ಬಿಎಸ್‌ವೈ ರಂಗ ಪ್ರವೇಶ, ದಾವಣಗೆರೆ ಬಿಜೆಪಿ ಅತೃಪ್ತಿ ಶಮನ

| Published : Mar 27 2024, 01:03 AM IST

ಬಿಎಸ್‌ವೈ ರಂಗ ಪ್ರವೇಶ, ದಾವಣಗೆರೆ ಬಿಜೆಪಿ ಅತೃಪ್ತಿ ಶಮನ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಿಸುವಂತೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ನೇತೃತ್ವದಲ್ಲಿ ಪಟ್ಟು ಹಿಡಿದಿದ್ದ ಗುಂಪಿನ ಅಸಮಾಧಾನ ತಣಿಸುವ ಮೂಲಕ ಉತ್ತರ ಕರ್ನಾಟಕದ ಹೆಬ್ಬಾಗಿಲಾದ ದಾವಣಗೆರೆಯಲ್ಲಿ ಬಿಜೆಪಿಯನ್ನು ಎಲ್ಲರೂ ಸೇರಿ ಗೆಲ್ಲಿಸುವಂತೆ ಮನವೊಲಿಸುವ ಮೂಲಕ ಎಲ್ಲ ಗೊಂದಲ, ಗದ್ದಲಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದಾರೆ.

- ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಸಾರಥ್ಯದಲ್ಲೇ ಗಾಯತ್ರಿ ಸಿದ್ದೇಶ್ವರ ಚುನಾವಣೆ

- ಎರಡೂ ಗುಂಪಿನ ಕೆಲವರ ಮಧ್ಯೆ ವಾಗ್ವಾದ, ಕಡೆಗೂ ಮಣಿದ ಬಿಜೆಪಿಯ ಮನಸ್ಸುಗಳು

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಿಸುವಂತೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ನೇತೃತ್ವದಲ್ಲಿ ಪಟ್ಟು ಹಿಡಿದಿದ್ದ ಗುಂಪಿನ ಅಸಮಾಧಾನ ತಣಿಸುವ ಮೂಲಕ ಉತ್ತರ ಕರ್ನಾಟಕದ ಹೆಬ್ಬಾಗಿಲಾದ ದಾವಣಗೆರೆಯಲ್ಲಿ ಬಿಜೆಪಿಯನ್ನು ಎಲ್ಲರೂ ಸೇರಿ ಗೆಲ್ಲಿಸುವಂತೆ ಮನವೊಲಿಸುವ ಮೂಲಕ ಎಲ್ಲ ಗೊಂದಲ, ಗದ್ದಲಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದಾರೆ.

ನಗರದ ಹೊರವಲಯದ ಅಪೂರ್ವ ರೆಸಾರ್ಟ್‌ನಲ್ಲಿ ಮಂಗಳವಾರ ನಡೆದ ರಹಸ್ಯ ಸಭೆಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ, ಜಿ.ಕರುಣಾಕರ ರೆಡ್ಡಿ, ವಿಪ ಮಾಜಿ ಸಚಿವ ಡಾ. ಎ.ಎಚ್. ಶಿವಯೋಗಿಸ್ವಾಮಿ ನೇತೃತ್ವದ ಗುಂಪು ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಬದಲಿಸುವಂತೆ ಮೊದಲ ದಾಳವನ್ನು ಉರುಳಿಸಿತು.

ಆದರೂ, ಅದಕ್ಕೆ ಸೊಪ್ಪು ಹಾಕದ ಯಡಿಯೂರಪ್ಪ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಷಿ , ರಾಧಾಮೋಹನ ಅಗರವಾಲ್‌ ಇತರರ ಸಮ್ಮುಖ ದಾವಣಗೆರೆ ಕ್ಷೇತ್ರದ ನೀವೆಲ್ಲರೂ ಸೇರಿ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಫರ್ಮಾನು ಹೊರಡಿಸಿದ್ದಾರೆ.

ಅಭ್ಯರ್ಥಿ ವಿರುದ್ಧ ಹೋರಾಟ ಸಲ್ಲದು:

ಸಂಸದ ಸಿದ್ದೇಶ್ವರ ವಿರುದ್ಧ ರವೀಂದ್ರನಾಥ ಜೊತೆ ಗುರುತಿಸಿಕೊಂಡಿದ್ದವರು ಕೆಲಹೊತ್ತು ಅಸಮಾಧಾನ ಹೊರಹಾಕಿದರು. ಎಲ್ಲರ ಅಹವಾಲು ಆಲಿಸಿದ ಯಡಿಯೂರಪ್ಪ ಉತ್ತರ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ. ನೂತನ ಜಿಲ್ಲೆಯಾದ ನಂತರ ಕಳೆದ 25-26 ವರ್ಷದಿಂದಲೂ ನಾವು ಈ ಕ್ಷೇತ್ರವನ್ನು ಸೋತೇ ಇಲ್ಲ. ಹೀಗೇ ಪಕ್ಷದ ಅಭ್ಯರ್ಥಿ ವಿರುದ್ಧ ಹೋರಾಡುವುದು ಸರಿಯೂ ಅಲ್ಲ. ನೀವೆಲ್ಲರೂ ಮುಂಚಿನಂತೆ ಒಂದಾಗಿ, ಒಗ್ಗಟ್ಟಿನಿಂದ ಬಿಜೆಪಿ ಗೆಲ್ಲಿಸುವ ಕೆಲಸ ಮಾಡಬೇಕು. ಮತ್ತೆ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಬೇಕು ಎಂದು ತಿಳಿ ಹೇಳಿದರು ಎನ್ನಲಾಗಿದೆ.

ಯಾವುದೇ ಕಾರಣಕ್ಕೂ ದಾವಣಗೆರೆ ಕ್ಷೇತ್ರವನ್ನು ನಾವು ಬಿಟ್ಟು ಕೊಡಬಾರದು. ನಿಮ್ಮೆಲ್ಲರ ಮೇಲೂ ಸಾಕಷ್ಟು ಜವಾಬ್ದಾರಿ ಇದೆ. ಹಿರಿಯರಾದ ಎಸ್.ಎ. ರವೀಂದ್ರನಾಥರ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎನ್ನುವ ಮೂಲಕ ಎಲ್ಲ ಗೊಂದಲ, ಗದ್ದಲಗಳಿಗೆ ಯಡಿಯೂರಪ್ಪ ತೆರೆ ಎಳೆಯುವ ಮೂಲಕ ಸಹಸ್ರಾರು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಲು ಕಾರಣರಾದರು.

ರವೀಂದ್ರನಾಥ್‌ ನೇತೃತ್ವದಲ್ಲೇ ಗೆಲ್ಲಿಸಿ:

ಸಭೆಯ ವೇಳೆ ಯಡಿಯೂರಪ್ಪ ಸಮ್ಮುಖದಲ್ಲೇ ಕೆಲ ವಿಚಾರಗಳ ಬಗ್ಗೆ ಎರಡೂ ಕಡೆಯವ ಮಧ್ಯೆ ಮಾತಿನ ಚಕಮಕಿ ತಾರಕಕ್ಕೇರಿತ್ತು. ಆದರೆ, ಯಡಿಯೂರಪ್ಪ ಅವರು ಎರಡೂ ಕಡೆಯವರನ್ನೂ ಸಮಾಧಾನಪಡಿಸಿ, ದಾವಣಗೆರೆ ಬಿಜೆಪಿ ಭದ್ರಕೋಟೆ. ಯಾವುದೇ ಕಾರಣಕ್ಕೂ ಇಲ್ಲಿ ಗುಂಪುಗಳಾಗಿ, ಪಕ್ಷಕ್ಕೆ ಹಾನಿ ಆಗಬಾರದು. ನೀವೆಲ್ಲರೂ ರವೀಂದ್ರನಾಥ್‌ ನೇತೃತ್ವದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಕೆಲಸ ಮಾಡಿ. ಇಲ್ಲಿನ ಸರಣಿ ಸಭೆಗಳು, ಗುಂಪುಗಳ ಚರ್ಚೆ ಈಗ ಎಲ್ಲ ವಿಚಾರ ವರಿಷ್ಠರ ಗಮನಕ್ಕೂ ಬಂದಿವೆ. ನಮ್ಮಲ್ಲಿನ ಗದ್ದಲದಿಂದಾಗಿ ಎದುರಾಳಿಗಳ ಹಾದಿ ಸುಲಭವಾಗಬಾರದು. ದಾವಣಗೆರೆ ಜಿಲ್ಲೆಯಾದಾಗಿನಿಂದಲೂ ಇದು ನಮ್ಮ ಪಕ್ಷದ ಭದ್ರಕೋಟೆ. ಅದನ್ನು ಕಾಯ್ದುಕೊಂಡು ಹೋಗುವ ಕೆಲಸ ಆಗಬೇಕಷ್ಟೇ ಎಂದು ತಿಳಿ ಹೇಳಿದರು. ದಾವಣಗೆರೆ ವಿಚಾರ ಸುಖಾಂತ್ಯಗೊಂಡ ನಂತರ ಯಡಿಯೂರಪ್ಪ ಬೆಳಗಾವಿಯಲ್ಲಿ ಅತೃಪ್ತಿ ಶಮನಕ್ಕೆ ಮುಂದೆ ಸಾಗಿದರು.

ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ, ಜಿ.ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಎಂ.ಬಸವರಾಜ ನಾಯ್ಕ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ, ಪರಾಜಿತ ಅಭ್ಯರ್ಥಿಗಳಾದ ಚನ್ನಗಿರಿಯ ಮಾಡಾಳ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ. ಅಜಯಕುಮಾರ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ, ಎಲ್.ಎನ್. ಕಲ್ಲೇಶ್‌, ಇತರರು ಬಿಜೆಪಿ ಅಭ್ಯರ್ಥಿ ವಿರೋಧಿಯಾಗಿ ಗುರುತಿಸಿಕೊಂಡವರು ಸಭೆಯಲ್ಲಿದ್ದರು.

ಸಂಸದ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ಗೌಡ, ಜಗಳೂರು ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ. ರಾಜೇಶ, ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಎಸ್.ಎಂ. ವೀರೇಶ ಹನಗವಾಡಿ, ಯಶವಂತ ರಾವ್ ಜಾಧವ್, ಚನ್ನಗಿರಿಯ ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ, ಹೊನ್ನಾಳಿಯ ಶಾಂತರಾಜ ಪಾಟೀಲ್‌, ಅರಕೆರೆ ಹನುಮಂತಪ್ಪ ಇತರರು ಸಭೆಯಲ್ಲಿದ್ದರು.

ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಬಿ.ಎ. ಬಸವರಾಜ ಭೈರತಿ, ಶಂಕರ ಪಾಟೀಲ್ ಮುನೇನಕೊಪ್ಪ, ವಿಪ ಸದಸ್ಯರಾದ ಎನ್.ರವಿಕುಮಾರ, ಕೆ.ಎಸ್. ನವೀನ್‌, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಅನಿಲಕುಮಾರ ನಾಯ್ಕ, ಧನಂಜಯ ಕಡ್ಲೇಬಾಳು, ಪಿ.ಸಿ.ಶ್ರೀನಿವಾಸ ಭಟ್‌, ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ ಇತರರು ಹಾಜರಿದ್ದರು.

- - - ಬಾಕ್ಸ್‌ ಸಭೆ ಹೈಲೈಟ್ಸ್‌ -ಅಪೂರ್ವ ರೆಸಾರ್ಟ್‌ನಲ್ಲಿ ಸುಮಾರು ಎರಡು ಗಂಟೆ ಕಾಲ ನಡೆದ ಸಭೆ-ಬಿ.ಎಸ್‌.ಯಡಿಯೂರಪ್ಪ, ಪ್ರಹ್ಲಾದ ಜೋಷಿ, ರಾಧಾಮೋಹನ ಅಗರವಾಲ್ ಭಾಗಿ

-ರವೀಂದ್ರನಾಥ ನೇತೃತ್ವದ ಗುಂಪನ್ನು ಮೊದಲು ಚರ್ಚೆಗೆ ಆಹ್ವಾನಿಸಿದ ಬಿಎಸ್‌ವೈ

-ಒಂದೂವರೆ ಗಂಟೆ ಕಾಲ ಎಸ್ಎಆರ್ ಬಣದ ಗುಂಪಿನ ಅಹವಾಲು ಆಲಿಸಿದ ನಾಯಕ -ನಂತರ ಸಿದ್ದೇಶ್ವರ, ಹರೀಶ, ರಾಮಚಂದ್ರ, ರಾಜೇಶ, ವೀರೇಶ ಇತರರ ಪ್ರೇವೇಶ

-2 ಗಂಟೆ ಸುಧೀರ್ಘ ಚರ್ಚೆ ನಂತರ ಎರಡೂ ಗುಂಪಿಗೆ ಸಮಾಧಾನ ತರುವ ಸೂತ್ರ-ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂಬ ಸಂಕಲ್ಪದ ಚುನಾವಣೆ ಇದೆಂದು ಹೇಳಿಕೆ -25 ವರ್ಷದಿಂದ ದಾವಣಗೆರೆ ಬಿಜೆಪಿ ಭದ್ರಕೋಟೆ, ಇದನ್ನು ಬಿಟ್ಟು ಕೊಡುವ ಮಾತೇ ಇಲ್ಲ-ದಾವಣಗೆರೆ ಜಿಲ್ಲೆ ಆದಾಗಿನಿಂದಲೂ ಇಲ್ಲಿ ಬಿಜೆಪಿ ಸೋತಿಲ್ಲವೆಂಬುದನ್ನು ಮರೆಯದಿರಿ-ರವೀಂದ್ರನಾಥ ನೇತೃತ್ವದಲ್ಲೇ ಗಾಯತ್ರಿ ಸಿದ್ದೇಶ್ವರ ಚುನಾವಣೆ, ಬಿಎಸ್‌ವೈ ಘೋಷಣೆ

-ಸುಖಾಂತ್ಯಗೊಂಡ ಸಭೆ, ನಂತರ ದೋಸೆ ಸೇರಿದಂತೆ ತಮಗಿಷ್ಟದ ತಿಂಡಿ ಸೇವಿಸಿ, ಟೀ-ಕಾಫಿ ಸೇವಿಸಿದ ನಾಯಕರು

-ದಾವಣಗೆರೆ ಸುಖಾಂತ್ಯ ಕಂಡ ಬೆನ್ನಲ್ಲೇ ಬೆಳಗಾವಿ ಕ್ಷೇತ್ರದಲ್ಲಿ ಅತೃಪ್ತಿ ಶಮನಕ್ಕೆ ಹೊರಟ ಬಿಎಸ್‌ವೈ, ಜೋಷಿ ಜೋಡಿ - - -

(-ಫೋಟೋ ಬರಲಿವೆ)