ನೆಲಸಮವಾದ ಕೋಟಿ ರುಪಾಯಿ ವೆಚ್ಚದ ಬಿಆರ್‌ಟಿಎಸ್‌ ಬಸ್‌ ನಿಲ್ದಾಣ

| Published : Mar 24 2024, 01:34 AM IST

ನೆಲಸಮವಾದ ಕೋಟಿ ರುಪಾಯಿ ವೆಚ್ಚದ ಬಿಆರ್‌ಟಿಎಸ್‌ ಬಸ್‌ ನಿಲ್ದಾಣ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಐದು ವರ್ಷಗಳ ಹಿಂದೆ ಹಳೇಬಸ್ ನಿಲ್ದಾಣದ ಎದುರು ನಿರ್ಮಿಸಿದ್ದ ಈ ಬಸ್‌ನ ನಿಲ್ದಾಣದಲ್ಲಿರುವ ಚಾವಣಿ, ಟಿಕೆಟ್ ಕೌಂಟರ್‌, ಮಾಹಿತಿ ಫಲಕ, ಸಿಸಿಟಿವಿ ಕ್ಯಾಮರಾ, ಆಟೋಮೆಟಿಕ್ ಡೋರ್ಸ್, ಸೇರಿದಂತೆ ಅನೇಕ ಸಾಮಗ್ರಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಗರದ ರಾಣಿಚೆನ್ನಮ್ಮ ವೃತ್ತ ಸೇರಿದಂತೆ ಸುತ್ತಮುತ್ತಲೂ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿ ಬಸ್‌ ನಿಲ್ದಾಣದ ಬಳಿ ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ಬಿಆರ್‌ಟಿಎಸ್‌ನ ಚಿಗರ್‌ ಬಸ್‌ ನಿಲ್ದಾಣ ನೆಲಸಮವಾಗುತ್ತಿದ್ದು, ಇಲ್ಲಿನ ಸಾಮಗ್ರಿಗಳ ತೆರವು ಕಾರ್ಯ ಕಳೆದ 3-4 ದಿನಗಳಿಂದ ನಡೆಯುತ್ತಿದೆ.

ಕಳೆದ ಐದು ವರ್ಷಗಳ ಹಿಂದೆ ಹಳೇಬಸ್ ನಿಲ್ದಾಣದ ಎದುರು ನಿರ್ಮಿಸಿದ್ದ ಈ ಬಸ್‌ನ ನಿಲ್ದಾಣದಲ್ಲಿರುವ ಚಾವಣಿ, ಟಿಕೆಟ್ ಕೌಂಟರ್‌, ಮಾಹಿತಿ ಫಲಕ, ಸಿಸಿಟಿವಿ ಕ್ಯಾಮರಾ, ಆಟೋಮೆಟಿಕ್ ಡೋರ್ಸ್, ಸೇರಿದಂತೆ ಅನೇಕ ಸಾಮಗ್ರಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಈಗಾಗಲೇ ಶೇ. 70ರಷ್ಟು ತೆರವು ಕಾರ್ಯ ಪೂರ್ಣಗೊಂಡಿದ್ದು, ಇನ್ನು 2-3 ದಿನಗಳಲ್ಲಿ ಸಂಪೂರ್ಣ ನೆಲಸಮವಾಗಲಿದೆ.

ಈ ನಿಲ್ದಾಣಕ್ಕೆ ಪರ್ಯಾಯವಾಗಿ ಇಂದಿರಾಗಾಜಿನ ಮನೆಗೆ ತೆರಳುವ ವೃತ್ತದ ಬಳಿ(ಬಸವವನ) ತಾತ್ಕಾಲಿಕವಾಗಿ ಚಿಗರಿ ಬಸ್‌ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಅಲ್ಲಿಂದ ಚಿಗರಿ ಬಸ್ ಹತ್ತುವ ಪ್ರಯಾಣಿಕರಿಗೆ ನೇರವಾಗಿ ಟಿಕೆಟ್ ನೀಡಲಾಗುತ್ತಿದೆ. 2018 ಅಕ್ಟೋಬರ್‌ನಿಂದ ಬಿಆರ್‌ಟಿಎಸ್‌ ಪ್ರತ್ಯೇಕ ಕಾರಿಡಾರ್‌ನಲ್ಲಿ ಚಿಗರಿ ಬಸ್ ಸಂಚಾರ ಆರಂಭಿಸಿತ್ತು. ಹುಬ್ಬಳ್ಳಿಯಿಂದ ಧಾರವಾಡದ ವರೆಗೆ 32 ಕಡೆಗಳಲ್ಲಿ ಬಿಆರ್‌ಟಿಎಸ್ ಬಸ್‌ ನಿಲ್ದಾಣ ನಿರ್ಮಿಸಿದ್ದು, ಪ್ರತಿ ನಿಲ್ದಾಣಕ್ಕೂ ₹1 ಕೋಟಿಗೂ ಅಧಿಕ ಖರ್ಚು ಮಾಡಲಾಗಿದೆ.

ಇದರೊಂದಿಗೆ ಮೇಲ್ಸೇತುವೆ ಕಾಮಗಾರಿಯ ಪ್ರಗತಿಯ ತಕ್ಕಂತೆ ಹು-ಧಾ ಮಹಾನಗರ ಪಾಲಿಕೆ ಹಾಗೂ ಹೊಸೂರು ಕ್ರಾಸ್ ಬಳಿ ಇರುವ ಚಿಗರಿ ಬಸ್‌ ನಿಲ್ದಾಣ ತೆರವು ಮಾಡಲಾಗುವುದು. ಪಾಲಿಕೆ ಎದುರಿನ ನಿಲ್ದಾಣಕ್ಕೆ ಬದಲಾಗಿ ಅಲ್ಲಿಯೇ ಮುಂಭಾಗದಲ್ಲಿರುವ ವೃತ್ತದ ಬಳಿ ಹಾಗೂ ಹೊಸೂರು ಕ್ರಾಸ್ ನಿಲ್ದಾಣದ ಬದಲಾಗಿ ಗಾಳಿದುರ್ಗಮ್ಮ ದೇವಸ್ಥಾನದ ಹಿಂಭಾಗ ಶಾಶ್ವತ ಬಿಆರ್‌ಟಿಎಸ್ ಬಸ್ ನಿಲ್ದಾಣ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ.