ಸಾರಾಂಶ
ಗದಗ: ಬುದ್ಧ, ಬಸವ, ಅಂಬೇಡ್ಕರ್ ಮಹಾನ್ ವ್ಯಕ್ತಿಗಳು, ಜೀವಪರ ಕಾಳಜಿಯುಳ್ಳವರು. ಸಮಸ್ತ ಜೀವರಾಶಿಗಳಿಗೆ ಕಲ್ಯಾಣ ಬಯಸುವ ವಿಶೇಷ ವ್ಯಕ್ತಿತ್ವ ಹೊಂದಿದ್ದ ಅವರು ಮಹಾಮಾನವತಾವಾದಿಗಳು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ನಗರದ ಜ. ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2694ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 2500 ವರ್ಷಗಳ ಹಿಂದೆ ವೇದ, ಆಗಮ, ಧರ್ಮ, ದೇವರು, ವರ್ಗ, ವರ್ಣಗಳ ಹೆಸರಿನಲ್ಲಿ ಶೋಷಣೆ, ಭೇದ-ಭಾವ ನಡೆಯುತ್ತಿತ್ತು. ಇಂತಹ ಅಮಾನವೀಯ ಘಟನೆಗಳು ಜರುಗುತ್ತಿರುವ ಸಂದರ್ಭದಲ್ಲಿ ಗೌತಮ ಬುದ್ಧ ಅರಮನೆಯನ್ನು ತ್ಯಾಗ ಮಾಡಿ ಧ್ಯಾನಯೋಗದ ಮೂಲಕ ಧ್ಯಾನ ಸಂಪಾದಿಸಿ ಸಮಸ್ತ ಮನುಕುಲಕ್ಕೆ ಶಾಂತಿಯ ಸಂದೇಶ ನೀಡಿದ್ದಾರೆ. ಬುದ್ಧನ ಅಷ್ಟಾಂಗಿಕ ಮಾರ್ಗ, ನಾಲ್ಕು ಆರ್ಯ ಸತ್ಯಗಳು, ಪಂಚಶೀಲಗಳನ್ನು ಇಂದು ಚಿಂತನೆ ಮಾಡುವ ಅಗತ್ಯವಿದೆ. ಬುದ್ಧನ ಮಾನವೀಯ ಸಂದೇಶಗಳು ಬಹಳಷ್ಟು ಜನರನ್ನು ಆಕರ್ಷಿಸಿ, ನೆರೆ ರಾಷ್ಟ್ರಗಳಿಗೂ ಹಬ್ಬಿದೆ. ಬುದ್ಧ ಬಸವ ಅಂಬೇಡ್ಕರ್ ಶೋಷಣೆ ಮತ್ತು ತುಳಿತಕ್ಕೆ ಒಳಗಾದವರನ್ನು ಮೇಲಕ್ಕೆತ್ತಿ ಮಹಾ ಮಾನವತಾವಾದಿಗಳಾಗಿದ್ದಾರೆ ಎಂದರು.ಕೆ.ಎ. ಬಳಿಗೇರ ಉಪನ್ಯಾಸ ನೀಡಿ, ಗೌತಮ ಬುದ್ಧರು ಸತ್ಯ, ಅಹಿಂಸೆ, ಅಸ್ತೆಯ, ಬ್ರಹ್ಮಚರ್ಯ ಈ ನಾಲ್ಕು ವಿಷಯಗಳಿಗೆ ಬಹಳಷ್ಟು ಒತ್ತನ್ನು ಕೊಟ್ಟಿದ್ದಾರೆ. ಬೌದ್ಧ ಧರ್ಮ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆ ನೀಡಿದೆ. ಗೌತಮ ಬುದ್ಧನ ಸಂದೇಶಗಳು ನೋಂದ ಮನಸ್ಸಿಗೆ, ಬೆಂದ ಹೃದಯಕ್ಕೆ ಸಾಂತ್ವನ ನೀಡಿ ಸಮಾಜದಲ್ಲಿ ಶಾಂತಿ, ಸಾಮರಸ್ಯತೆ ಉಂಟಾಗುವಂತೆ ಮಾಡಲು ಬುದ್ಧನ ತತ್ವಗಳು ಇವತ್ತಿಗೂ ಅಗತ್ಯವಾಗಿವೆ ಎಂದರು.
ಬೌದ್ಧ ಅನುಯಾಯಿ ವೆಂಕಟೇಶಯ್ಯ ಮಾತನಾಡಿ, ಪಂಚಶೀಲಗಳನ್ನು ಒಳಗೊಂಡಿರುವ ಬುದ್ಧ ವಂದನೆಯನ್ನು ಹೇಳಿ ಅನೇಕ ಮಹತ್ವದ ಸಂಗತಿಗಳನ್ನು ತಿಳಿಸಿಕೊಟ್ಟರು.ಈ ವೇಳೆ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪವಿತ್ರಾ ಹನಮಪ್ಪ ಹೊಸಳ್ಳಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಗದಗ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಸೌಜನ್ಯ ದೊಡ್ಡಯಲ್ಲಪ್ಪ ಸಿಡ್ಲಣ್ಣವರ ಅವರನ್ನು ಪೂಜ್ಯರು ಸನ್ಮಾನಿಸಿದರು.
ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ತಂಡದವರು ವಚನ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಮಲ್ಲಿಕಾರ್ಜುನ ದೇವಲಾಪೂರ, ವಚನ ಚಿಂತನೆಯನ್ನು ಪ್ರಭು ಮೂಲಿಮನಿ ನೆರವೇರಿಸಿದರು. ಶಿವಾನುಭವದ ದಾಸೋಹ ಭಕ್ತಿಸೇವೆ ವಹಿಸಿಕೊಂಡಿದ್ದ ಈಶಣ್ಣ ಮುನವಳ್ಳಿ ಅವರನ್ನು ಪೂಜ್ಯರು ಸನ್ಮಾನಿಸಿದರು.ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.