ಹೊಸಪೇಟೆ: ರಾಜ್ಯದಲ್ಲಿ ಕಳೆದ ೫೦ ವರ್ಷಗಳಿಂದ ಬಡವರು, ರೈತರು, ಶೋಷಿತ ಸಮುದಾಯಗಳ ಪರವಾಗಿ ಧ್ವನಿ ಎತ್ತುವ ಏಕೈಕ ನಾಯಕ ಕಂಡಿದ್ದರೆ ಅದು ಬಿ.ಎಸ್. ಯಡಿಯೂರಪ್ಪ. ಹೋರಾಟ, ಪರಿಶ್ರಮಕ್ಕೆ ಮತ್ತೊಂದು ಹೆಸರು ಎಂದರೆ ಬಿಎಸ್‌ವೈ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ೫೦ ವರ್ಷಗಳ ಸಾರ್ಥಕ ಜನಸೇವೆಯ ಅಂಗವಾಗಿ ಮೇ ೯ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿಎಸ್‌ವೈ ಅಭಿಮಾನೋತ್ಸವ ಕಾರ‍್ಯಕ್ರಮದ ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಪ್ರಮುಖರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಎಲ್ಲಿ ಬಡವರು ಕಣ್ಣೀರು ಹಾಕುತ್ತಿದ್ದಾರೋ ಅಲ್ಲಿ ಯಡಿಯೂರಪ್ಪ ಇರುತ್ತಿದ್ದರು. ಎಲ್ಲಿ ರೈತರು ಸಂಗಷ್ಟದಲ್ಲಿದ್ದಾರೋ ಅಲ್ಲಿ ಯಡಿಯೂರಪ್ಪ ಇರುತ್ತಿದ್ದರು. ಅವರ ಪರವಾಗಿ ಧ್ವನಿಗೂಡಿಸುವಂತಹ ಕೆಲಸ ಮಾಡುತ್ತಿದ್ದರು. ಅಂತಹ ಒಬ್ಬ ಹೋರಾಟಗಾರರ ೫೦ ವರ್ಷಗಳ ರಾಜಕೀಯ ಪಯಣವನ್ನು ಅರ್ಥಪೂರ್ಣವಾಗಿ ಆಚರಿಸಿ, ಸಂಭ್ರಮಿಸಲು ಎಲ್ಲರೂ ಅಭಿಮಾನೋತ್ಸವದಲ್ಲಿ ಭಾಗವಹಿಸಬೇಕು ಎಂದರು.

ಇದು ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಅಭೂತಪೂರ್ವ ಕಾರ‍್ಯಕ್ರಮವಾಗಲಿದೆ. ಹಿಂದೆಂದೂ ಸೇರದಷ್ಟು ಸಾವಿರಕ್ಕೂ ಹೆಚ್ಚು ರಾಜ್ಯದ ಮಠ ಮಾನ್ಯಗಳ ಗುರುಗಳು, ಜಗದ್ದುರುಗಳು, ಸ್ವಾಮೀಜಿಗಳು, ಎಲ್ಲ ಸಮಾಜದ ಕನಿಷ್ಠ ೧೦ ಲಕ್ಷ ಜನ ಅಭಿಮಾನಿಗಳು ಕಾರ‍್ಯಕ್ರಮದಲ್ಲಿ ಭಾಗವಹಿಸುವರು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಛೀ ಎಂದು ಉಗಿಯುತ್ತಿದ್ದಾರೆ. ರಾಜ್ಯದಲ್ಲಿ ಊಹಿಸದಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಜನರು ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಬಿಜೆಪಿಯನ್ನು ಎಚ್ಚರಿಸುವ ಕೆಲಸವನ್ನು ರಾಜ್ಯದ ಜನರು ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಮುಂದೆ ಯಾರೇ ಅಭ್ಯರ್ಥಿಯಾಗಲಿ ಅವರನ್ನು ಗೆಲ್ಲಿಸುತ್ತೇವೆ ಎನ್ನುವ ಸಂಕಲ್ಪ ಮಾಡಬೇಕು. ನಿಷ್ಠಾವಂತ ಕಾರ್ಯಕರ್ತರು ಪಕ್ಷಕ್ಕಾಗಿ ಶ್ರಮ ಹಾಕಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದರು.


ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಬಿಎಸ್‌ವೈ ಎಂದರೆ ಅದೊಂದು ದೊಡ್ಡ ಶಕ್ತಿ. ಯಡಿಯೂರಪ್ಪ ಬಿಜೆಪಿಯಲ್ಲಿ ಎಲ್ಲರನ್ನೂ ಬೆಳೆಸಿದ್ದಾರೆ. ಅವರ ಋಣ ತೀರಿಸೋಣ. ಬಳ್ಳಾರಿ, ವಿಜಯನಗರ, ಕೊಪ್ಪಳ ಮೂರು ಜಿಲ್ಲೆಗಳಿಂದ ಒಂದೂವರೆ ಲಕ್ಷ ಜನರು‌ ಕಾರ‍್ಯಕ್ರಮದಲ್ಲಿ ಸೇರಿಸಬೇಕು. ಒಂದೊಂದು ‌ಭೂತ ಮಟ್ಟದಿಂದ ಕನಿಷ್ಠ ೧೦೦ ಜನರನ್ನು ಕರೆತರೋಣ. ಇದು ಬಿಜೆಪಿಯ ಒಗ್ಗಟ್ಟಿನ ಅಭಿಮಾನೋತ್ಸವ ಆಗಬೇಕು. ಇದು ಯಡಿಯೂರಪ್ಪನವರ ಅವರ ಸನ್ಮಾನ ಮಾತ್ರ ಅಲ್ಲ‌ ಮತ್ತೆ ಬಿಜೆಪಿ ಮತ್ತೆ ರಾಜ್ಯದಲ್ಲಿ ಪುಟಿದೇಳಬೇಕಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಬಿಜೆಪಿ ಸರ್ಕಾರ ತಂದೆ ತರುತ್ತೇವೆ ಎಂದರು.

ಮಾಜಿ ಸಚಿವ ಬಿ.ಎಸ್. ಆನಂದ್ ಸಿಂಗ್ ಮಾತನಾಡಿ, ನಾನು ಶಾಸಕನಾಗಲು ಜನಾರ್ದನ ರೆಡ್ಡಿ, ಶ್ರೀರಾಮುಲು ಕಾರಣರಾಗಿದ್ದಾರೆ. ಯಡಿಯೂರಪ್ಪ ನನಗೆ ಸಚಿವ ಸ್ಥಾನ, ನಮ್ಮ ಜನರಿಗೆ ವಿಜಯನಗರ ಜಿಲ್ಲೆ ನೀಡಿದ್ದಾರೆ ಎಂದರು.

ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ, ಸಂಸದ ಗೋವಿಂದ ಕಾರಜೋಳ, ವಿಧಾನಸಭೆ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಶಾಸಕರಾದ ಕೃಷ್ಣ ನಾಯಕ್, ವೈ.ಎಂ. ಸತೀಶ್, ಮುಖಂಡರಾದ ಹೇಮಲತಾ ನಾಯಕ್, ಹಾಲಪ್ಪ ಆಚಾರ್, ಪಿ.ರಾಜೀವ್, ಶರಣು ತಳ್ಳಿಕೆರೆ, ಸುರೇಶ್ ಬಾಬು, ಸೋಮಲಿಂಗಪ್ಪ, ಕೆ.ಎಸ್. ದಿವಾಕರ್, ಬಸವರಾಜ ಕ್ಯಾಟವರ್, ಅಮರನಾಥ್ ಪಾಟೀಲ್, ಚನ್ನಬಸವನಗೌಡ ಪಾಟೀಲ್, ಅರುಣ ಶಹಪುರ್, ಬಲ್ಲಹುಣಸಿ ರಾಮಣ್ಣ, ಸಂಜೀವ ರೆಡ್ಡಿ, ಅನಿಲ್ ಕುಮಾರ್ ಮೋಕ, ನವೀನ್ ಗುಳಗಣ್ಣವರ, ದಡೆಸುಗೂರು ಬಸವರಾಜ್ ಇದ್ದರು.