ಕ್ಷುಲ್ಲಕ ಕಾರಣಕ್ಕೆ ಸಹೋದರರ ಜಗಳ: ಕೊಲೆಯಲ್ಲಿ ಅಂತ್ಯ

| Published : Aug 22 2025, 12:00 AM IST

ಸಾರಾಂಶ

ಸಹೋದರರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಹೊಡೆದಾಟದಲ್ಲಿ ಓರ್ವ ಮೃತಪಟ್ಟ ಘಟನೆ ನಡೆದಿದೆ.

ಶಿವಮೊಗ್ಗ: ಸಹೋದರರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಹೊಡೆದಾಟದಲ್ಲಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ವಿನೋಬನಗರ ತರಕಾರಿ ಮಾರುಕಟ್ಟೆ ಸಮೀಪದ ಇಂದಿರಾಗಾಂಧಿ ಬಡಾವಣೆಯಲ್ಲಿ ಈ ಪ್ರಕರಣ ನಡೆದಿದ್ದು, ಬನ್ನಿಕೆರೆ ಗ್ರಾಮದ ನಿವಾಸಿ ಹಾಗೂ ಹೋಟೆಲ್‌ವೊಂದರಲ್ಲಿ ಉದ್ಯೋಗಿಯಾಗಿದ್ದ ಜನಾರ್ದನ್ (27) ಹತ್ಯೆಯಾದ ಯುವಕ. ಆರೋಪಿ ಹಾಗೂ ಮೃತನ ದೊಡ್ಡಪ್ಪನ ಮಗ ಬನ್ನಿಕೆರೆ ಗ್ರಾಮದ ನಿವಾಸಿ ಹನುಮಂತ (26) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ಆರೋಪಿಯು ಚೂರಿಯಿಂದ ಜನಾರ್ದನ್ ಗೆ ಇರಿದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಜನಾರ್ದನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ಇನ್ಸ್‌ಪೆಕ್ಟರ್‌ ಡಿ.ಕೆ. ಸಂತೋಷ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.