ಮಹಿಳಾ ವಿಭಾಗದಲ್ಲಿ ಮೌಂಟ್ಸ್ ಸ್ಪೋಟ್ಸ್ ಕ್ಲಬ್ ಬೆಂಗಳೂರು(ಪ್ರ), ಡಿವೈಇಎಸ್ ತಂಡ ಮೈಸೂರು(ದ್ವಿ) ಹಾಗೂ ಡಿವೈಇಎಸ್ ತಂಡ ಮಂಡ್ಯಕ್ಕೆ ಕಂಚು ಲಭಿಸಿದೆ.ಹ್ಯಾಂಡ್‌ಬಾಲ್ ಫಲಿತಾಂಶ:
ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಹ್ಯಾಂಡ್‌ಹಾಲ್ ಪಂದ್ಯದ ಪುರುಷರ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಚಿನ್ನ, ಮೈಸೂರು ಬೆಳ್ಳಿ ಹಾಗೂ ಬೆಂಗಳೂರು ನಗರ ಹಾಗೂ ಎಸ್‌ಡಿಎಂ ಉಜಿರೆ ತಂಡಗಳು ಜೊತೆಯಾಗಿ ಕಂಚಿನ ಪದಕ ಪಡೆದಿದೆ. ಮಹಿಳಾ ವಿಭಾಗದಲ್ಲಿ ಹಾಸನ ಚಿನ್ನ, ಎಸ್‌ಸಿವಿಪಿ ದಾವಣಗೆರೆ ಬೆಳ್ಳಿ, ಚಿತ್ರದುರ್ಗ ಹಾಗೂ ಬೆಂಗಳೂರು ನಗರ ತಂಡ ಜೊತೆಯಾಗಿ ಕಂಚಿನ ಪದಕ ಪಡೆದಿವೆ.