ಪ್ರಿಯಂಕಾ ಪರ ಸಹೋದರ ರಾಹುಲ್ ಮತಬೇಟೆ

| Published : Apr 27 2024, 01:15 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ: ತಾಲೂಕಿನ ಇಂಗಳಿ, ಹೊಸೂರ, ಯರಗಟ್ಟಿ, ಶಿಂಧಿಹಟ್ಟಿ ಮತ್ತಿತರ ಗ್ರಾಮಗಳಲ್ಲಿ ಬುಧವಾರ ಕಾಂಗ್ರೆಸ್ ಪರ ಯುವ ನಾಯಕ ರಾಹುಲ ಜಾರಕಿಹೊಳಿ ಬಿರುಸಿನ ಮತ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಇಂಗಳಿ, ಹೊಸೂರ, ಯರಗಟ್ಟಿ, ಶಿಂಧಿಹಟ್ಟಿ ಮತ್ತಿತರ ಗ್ರಾಮಗಳಲ್ಲಿ ಬುಧವಾರ ಕಾಂಗ್ರೆಸ್ ಪರ ಯುವ ನಾಯಕ ರಾಹುಲ ಜಾರಕಿಹೊಳಿ ಬಿರುಸಿನ ಮತ ಪ್ರಚಾರ ನಡೆಸಿದರು.ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಪರ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಮಿಂಚಿನ ಸಂಚಾರ ನಡೆಸಿ ಮತ ಯಾಚಿಸಿದರು. ರಾಹುಲ್ ಹೋದಲೆಲ್ಲ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಮಹಿಳೆಯರು ಆರತಿ ಎತ್ತಿ ಬರಮಾಡಿಕೊಂಡರು. ಹುಕ್ಕೇರಿ ತಾಲೂಕಿನ ಹಳ್ಳಿಗಳಲ್ಲಿ ಕಾಂಗ್ರೆಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಹೊಸೂರ ಗ್ರಾಮದಲ್ಲಿ ನಡೆದ ಮತ ಪ್ರಚಾರದಲ್ಲಿ ರಾಹುಲ್ ಜಾರಕಿಹೊಳಿ ಮಾತನಾಡಿ, ಕೇಂದ್ರ ಸರ್ಕಾರದ ಜನವಿರೋಧಿ ನೀತಿ, ಗಲಭೆ, ಕೋಮು ದ್ವೇಷ, ಭೃಷ್ಟಾಚಾರ, ನೋಟ್ ಬ್ಯಾನ್, ಜಿಎಸ್‌ಟಿ, ಬೆಲೆ ಏರಿಕೆ ಮತ್ತಿತರ ಕಾರಣಕ್ಕೆ ಜನ ಬೇಸತ್ತಿದ್ದಾರೆ. ಹಾಗಾಗಿ ಈ ಲೋಕಸಭೆ ಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಪ್ರಿಯಂಕಾ ಅವರನ್ನು ಗೆಲ್ಲಿಸಲು ಎಲ್ಲ ಸಮುದಾಯದವರು ಸ್ವಯಂ ಆಗಿ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು.ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಜಾತಿ-ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರಿಗೆ ಈಗಾಗಲೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಅದೇ ಮಾದರಿಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ನಿರ್ಧರಿಸಿದ್ದು, ಹುಕ್ಕೇರಿ ವಿಧಾನಸಭೆ ಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಲೀಡ್ ಖಚಿತ ಎಂದರು.ಕೆಪಿಸಿಸಿ ಸಂಯೋಜಕ ರಾಜಶೇಖರ ಮೆಣಸಿನಕಾಯಿ, ಮಾಜಿ ಸಚಿವ ಶಶಿಕಾಂತ ನಾಯಿಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ, ಮುಖಂಡರಾದ ಭೀಮಪ್ಪ ರಾಮಗೋನಟ್ಟಿ, ರಾಜು ಸಿದ್ನಾಳ, ಶಂಕರ ಹೆಗಡೆ, ರಿಷಭ ಪಾಟೀಲ, ಕೆ.ವೆಂಕಟೇಶ, ಶಾನೂಲ್ ತಹಸೀಲ್ದಾರ್‌ ಮತ್ತಿತರರು ಉಪಸ್ಥಿತರಿದ್ದರು.