ಮನೆ ಮುಂದೆ ಹಾದು ಹೋಗಿರುವ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಅಕ್ಕ-ತಮ್ಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಾನುಕುಂಟೆ ಠಾಣೆ ವ್ಯಾಪ್ತಿಯ ಅಡ್ಡೆ ವಿಶ್ವನಾಥಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
-ಲೋಹದ ಅಳತೆ ಟೇಪ್ ಎಸೆದಿದ್ದರಿಂದ ಅವಘಡ । ಮನೆ ಮಾಲೀಕ, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕೇಸ್ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆ ಮುಂದೆ ಹಾದು ಹೋಗಿರುವ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಅಕ್ಕ-ತಮ್ಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಾನುಕುಂಟೆ ಠಾಣೆ ವ್ಯಾಪ್ತಿಯ ಅಡ್ಡೆ ವಿಶ್ವನಾಥಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಅಡ್ಡೆ ವಿಶ್ವನಾಥಪುರ ನಿವಾಸಿ ಕೊಟ್ರೇಶಿ ಮತ್ತು ಸುಧಾ ದಂಪತಿ ಪುತ್ರಿ ಸಾನ್ವಿ(13) ಮತ್ತು ಆಕೆಯ ತಮ್ಮ ಅಯಾನ್(5) ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಮನೆ ಮಾಲೀಕರು ಮತ್ತು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮಕ್ಕಳ ಪಾಲಕರು ಆರೋಪಿಸಿ ದೂರು ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕೊಟ್ರೇಶ್ ಮತ್ತು ಸುಧಾ ದಂಪತಿ ಅಡ್ಡೇ ವಿಶ್ವನಾಥಪುರದಲ್ಲಿ 2ನೇ ಮಹಡಿಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ತಿಂಗಳು ಅಕ್ಕ-ತಮ್ಮ ಮನೆ ಮುಂಭಾಗ ಆಟವಾಡುತ್ತಿದ್ದರು. ಕಟ್ಟಡ ನಿರ್ಮಾಣಕ್ಕೆ ಬಳಸುವ ಲೋಹದ ಅಳತೆ ಟೇಪ್ ಅನ್ನು ಅಯಾನ್ ಹೈಟೆನ್ಶನ್ ವೈಯರ್ ಮೇಲೆ ತಿಳಿಯದೆ ಎಸೆದಿದ್ದಾನೆ. ಪರಿಣಾಮ ವಿದ್ಯುತ್ ಪ್ರವಹಿಸಿ, ಆತ ಕೆಳಗೆ ಬಿದ್ದಿದ್ದಾನೆ. ಆತನನ್ನು ಕರೆತರಲು ಹೋದ ಸಾನ್ವಿಗೂ ವಿದ್ಯುತ್ ಶಾಕ್ ಹೊಡೆದು ಬಲಗೈಗೆ ಗಂಭೀರ ಗಾಯವಾಗಿದೆ. ಇಬ್ಬರಿಗೂ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.ಕೊಟ್ರೇಶ್ ದಂಪತಿ ಮನೆ ಮುಂಭಾಗ ಹೈಟೆನ್ಶನ್ ವಿದ್ಯುತ್ ತಂತಿ ಹಾದು ಹೋಗಿರುವ ಬಗ್ಗೆ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದು, ವೈಯರ್ಗೆ ಪ್ಲಾಸ್ಟಿಕ್ ಹೊದಿಕೆ ಹಾಕುವಂತೆ ಮನವಿ ಮಾಡಿದ್ದರು. ಜತೆಗೆ ಬೆಸ್ಕಾಂ ಅಧಿಕಾರಿಗಳಿಗೂ ದೂರು ನೀಡಿದ್ದರು. ಆದರೆ, ಇಬ್ಬರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಸಂಬಂಧ ಇಬ್ಬರ ವಿರುದ್ಧ ಕೊಟ್ರೇಶಿ ದೂರು ನೀಡಿದ್ದಾರೆ. ಜತೆಗೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಸಂಬಂಧ ಸೂಕ್ತ ಪರಿಹಾರ ನೀಡುವಂತೆಯೂ ಕೋರಿದ್ದಾರೆ. ಈ ಸಂಬಂಧ ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
