ಸಾರಾಂಶ
ಪದ್ಮಾವತಿಪುರ ತಾಂಡಾ ನಿವಾಸಿಗಳಾದ ರಕ್ಷಿತಾ ಹನುಮಂತಪ್ಪ ಲಮಾಣಿ ಮತ್ತು ಧನರಾಜ ಹನುಮಂತಪ್ಪ ಲಮಾಣಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು.
ರಾಣಿಬೆನ್ನೂರು: ತಂದೆಯ ಸಾವಿನ ನೋವಿನಲ್ಲೂ ಅಣ್ಣ- ತಂಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.
ತಾಲೂಕಿನ ಪದ್ಮಾವತಿಪುರ ತಾಂಡಾ ನಿವಾಸಿಗಳಾದ ರಕ್ಷಿತಾ ಹನುಮಂತಪ್ಪ ಲಮಾಣಿ ಮತ್ತು ಧನರಾಜ ಹನುಮಂತಪ್ಪ ಲಮಾಣಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು.ಇವರ ತಂದೆ ಹನುಮಂತಪ್ಪ ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಮನೆಯಲ್ಲಿ ತಂದೆ ಮೃತಪಟ್ಟಿದ್ದು ಶೋಕದ ವಾತಾವರಣವಿದ್ದರೂ ಇವರಿಬ್ಬರೂ ನಗರದ ಪರೀಕ್ಷಾ ಕೇಂದ್ರಕ್ಕೆ ತೆರಳಿ ಕೊನೆಯ ಪತ್ರಿಕೆಯಾದ ಹಿಂದಿ ವಿಷಯದ ಪರೀಕ್ಷೆ ಬರೆದಿದ್ದಾರೆ. ಎಲ್ಲ ವಿಷಯಗಳಿಗೂ ತಂದೆಯೇ ಪರೀಕ್ಷಾ ಕೇಂದ್ರದವರೆ ಹೋಗಿ ಮಕ್ಕಳನ್ನು ಡ್ರಾಪ್ ಮಾಡುತ್ತಿದ್ದರು. ಆದರೆ, ಇಂದು ವಿಧಿಯಾಟ ಬೇರೆಯಾಗಿತ್ತು. ಪರೀಕ್ಷೆಯ ಕೊನೆಯ ದಿನ ಬೆಳಗ್ಗೆ ಏಕಾಏಕಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ವಿಷಯ ತಿಳಿದ ಶಿಕ್ಷಣ ಇಲಾಖೆಯ ಸಿಬ್ಬಂದಿ ವಿದ್ಯಾರ್ಥಿಗಳ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ಸಂಪನ್ನಹಾವೇರಿ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಹಿನ್ನೆಲೆ ನಗರ ಸೇರಿದಂತೆ ಜಿಲ್ಲಾದ್ಯಂತ 80 ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ಕೊನೆಯ ವಿಷಯವಾದ ಹಿಂದಿ ಪರೀಕ್ಷೆ ಬಹುತೇಕ ಸುಗಮವಾಗಿ ನಡೆಯಿತು.
ಹಿಂದಿ ವಿಷಯದ ಪರೀಕ್ಷೆಗೆ ಒಟ್ಟು 21,992 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 21,673 ವಿದ್ಯಾರ್ಥಿಗಳು ಹಾಜರಾಗಿದ್ದರು. 319 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಡಿಡಿಪಿಐ ತಿಳಿಸಿದ್ದಾರೆ.ಕಳೆದ ಹಲವು ದಿನಗಳಿಂದ ಜಿಲ್ಲೆಯ 80 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ. ಪರೀಕ್ಷೆ ಯಶಸ್ವಿಗೆ ಸಹಕರಿಸಿದ ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಡಿಡಿಪಿಐ ಸುರೇಶ ಹುಗ್ಗಿ ತಿಳಿಸಿದ್ದಾರೆ.