ಸಾರಾಂಶ
- ನಂದಿತಾವರೆ ಸರ್ಕಾರಿ ಶಾಲೆ ಕಾರ್ಯಕ್ರಮದಲ್ಲಿ ಬಿಇಒ ಡಿ.ದುರ್ಗಪ್ಪ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಸಾಮಾಜಿಕ ಹೊಣೆಗಾರಿಕೆಯ ನಿಧಿಯನ್ನು ಶಿಕ್ಷಣ ಇಲಾಖೆಯು ಅಶಕ್ತರು, ಬಡವರು ಮತ್ತು ಮಧ್ಯಮ ವರ್ಗದ ಮಕ್ಕಳಿರುವ ಶಾಲೆಗಳಿಗೆ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರ್ಗಪ್ಪ ಹೇಳಿದರು. ಇಲ್ಲಿಗೆ ಸಮೀಪದ ನಂದಿತಾವರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಾಲ್ಕು ಪ್ರಾಥಮಿಕ ಶಾಲೆಗಳಿಗೆ ಬ್ರೂಕರ್ ಮತ್ತು ಜೀವನ್ ಮುಕ್ತಿ ಫೌಂಡೇಶನ್ ನೀಡಿದ ಗ್ರೀನ್ ಬೋರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬೆಂಗಳೂರು ಮತ್ತು ಬಾಂಬೆಯಲ್ಲಿರುವ ಸಂಸ್ಥೆಗಳು ಕಳೆದ 4 ವರ್ಷಗಳಿಂದ ಸರ್ಕಾರಿ ಶಾಲೆಗಳಿಗೆ ಒಳಾಂಗಣ ಕ್ರೀಡಾ ಪರಿಕರಗಳು, ಶೌಚಾಲಯ, ನಲಿ-ಕಲಿ ಸಾಮಗ್ರಿಗಳು, ಬ್ಯಾಕ್, ನೋಟ್‌ಬುಕ್‌ಗಳನ್ನು ನೀಡುತ್ತಿವೆ. ಇದರಿಂದ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚುವಲ್ಲಿ ಪ್ರೋತ್ಸಾಹ ನೀಡುತ್ತಿವೆ ಎಂದರು.
ಬಡಮಕ್ಕಳು ಅಭ್ಯಾಸ ಮಾಡುತ್ತಿರುವ ಶಾಲೆಗಳಿಗೆ ಅಗತ್ಯತೆಗಳನ್ನು ಪೂರೈಸಲು ಖಾಸಗಿ ಸಂಸ್ಥೆಗಳು ನೆರವಾಗುತ್ತಿವೆ. ಗ್ರೀನ್ ಬೋರ್ಡ್‌ಗಳ ಸೌಲಭ್ಯ ನೀಡಿ, ಶಿಕ್ಷಕರ ಸೀಮೆಸುಣ್ಣದ ಪುಡಿಯಿಂದ ಆಗುತ್ತಿದ್ದ ಅಲರ್ಜಿಯನ್ನು ದೂರ ಮಾಡಲಾಗಿದೆ. ಅಲ್ಲದೇ, ಮಕ್ಕಳಲ್ಲಿ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಸ್ಪಂದಿಸುತ್ತಿರುವುದು ಸಂತಸದ ವಿಷಯ ಎಂದರು.ಜೀವನ್‌ಮುಕ್ತಿ ಸಂಸ್ಥೆಯ ರೂಪಶ್ರೀ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮನಗಂಡು ನಾಲ್ಕು ಶಾಲೆಗಳಿಗೆ ಗ್ರೀನ್ ಬೋರ್ಡ್‌ಗಳನ್ನು ನೀಡಿದ್ದು ತಲಾ ಬೋರ್ಡ್ ೨೦ ವರ್ಷ ಬಾಳಿಕೆ ಬರುತ್ತದೆ. ಹಾಳು ಮಾಡದೇ ಬಳಸಿಕೊಳ್ಳಿ ಎಂದರು.
ಬ್ರೂಕರ್ ಸಂಸ್ಥೆಯ ಜವೇರಿಯಾ ಫರ್ನಾಸ್ ಮಾತನಾಡಿ, ಮೌಲ್ಯಯುತ ನಾಗರೀಕರಾಗಲು ಶಾಲೆಗಳಲ್ಲಿ ದೊರಕುವ ಶಿಕ್ಷಣ ಸ್ಫೂರ್ತಿಯಾಗಲಿದೆ. ವಿದ್ಯಾರ್ಥಿಗಳು ಶ್ರದ್ಧೆ, ಕುತೂಹಲದಿಂದ ಉತ್ತಮ ಶಿಕ್ಷಣ ಪಡೆದು, ಬೇರೆಯವರ ದುಃಖ ಮತ್ತು ನೋವುಗಳಿಗೂ ಸ್ಪಂದಿಸುವ ಮನೋಭಾವ ಹೊಂದಬೇಕು ಎಂದರು.ಸಾಲಕಟ್ಟೆ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಆರ್.ಆರ್. ಮಠ್ ಮಾತನಾಡಿ, ಗ್ರಾಮೀಣ ಪ್ರದೇಶಗಳ ಮಕ್ಕಳ ಸ್ಥಿತಿಯನ್ನು ಮನಗಂಡು ಬ್ರೂಕರ್ ಮತ್ತು ಜೀವನ್‌ಮುಕ್ತಿ ಸಂಸ್ಥೆಗಳು ಹಸಿರು ಬೋರ್ಡ್‌ಗಳ ಸವಲತ್ತು ನೀಡುತ್ತಿರುವುದು ಸಂತೋಷದ ಸಂಗತಿ. ಶಾಲೆ ಮತ್ತು ಸಂಸ್ಥೆಗಳ ಮಧ್ಯೆ ಕೊಂಡಿಯಾಗಿರುವ ಶಿಕ್ಷಕ ಶರಣ್‌ಕುಮಾರ್ ಹೆಗ್ಡೆ ಮತ್ತು ತಂಡದ ಕಾರ್ಯ ಶ್ಲಾಘನೀಯ ಎಂದರು.
ನಿವೃತ್ತ ಶಿಕ್ಷಕ ಕೊಟ್ರೇಶ್, ಸಂಸ್ಥೆಗಳ ಪದಾಧಿಕಾರಿಗಳಾದ ಪ್ರವೀಣ್ ಸುಂಕಾರಿ, ನೋಯಲ್ ಕೊರಿಯಾ, ಮಂತ್ರಿ ದಿಕ್ಷಮ್, ರೂಪ, ಶ್ರಮಜಿತ್, ಪೂಜಾ, ಪವಿತ್ರ, ದೀಪ, ಶಂಕರ್, ಮುಖ್ಯ ಶಿಕ್ಷಕ ಕೆ.ಭೀರಪ್ಪ, ಶಿಕ್ಷಕ ಸಂಘಟನೆಗಳ ರಾಮನಗೌಡ ಪ್ಯಾಟಿ, ಭೀಮಪ್ಪ, ನೌಕರರ ಸಂಘದ ನಿರ್ದೇಶಕ ಅಶ್ಫಕ್ ಅಹಮದ್, ಮಹೇಶ್ವರಪ್ಪ, ಶಶಿಕುಮಾರ್, ರೇವಣ್ಣ, ಮಲ್ಲಿಕಾರ್ಜುನ್, ಮಂಜಪ್ಪ ಬಿದರಿ, ಸುಧಾ, ಜ್ಯೋತಿ ಮತ್ತಿತರರು ಹಾಜರಿದ್ದರು.- - - -ಚಿತ್ರ೬:ಎಂಬಿಆರ್೧.ಜೆಪಿಜಿ:
ನಂದಿತಾವರೆ ಶಾಲೆಯಲ್ಲಿ ಗ್ರೀನ್‌ಬೋರ್ಡ್ ಸೌಲಭ್ಯ ವಿತರಿಸಲಾಯಿತು.