ಬಹು ಜನರ ಏಳಿಗೆಗೆ ದುಡಿಯುತ್ತಿರುವ ಪಕ್ಷ ಬಿಎಸ್ಪಿ: ಜಾಕೀರ್

| Published : Nov 15 2024, 12:36 AM IST

ಸಾರಾಂಶ

ಚಿಕ್ಕಮಗಳೂರು, ಅಂಬೇಡ್ಕರ್ ಅವರ ತತ್ತ್ವ, ಸಿದ್ಧಾಂತವನ್ನು ಒಳಗೊಂಡಿರುವ ಬಿಎಸ್ಪಿ ಪಕ್ಷ ರಾಜ್ಯ ಹಾಗೂ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಮುನ್ನಡೆದರೆ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ಹೇಳಿದರು.

ಜಿಲ್ಲಾ ಬಿಎಸ್ಪಿ ಕಚೇರಿಯಲ್ಲಿ ಆರ್ಥಿಕ ಸಹಯೋಗ ದಿವಸ್, ಜನ ಕಲ್ಯಾಣ ದಿನ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಂಬೇಡ್ಕರ್ ಅವರ ತತ್ತ್ವ, ಸಿದ್ಧಾಂತವನ್ನು ಒಳಗೊಂಡಿರುವ ಬಿಎಸ್ಪಿ ಪಕ್ಷ ರಾಜ್ಯ ಹಾಗೂ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಮುನ್ನಡೆದರೆ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ಹೇಳಿದರು.ಜಿಲ್ಲಾ ಬಿಎಸ್ಪಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಆರ್ಥಿಕ ಸಹಯೋಗ ದಿವಸ್, ಜನ ಕಲ್ಯಾಣ ದಿನ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಕ್ಷ ಸಂಘಟಿಸುವ ಹಾಗೂ ಚಳುವಳಿ ರೂಪಿಸುವ ಸಲುವಾಗಿ ಜನರಿಂದ ದೇಣಿಗೆ ರೂಪದಲ್ಲಿ ಹಣ ಪಡೆಯಲಾಗುತ್ತಿದೆ. ಅದರಂತೆ ಇಂದಿನಿಂದ ಮುಂದಿನ ಜನವರಿ 15 ರವರೆಗೆ ಹೆಚ್ಚಿನ ಮೊತ್ತದಲ್ಲಿ ದೇಣಿಗೆ ಸಂಗ್ರಹಿಸಿ ರಾಜ್ಯ ಸಮಿತಿಗೆ ಹಸ್ತಾಂತರಿಸಿ ಚಳುವಳಿ ಹಾಗೂ ಇನ್ನಿತರೆ ಕಾರ್ಯ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತದೆ ಎಂದರು.

ದೇಶದ ರಾಜಕೀಯ ಪಕ್ಷಗಳ ಇತಿಹಾಸದಲ್ಲಿ ಬಿಎಸ್ಪಿ ಹೊರತಾಗಿ ಬಹುತೇಕ ಎಲ್ಲಾ ಪಕ್ಷಗಳು ಕಾರ್ಪೋರೇಟ್ ಕಂಪನಿ ಗಳಿಂದ ದೇಣಿಗೆ ಪಡೆದು ಚುನಾವಣೆ ಎದುರಿಸಿವೆ ಅದಕ್ಕೆ ಚುನಾವಣಾ ಆಯೋಗ ಛೀಮಾರಿಯೂ ಹಾಕಿದೆ. ಆದರೆ, ಬಿಎಸ್ಪಿ ಎಲ್ಲದಕ್ಕಿಂತ ಭಿನ್ನವಾದ ಪಕ್ಷ. ಕಾರ್ಯಕರ್ತರ ನೆರವಿನಿಂದ ಹೊರ ಹೊಮ್ಮಿ ಇಂದಿಗೂ ಉತ್ತಮ ಪಕ್ಷವಾಗಿದೆ ಎಂದು ಹೇಳಿದರು.

ದೇಶವನ್ನು ಹಲವಾರು ವರ್ಷಗಳಿಂದ ಆಳ್ವಿಕೆ ನಡೆಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ, ಜಾತಿ, ಧರ್ಮದ ಹೆಸರಿನಲ್ಲಿ ಕೋಮುವಾದ ಭಿತ್ತಿ ಒಡೆದಾಳುವ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಹಗರಣದಲ್ಲಿ ಸಿಲುಕಿದ ಪರಿಣಾಮ ರಾಜ್ಯ ಅಭಿವೃದ್ಧಿಯಲ್ಲಿ ಶೂನ್ಯವಾಗಿದೆ ಎಂದು ಆರೋಪಿಸಿದರು.

ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಧಾಕೃಷ್ಣ, ಜಿಲ್ಲೆ ಯಲ್ಲಿ ಪಕ್ಷ ಸಂಘಟಿಸುವ ದೃಷ್ಟಿಯಿಂದ ಬೂತ್‌ ಮಟ್ಟದಿಂದ ಕಾರ್ಯಕರ್ತರು ಜನಸಾಮಾನ್ಯರಿಗೆ ಪಕ್ಷದ ಸಿದ್ದಾಂತ ಪರಿಚಯಿಸಿ ಸದಸ್ಯತ್ವರನ್ನಾಗಿ ಮಾಡಬೇಕು ಎಂದು ಹೇಳಿದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ ಮಾತನಾಡಿ, ಕಾರ್ಯಕರ್ತರಿಂದಲೇ ಪಕ್ಷ ಸದೃಢಗೊಳಿಸಿರುವ ಏಕೈಕ ಪಕ್ಷ ಬಿಎಸ್ಪಿ. ದೇಶದಲ್ಲಿ ಬಿಎಸ್ಪಿ ಸ್ಥಾಪನೆಗೊಂಡ ಬಳಿಕವೇ ದಲಿತರಿಗೆ ಹೆಚ್ಚು ಬೆಲೆ ಸಿಕ್ಕಿದೆ. ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್‌ ಹೆಸರಿನಲ್ಲಿ ಜನತೆ ದಿಕ್ಕು ತಪ್ಪಿಸುವ ಕಾರ್ಯಕ್ಕೆ ಮುಂದಾಗಿದ್ದು ಯಶಸ್ವಿಗೊಳ್ಳಲು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ತಾಲೂಕು ಅಧ್ಯಕ್ಷ ಎಚ್.ಕುಮಾರ್, ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ದೃಷ್ಟಿಯಿಂದ ಅಂಬೇಡ್ಕರ್ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆ ನೀಡಿದರು. ಅವರ ಆಶಯದಂತೆ ಬಿಎಸ್ಪಿ ಕಾರ್ಯಪ್ರವೃತ್ತವಾಗಿದೆ. ಕಾರ್ಯಕರ್ತರು ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಲು ಜನತೆಯಲ್ಲಿ ಅರಿವು ಮೂಡಿಸಿ ಸದಸ್ಯರನ್ನಾಗಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿಗಳಾದ ಪಿ.ವೇಲಾಯುಧನ್, ಕೆ.ಬಿ.ಸುಧಾ, ಉಡುಪಿ- ಚಿಕ್ಕಮಗಳೂರು ಉಸ್ತುವಾರಿ ಗಂಗಾಧರ್, ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ, ಪ್ರಧಾನ ಕಾರ್ಯದರ್ಶಿ ಆರ್. ವಸಂತ್, ತಾಲೂಕು ಉಪಾಧ್ಯಕ್ಷರಾದ ಸಿದ್ದಯ್ಯ, ಹೊನ್ನಪ್ಪ, ಕಚೇರಿ ಕಾರ್ಯದರ್ಶಿ ತಂಬನ್ ಉಪಸ್ಥಿತರಿದ್ದರು. 14 ಕೆಸಿಕೆಎಂ 6

ಚಿಕ್ಕಮಗಳೂರು ಜಿಲ್ಲಾ ಬಿಎಸ್ಪಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ಧ ಆರ್ಥಿಕ ಸಹಯೋಗ ದಿವಸ್, ಜನಕಲ್ಯಾಣ ದಿನ ಹಾಗೂ ಸದಸ್ಯತ್ವ ಅಭಿಯಾನವನ್ನು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ಉದ್ಘಾಟಿಸಿದರು. ಪರಮೇಶ್‌, ರಾಧಾಕೃಷ್ಣ, ಕುಮಾರ್‌ ಇದ್ದರು.