ಹಾಸನದಲ್ಲಿ ಅಮಿತ್‌ ಶಾ ವಜಾಕ್ಕೆ ಆಗ್ರಹಿಸಿ ಬಿಎಸ್‌ಪಿ ಪ್ರತಿಭಟನೆ

| Published : Dec 25 2024, 12:45 AM IST

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾಸನ ಡಿಸಿ ಕಚೇರಿ ಮುಂದೆ ಬಹುಜನ ಸಮಾಜ ಪಾರ್ಟಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಕೇಂದ್ರ ಗೃಹ ಸಚಿವರ ವಿರುದ್ಧ ಆಕ್ರೋಶ । ಜಿಲ್ಲಾಡಳಿತಕ್ಕೆ ಮನವಿ । ಶಾ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ

ಕನ್ನಡಪ್ರಭ ವಾರ್ತೆ ಹಾಸನ

ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಿಸಿ ಕಚೇರಿ ಮುಂದೆ ಬಹುಜನ ಸಮಾಜ ಪಾರ್ಟಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ಸಂಸತ್ ಅಧಿವೇಶನದಲ್ಲಿ ಭಾರತ ಸಂವಿಧಾನಕ್ಕೆ ೭೫ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸಂವಿಧಾನದ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರನ್ನು ಪದೇ ಪದೇ ಉಚ್ಛರಿಸುವ ಬದಲು ದೇವರನ್ನು ಸ್ಮರಿಸಿದ್ದರೆ ಏಳೇಳು ಜನ್ಮಗಳ ಸ್ವರ್ಗ ದೊರೆಯುತ್ತಿತ್ತು ಎಂದು ಬೇಜವಾಬ್ದಾರಿತನದಿಂದ ಮಾತನಾಡುವ ಮೂಲಕ ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನದ ಮೇಲಿರುವ ಅಸಹನೆಯ ಪ್ರತೀಕವಾಗಿದೆ ಎಂದರು.

ಸಾವಿರಾರು ವರ್ಷಗಳಿಂದ ಜಾತಿ ಆಧಾರದ ಮೇಲೆ ಈ ದೇಶದ ಬಹು ಸಂಖ್ಯಾತರಾದ ಎಸ್ಸಿ,ಎಸ್ಟಿ, ಒಬಿಸಿ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತರಿಗೆ ವಿದ್ಯೆ, ಆಸ್ತಿ, ಅಧಿಕಾರಗಳನ್ನು ನಿರಾಕರಿಸಿಕೊಂಡು ಬಂದ ಮನುವಾದಿ ಮೇಲ್ಜಾತಿಗೆ ಸೇರಿದ ಅಮಿತ್ ಶಾ ಮತ್ತು ಅವರ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರಿಗೆ ಸ್ವಾತಂತ್ರ್ಯ, ಸಮಾನತೆಯ ಆಶಯಗಳನ್ನು ಎಂದೂ ಕೂಡ ಒಪ್ಪಿಕೊಳ್ಳಲು ಹಾಗೂ ಸಹಿಸಿಕೊಳ್ಳಲು ಆಗುತ್ತಿಲ್ಲ. ಆ ಕಾರಣಕ್ಕಾಗಿ ಅವಕಾಶ ಸಿಕ್ಕಿದಾಗಲೆಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ, ಮೀಸಲಾತಿಯನ್ನು ಕುರಿತು ಕೇವಲವಾಗಿ, ಅವಹೇಳನಕಾರಿಯಾಗಿ ಮಾತನಾಡುವುದು ರೂಢಿಗತವಾಗಿ ಬಂದಿದೆ. ಇಂಥ ಮನುವಾದಿ ಮತ್ತು ಜಾತಿವಾದಿ ವ್ಯಕ್ತಿಗಳು ಸಂವಿಧಾನದ ಆಧಾರದ ಮೇಲೆ ರಚನೆಯಾಗಿರುವ ಸರ್ಕಾರದಲ್ಲಿ ಮಂತ್ರಿಯಾಗಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಆದ್ದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಮನಸ್ಥಿತಿ ಇರುವ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ತಕ್ಷಣ ವಜಾ ಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ ಎಂದು ಹೇಳಿದರು.

ಪಾರ್ಟಿಯ ಜಿಲ್ಲಾ ಉಸ್ತುವಾರಿ ಎಚ್.ಬಿ. ಮಲ್ಲಯ್ಯ, ಜಿಲ್ಲಾ ಸಂಯೋಜಕ ಎಂ.ಜಿ. ಕಿರಣ್, ಸಿ.ಜಿ. ಸೋಮಶೇಖರ್, ಜಿಲ್ಲಾಧ್ಯಕ್ಷ ಲಕ್ಷ್ಮಣ್ ಕೀರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ. ಸುರೇಂದ್ರ, ಜಿಲ್ಲಾ ಉಪಾಧ್ಯಕ್ಷ ಶಾಕೀರ್ ಅಹಮದ್, ಜಿಲ್ಲಾ ಸಮಿತಿ ಸದಸ್ಯ ಜಯವರ್ಧನ್, ಜಿಲ್ಲಾ ಕಾರ್ಯದರ್ಶಿ ಪುಟ್ಟರಾಜು, ರಾಜು ಇತರರು ಇದ್ದರು.