ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿತ್ರದುರ್ಗದಲ್ಲಿ ಮೇ 9ಕ್ಕೆ ಹಮ್ಮಿಕೊಂಡಿರುವ ಬಿಎಸ್‌ವೈ ಅಭಿಮಾನೋತ್ಸವಕ್ಕೆ ಚಿಕ್ಕಮಗಳೂರು ಜಿಲ್ಲೆಯಿಂದ ಬರೋಬ್ಬರಿ 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಜಿ ಶಾಸಕ ಹಾಗೂ ಅಭಿಮಾನೋತ್ಸವ ಸಮಿತಿ ಸಂಚಾಲಕ ಬೆಳ್ಳಿ ಪ್ರಕಾಶ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜನಸೇವೆ ಬದುಕಿಗೆ 50 ವರ್ಷಗಳು ತುಂಬಿರುವ ಸವಿನೆನಪಿಗೆ ಮೇ 9 ರಂದು ಚಿತ್ರದುರ್ಗದಲ್ಲಿ ಬೃಹತ್ ಬಿಎಸ್‌ವೈ ಅಭಿಮಾನೋತ್ಸವ ಆಯೋಜಿಸಲಾಗಿದೆ.

ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿರುವ ಜನಪರ, ಸಮಾಜಮುಖಿ ಹೋರಾಟಗಾರ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಅವರನ್ನು ಪಕ್ಷ ಹಾಗೂ ನಾಡಿನ ಜನತೆ ಪರವಾಗಿ ಅಭಿನಂದಿಸಲು ನಿರ್ಧರಿಸಲಾಗಿದೆ ಎಂದರು.

ಮೇ 9ರ ಮಧ್ಯಾಹ್ನ 12 ಕ್ಕೆ ಕಾರ್ಯಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದು, ಮಾಜಿ ಉಪ ಮುಖ್ಯ ಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆ ವಹಿಸಲಿದ್ದಾರೆ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಎಚ್.ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಸಂಸದರಾದ ಜಗದೀಶ್ ಶೆಟ್ಟರ್, ಬಸವರಾಜ್ ಬೋಮ್ಮಾಯಿ, ವಿಪಕ್ಷ ನಾಯಕ ಆರ್, ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.


ನಾಡಿನ ಅನೇಕ ಸಿದ್ಧಗಂಗಾ ಶ್ರೀ, ರಂಭಾಪುರಿ ಶ್ರೀ ಸೇರಿದಂತೆ ಹೆಸರಾಂತ ಮಠಾಧೀಶರು ಪಕ್ಷದ ಹಿರಿಯ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯಿಂದ 25 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಅಭಿಮಾನೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು ಸುಮಾರು 10 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು, ಬಿಎಸ್‌ವೈ ಅಭಿಮಾನಿಗಳು, ಹಿತೈಷಿಗಳು ಪಾಲ್ಗೋಳ್ಳಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ ಮಾತನಾಡಿ, ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡು ಪಶ್ಚಿಮ ಬಂಗಾಳ, ಪುದುಚೆರಿ, ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಪಕ್ಷದ ಪರವಾಗಿ ಜನಾದೇಶ ನೀಡಿದ ಮತದಾರರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರಮಂಡಲ ಅಧ್ಯಕ್ಷ ಕೆ.ಎಸ್ ಪುಷ್ವರಾಜ್, ವಕ್ತಾರ ಹೆಚ್.ಎಸ್ ಪುಟ್ಟಸ್ವಾಮಿ, ಮಾಧ್ಯಮ ಪ್ರಮುಖ್ ದಿನೇಶ್ ಕೋಟೆ, ಮುಖಂಡರಾದ ಚಂದ್ರು, ಚಮಿನ್ ಉಪಸ್ಥಿತರಿದ್ದರು.

(ಫೋಟೋ ಬೆಳ್ಳಿ ಪ್ರಕಾಶ್‌ ಫೋಟೋ ಬಳಸುವುದು ಕಡ್ಡಾಯ---)