ಬಿಜೆಪಿ ಗೊಂದಲ ನಿವಾರಣೆಗೆ ದಾವಣಗೆರೆಗೆ ಇಂದು ಬಿಎಸ್‌ವೈ ಪ್ರವೇಶ

| Published : Feb 08 2024, 01:31 AM IST

ಸಾರಾಂಶ

ಫೆ.8ರ ರಾತ್ರಿಯೇ ಇತ್ಯರ್ಥಪಡಿಸಿ, ಗುರುವಾರ ರಾತ್ರಿಯೇ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಮರೆತು, ಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿ ಗೆಲುವಿಗೆ ದುಡಿಯುವಂತೆ ಕಿವಿ ಹಿಂಡುವ ಕೆಲಸವನ್ನು ಯಡಿಯೂರಪ್ಪ, ಈಶ್ವರಪ್ಪ ಸಹ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ ನಾಯಕರ ಗುಂಪುಗಾರಿಕೆ, ಪರಸ್ಪರ ನಂಬಿಕೆ ಇಲ್ಲದಂತಾಗಿದ್ದ ದಾವಣಗೆರೆ ಬಿಜೆಪಿ ಮುಖಂಡರನ್ನು ಒಗ್ಗೂಡಿಸಲು ಸ್ವತಃ ಮಾಜಿ ಮುಖ್ಯಮಂತ್ರಿ, ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಮಾಡಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ವತಃ ಅಖಾಡಕ್ಕಿಳಿದಿದ್ದಾರೆ.

ಸದ್ಯ ಹಳೇ ಬೇರು, ಹೊಸ ಚಿಗುರು ಎಂಬಂತೆ ರಾಜ್ಯ ನಾಯಕರು ವಿಧಾನಸಭೆ ಸೋಲಿನ ಕಹಿ ನೆನಪು ಮರೆತು, ಲೋಕಸಭೆಯಲ್ಲಿ 28 ಕ್ಷೇತ್ರ ಗೆಲ್ಲುವ ಗುರಿ ಇಟ್ಟುಕೊಂಡಿದ್ದರೆ, ದಾವಣಗರೆಗೆ ನಾನು ಆಕಾಂಕ್ಷಿ, ನಾನೂ ಆಕಾಂಕ್ಷಿ, ನಾನೂ ಓರ್ವ ಪ್ರಬಲ ಆಕಾಂಕ್ಷಿ ಎಂಬ ಗೊಂದಲಗಳ ಸರಮಾಲೆ ಬೆನ್ನಲ್ಲೇ ಸೂಕ್ಷ್ಮವಾಗಿ ಗಮನಿಸಿದ ಯಡಿಯೂರಪ್ಪ ವಾತಾವರಣ ತಿಳಿಗೊಳಿಸಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲೇ ಈಗಾಗಲೇ ಕೆಲವರಿಗೆ ಮಾತಿನ ಚಾಟಿ ಬೀಸಿದ್ದಲ್ಲದೇ, ನಾನೇ ದಾವಣಗೆರೆ ಬರುತ್ತೇನೆಂದಿದ್ದರು. ಅದರಂತೆ ಫೆ.8ಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ-ಪ್ರಧಾನ ಕಾರ್ಯ ದರ್ಶಿಗಳ ಪದಗ್ರಹಣಕ್ಕೆ ಬಂದು, ರಾತ್ರಿ ಇಲ್ಲೇ ವಾಸ್ತವ್ಯ ಮಾಡಿ, ಜಿಲ್ಲಾ ನಾಯಕರ ಕಿವಿ ಹಿಂಡುವ ಕೆಲಸ ಮಾಡಲಿದ್ದಾರೆನ್ನಲಾಗಿದೆ. ಯಾರಿಂದ ಹೀಗೆಲ್ಲಾ ಆಗಿದೆ, ಯಾಕೆ ಹೀಗಾಗುತ್ತಿದೆ, ಹೀಗೇ ಮುಂದುವರಿದರೆ ಏನೆಲ್ಲಾ ಆಗಬಹುದೆಂಬುದನ್ನು ಗ್ರಹಿಸಿರುವ ಯಡಿಯೂರಪ್ಪ, ಈಶ್ವರಪ್ಪ ಸ್ವತಃ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆಗೆ ಬಂದು, ಇಲ್ಲಿನ ವಾತಾವರಣ ತಿಳಿಗೊಳಿಸಲು ಸಿದ್ಧತೆ ನಡೆಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಜಗಳೂರಿನ ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ, ಚನ್ನಗಿರಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಸಹಜವಾಗಿಯೇ ಗುರುಸಿದ್ದನಗೌಡ ಜನಸಂಘ ಕಾಲದವರು. ಯಡಿ ಯೂರಪ್ಪ ಸಮಕಾಲೀನರು. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ಎಂ.ಬಸವರಾಜ ನಾಯ್ಕ ಸೇರಿದಂತೆ ಜಿಲ್ಲೆಯ ಮುಖಂಡರು ಹಾಜರಿದ್ದರು. ಸದ್ಯ ಗೊಂದಲದ ಗೂಡಾಗಿರುವ, ಪರಸ್ಪರರಲ್ಲಿ ಮುಂಚಿನ ವಿಶ್ವಾಸ, ನಂಬಿಕೆ ಇಲ್ಲದಂತಾದ ಬಿಜೆಪಿ ನಾಯಕರ ಇಂತಹ ವರ್ತನೆಯಿಂದಾಗಿ ಸಾವಿರಾರು ಕಾರ್ಯಕರ್ತರಿಗೆ ಅತ್ತ ಹೋಗುವುದು, ಇತ್ತ ಸಾಗುವುದೋ ಎಂಬ ಗೊಂದಲ ಸಹಜವಾಗಿಯೇ ಇತ್ತು. ಅಲ್ಲದೇ, ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ಸಾಮಾನ್ಯ ಕಾರ್ಯಕರ್ತನಿಗೆ ನೀಡಿದ ಖುಷಿಗೆ ಪಕ್ಷ ದಿಂದ, ನಾಯಕರಿಂದ ಅಂತರ ಕಾಯ್ದುಕೊಂಡಿದ್ದ ಮೂಲ ಕಾರ್ಯಕರ್ತರು, ಜನಸಂಘ ಕಾಲದ ಹಿರಿಯರೂ ಇದೀಗ ಪಕ್ಷದತ್ತ ಮುಖ ಮಾಡಿದ್ದರು. ಆದರೆ, ಪಕ್ಷದ ಜಿಲ್ಲಾ ನಾಯಕ ನೀನಾ-ನಾನಾ ಎಂಬ ಧೋರಣೆಯಿಂದ ಬಹುತೇಕ ಎಲ್ಲರೂ ಭ್ರಮನಿರಸನರಾಗಿದ್ದರು.

ರಾಜ್ಯ ರಾಜಕೀಯಕ್ಕೆ ದಾವಣಗೆರೆ ಎಷ್ಟು ಮಹತ್ವದ್ದೆಂಬ ಅರಿವು ಯಡಿಯೂರಪ್ಪನವರಿಗೆ ಇದೆ. ಇಲ್ಲಿ ಬಿಜೆಪಿ ಕಟ್ಟಾ ಬೆಂಬಲಿಗರ ಜೊತೆಗೆ ಯಡಿಯೂರಪ್ಪ ಅಭಿಮಾನಿಗಳೂ ಇದ್ದಾರೆ. ಜಾತ್ಯತೀತವಾಗಿ ಬಿಎಸ್‌ವೈ ಮೇಲೆ ಅಭಿಮಾನ ಇಟ್ಟವರಿದ್ದಾರೆ. ಇಂತಹ ನಗರ, ಜಿಲ್ಲೆಯ ನರನಾಡಿ ಬಗ್ಗೆಯೂ ಬಿಎಸ್‌ವೈಗೆ ಅರಿವಿದೆ. ಯಡಿಯೂರಪ್ಪ ಜೊತೆಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆನ್ನಿಗೆ ಯುವ ಪಡೆ ನಿಂತಿದೆ. ಒಟ್ಟಾರೆ, ದಾವಣಗೆರೆ ಜಿಲ್ಲಾ ನಾಯಕರಲ್ಲಿ ಎಂತಹದ್ದೇ ಗೊಂದಲ, ಭಿನ್ನಾಭಿಪ್ರಾಯ ಇದ್ದರೂ ಅದನ್ನು ಫೆ.8ರ ರಾತ್ರಿಯೇ ಇತ್ಯರ್ಥಪಡಿಸಿ, ಗುರುವಾರ ರಾತ್ರಿಯೇ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಮರೆತು, ಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿ ಗೆಲುವಿಗೆ ದುಡಿಯುವಂತೆ ಕಿವಿ ಹಿಂಡುವ ಕೆಲಸವನ್ನು ಯಡಿಯೂರಪ್ಪ, ಈಶ್ವರಪ್ಪ ಸಹ ಮಾಡಲಿದ್ದಾರೆ.

ಸಿದ್ದೇಶ್ವರರನ್ನೇ ಬತ್ತಳಿಕೆಯಲ್ಲಿರಿಸಿ ಹೊಸ ಪ್ರಯೋಗ?

ವಿಧಾನಸಭೆ ಚುನಾವಣೆ ವೇಳೆ ಇಂತಹದ್ದೇ ಭಿನ್ನಾಭಿಪ್ರಾಯ, ಗೊಂದಲ, ಪ್ರಯೋಗಕ್ಕೆ ಕೈ ಹಾಕಿ, ಕೈ ಸುಟ್ಟುಕೊಂಡ ಬಿಜೆಪಿಯಂತೂ ಸದ್ಯಕ್ಕೆ ಲೋಕಸಭೆ ಚುನಾವಣೆಯಲ್ಲಿ ಅಂತಹ ಯಾವುದೇ ಪ್ರಯೋಗ, ದುಸ್ಸಾಹಸವನ್ನು ಮಾಡುವ ಸಾಧ್ಯತೆ ಇಲ್ಲ. ದಾವಣಗೆರೆ ಕ್ಷೇತ್ರವನ್ನೂ ಎಂದಿನಂತೆ ಗೆಲ್ಲಬೇಕು. ಗೆಲ್ಲಲು ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿ ಸಬೇಕು. ಸಹಜವಾಗಿಯೇ ಇದನ್ನೆಲ್ಲಾ ಅವಲೋಕಿಸಿದಾಗ ಸತತ 4 ಚುನಾವಣೆಗಳಲ್ಲಿ ಗೆದ್ದ ಸಂಸದ ಡಾ.ಜಿ.ಎಂ.ಸಿದ್ದೇಶ್ವರರನ್ನೇ ಬತ್ತಳಿಕೆಯಲ್ಲಿಟ್ಟುಕೊಂಡು, ಹೊಸ ಪ್ರಯೋಗ ಮಾಡುವ ಸಾಧ್ಯತೆ ಕಡಿಮೆ.

ಮತ್ತೊಂದು ಕಡೆ ಪಕ್ಷ ಟಿಕೆಟ್ ನೀಡಿದರೆ ತಾವು ಸ್ಪರ್ಧೆಗೆ ಸಿದ್ಧರೆಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ, ಎಕೆ ಫೌಂಡೇಷನ್ ಸಂಸ್ಥಾಪಕ ಕೆ.ಬಿ.ಕೊಟ್ರೇಶ ಹೀಗೆ ನಾನಾ ಹೆಸರು ಕೇಳಿ ಬರುತ್ತಿವೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಅದಕ್ಕಾಗಿ ಎಂತಹದ್ದೇ ತ್ಯಾಗಕ್ಕೆ ತಾವು ಸಿದ್ಧ ಎನ್ನುವವರೇ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಅನುಭವದ ಮುಂದೆ, ರಾಜಕೀಯ ಲೆಕ್ಕಾಚಾರ, ನಡೆ, ಮಾತುಗಳ ಮುಂದೆ ಯಾರ ಮಾತು ನಡೆಯುವುದಿಲ್ಲ. ಸ್ವತಃ ಎಲ್ಲರಿಗೂ ಅದರ ಅರಿವೂ ಇದೆ. ಹಾಗಾಗಿ ಕೆಲ ಗಂಟೆಯಲ್ಲೇ ದಾವಣಗೆರೆ ಜಿಲ್ಲಾ ಬಿಜೆಪಿ ಕಗ್ಗಂಟ್ಟನ್ನು ಬಿಎಸ್ವೈ ಬಿಚ್ಚಿ, ಲೋಕಸಭೆ ಚುನಾವಣೆ ಸಜ್ಜಾಗುವಂತೆ ಫರ್ಮಾನು ಹೊರಡಿಸುವ ಸಾಧ್ಯತೆಯೇ ಹೆಚ್ಚಾಗಿದೆ.