ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಹಾಲುಮತ ಸಮಾಜ ಹಾಗೂ ಯಡಿಯೂರಪ್ಪನವರ ಕುಟುಂಬಕ್ಕೂ ಅವಿನಾಭಾವ ಸಂಬಂದವಿದ್ದು, ಯಡಿಯೂರಪ್ಪನವರನ್ನು ದೇಶಕ್ಕೆ ಪರಿಚಯಿಸಿದ ಹೆಗ್ಗಳಿಕೆ ತಾಲೂಕಿನ ಹಾಲುಮತ ಸಮಾಜಕ್ಕೆ ಸಲ್ಲುತ್ತದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.ಮಂಗಳವಾರ ಪಟ್ಟಣದ ಮಾಯಪ್ಪನ ಕೇರಿಯಲ್ಲಿನ ಶ್ರೀ ಸಿರ್ಸಿ ಮಾರಿಕಾಂಬ ದೇವಿ ದೇವಸ್ಥಾನದ ಕಳಸಾರೋಹಣ ಮತ್ತು ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಸಮೀಪದ ಶ್ರೀ ಗಿಡ್ಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಧರ್ಮ ಸಭೆಯನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹಾಲುಮತ ಸಮಾಜ ತಾಲೂಕಿನಲ್ಲಿ ಯಡಿಯೂರಪ್ಪನವರಿಗೆ ರಾಜಕೀಯ ಜೀವನದ ಆರಂಭದಿಂದಲೂ ಬೆಂಬಲವನ್ನು ನೀಡಿದ್ದು, ಈ ದಿಸೆಯಲ್ಲಿ ಯಡಿಯೂರಪ್ಪನವರ ಕುಟುಂಬ ಹಾಗೂ ಹಾಲುಮತ ಸಮಾಜಕ್ಕೆ ಅವಿನಾಭಾವ ಸಂಬಂದವಿದೆ. ಯಡಿಯೂರಪ್ಪನವರು ಕ್ಷೇತ್ರದ ಶಾಸಕರಾಗಿ ವಿಪಕ್ಷ ನಾಯಕರಾಗಿ ಮುಖ್ಯಮಂತ್ರಿಯಾಗುವ ಜತೆಗೆ ಸಹೋದರ ರಾಘಣ್ಣ 4 ಬಾರಿ ಸಂಸದರಾಗಿ ಇದೀಗ ನಾನು ಕ್ಷೇತ್ರದ ಶಾಸಕನಾಗಲು ಹಾಲುಮತ ಸಮಾಜದ ಬೆಂಬಲ ಹೆಚ್ಚಿದ್ದು ಯಡಿಯೂರಪ್ಪನವರನ್ನು ದೇಶಕ್ಕೆ ಪರಿಚಯಿಸಿದ ಹೆಗ್ಗಳಿಕೆ ಹಾಲುಮತ ಸಮಾಜಕ್ಕೆ ಸಲ್ಲುತ್ತದೆ ಎಂದರು.ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕು ಜಿಲ್ಲೆ ಹಾಗೂ ರಾಜ್ಯದ ನೂರಾರು ದೇವಸ್ಥಾನ ಮಠ ಮಂದಿರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಿದ್ದು, ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ಸಹಸ್ರಾರು ದೇವಾಲಯಗಳು ಅಭಿವೃದ್ದಿ ಹೊಂದಿದ್ದು ಆ ನಂತರದಲ್ಲಿ ಯಡಿಯೂರಪ್ಪನವರ ಅಧಿಕಾರದ ಅವಧಿಯಲ್ಲಿ ಅತಿ ಹೆಚ್ಚು ದೇವಸ್ಥಾನಗಳ ಅಭಿವೃದ್ದಿಯಾಗಿದೆ ಎಂದು ಬಣ್ಣಿಸಿದರು. ಇದರೊಂದಿಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಕನಕ ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿಸಿ ಸರ್ಕಾರಿ ರಜೆ ಘೋಷಿಸಿದರು. ಕಾಗಿನೆಲೆ ಕನಕ ಗುರುಪೀಠದ ಅಭಿವೃದ್ದಿಗೆ ಪ್ರಾಧಿಕಾರ ರಚಿಸಿ 3 ಕೋಟಿ ರು. ಹಾಗೂ ಕನಕದಾಸರ ಜನ್ಮಸ್ಥಳ ಬಾಡ ಅಭಿವೃದ್ದಿಗೆ ರು.1.25 ಕೋಟಿ, ಬೆಳಗಾವಿಯ ನಂದಗಡದಲ್ಲಿನ ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳ ಅಭಿವೃದ್ದಿಗೆ ರು.1 ಕೋಟಿ ಅನುದಾನ ನೀಡಲಾಗಿದೆ ಎಂದು ಸ್ಮರಿಸಿದರು.
ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಹಾಲುಮತ ಸಮಾಜ ಹಾಲು ಅನ್ನ ನೀಡಿ ಬೆಳೆಸಿದ್ದು, ಅಧಿಕಾರ ಸ್ಥಾನಮಾನ ಶಕ್ತಿ ನೀಡಿ ಬೆಳೆಸಿದ ಪರಿಣಾಮ ದೇವಸ್ಥಾನದ ಅಭಿವೃದ್ದಿಗೆ ಸಹಕರಿಸಲು ಸಾಧ್ಯವಾಗಿದೆ. ಸಿರ್ಸಿ ಮಾರಿಕಾಂಬ ದೇವಸ್ಥಾನದ ಅಭಿವೃದ್ದಿಗೆ ರು.50 ಲಕ್ಷ, ಗಿಡ್ಡೇಶ್ವರ ದೇವಸ್ಥಾನಕ್ಕೆ ರು.1 ಕೋಟಿ, ಕನಕ ಭವನ ನಿರ್ಮಾಣಕ್ಕೆ ರು.2 ಕೋಟಿ, ಬೀರಲಿಂಗೇಶ್ವರ ದೇವಸ್ಥಾನಕ್ಕೆ ರು.25 ಲಕ್ಷ ಸಹಿತ ವಿವಿಧ ದೇವಾಲಯದ ಅಭಿವೃದ್ದಿಗೆ ನೀಡಿ ಸಮಾಜ ಶಕ್ತಿ ತುಂಬಲಾಗಿದೆ ಎಂದರು.ಕನಕ ಗುರುಪೀಠದ ಉಭಯ ಶ್ರೀಗಳು ನೈತಿಕ ಶಕ್ತಿಯಾಗಿದ್ದು ಎಲ್ಲ ಧರ್ಮ ಕಾರ್ಯಕ್ಕೆ ಖುದ್ದು ಆಗಮಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ ಅವರ ಅಪೇಕ್ಷೆಗೆ ಅನುಗುಣವಾಗಿ ಅಗತ್ಯವಾದ ಎಲ್ಲ ಧರ್ಮ ಕಾರ್ಯಕ್ಕೆ ಕೈಜೋಡಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ವಹಿಸಿದ್ದ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮಿಗಳು ಅನುಗ್ರಹ ಸಂದೇಶ ನೀಡಿದರು. ಯಡಿಯೂರಪ್ಪನವರು ಗುರುವಾಕ್ಯ ಪರಿಪಾಲನೆಗೆ ಹೆಚ್ಚಿನ ಮಹತ್ವ ನೀಡಿದ್ದು ಪುತ್ರರು ಗುರುವಾಕ್ಯದ ಜತೆಗೆ ಪಿತೃವಾಕ್ಯ ಪರಿಪಾಲನೆ ಮೂಲಕ ಮಾದರಿಯಾಗಿದ್ದಾರೆ ಎಂದರು. ಯಡಿಯೂರಪ್ಪನವರನ್ನು ಆದರ್ಶವಾಗಿಸಿಕೊಂಡು ಜಾತಿ ರಾಜಕಾರಣಕ್ಕೆ ಆಸ್ಪದ ನೀಡದೆ ಎಲ್ಲ ಜನತೆಯ ಕಲ್ಯಾಣವನ್ನು ಮುಖ್ಯವಾಗಿಸಿ ಶ್ರಮಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಸಹಿತ ಗಣ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಅಶೋಕಪ್ಪ, ಭದ್ರ ಕಾಡಾ ಮಾಜಿ ಅಧ್ಯಕ್ಷ ಮಹಾದೇವಪ್ಪ, ಮುಖಂಡ ಗೋಣಿ ಮಾಲತೇಶ, ಟಿ.ಎಸ್ ಮೋಹನ್, ವಸಂತಗೌಡ, ಸಂಕ್ರಿ ಸೋಮಪ್ಪ, ಪಚ್ಚಿ ಗಿಡ್ಡಪ್ಪ, ಚೌಟಗಿ ಪರಶುರಾಮ, ಬಿ.ಸಿ ವೇಣು ಗೋಪಾಲ್, ಗಿಡ್ಡಪ್ಪ ಚೋರಡಿ, ಪುರಸಭಾ ಸದಸ್ಯ ಹುಲ್ಮಾರ್ ಮಹೇಶ್, ಗೋಣಿ ಪ್ರಕಾಶ್, ಲಕ್ಷ್ಮಿ,ಶಕುಂತಲಮ್ಮ, ಜಯಶ್ರೀ, ಕಮಲಮ್ಮ ಮತ್ತಿತರರು ಉಪಸ್ಥಿತರಿದ್ದರು. ಜಾಹ್ನವಿ ಚೌಟಿ ಪ್ರಾರ್ಥಿಸಿ, ಗಿರೀಶ್ ಸ್ವಾಗತಿಸಿ, ಬಿ.ಎಲ್ ರಾಜು ನಿರೂಪಿಸಿ ವಂದಿಸಿದರು.