ಬುದ್ಧ ಧಮ್ಮವು ಇಡೀ ವಿಶ್ವಕ್ಕೆ ಶಾಂತಿ, ಸಮಾನತೆ ಹಾಗೂ ಸಹೋದರತ್ವದ ಸಂದೇಶ ನೀಡಿದೆ. ಬುದ್ಧರು ತೋರಿಸಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕೆಂದು ಬೀದರ್ ಶಾಸಕ ರಹೀಂ ಖಾನ್ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಬುದ್ಧ ಧಮ್ಮವು ಇಡೀ ವಿಶ್ವಕ್ಕೆ ಶಾಂತಿ, ಸಮಾನತೆ ಹಾಗೂ ಸಹೋದರತ್ವದ ಸಂದೇಶ ನೀಡಿದೆ. ಬುದ್ಧರು ತೋರಿಸಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕೆಂದು ಬೀದರ್ ಶಾಸಕ ರಹೀಂ ಖಾನ್ ಕರೆ ನೀಡಿದರು.ನಗರದ ಬ್ಯಾಂಕ್ ಕಾಲೋನಿ, ರಾಮಪುರ ಕಾಲೋನಿ ಹಾಗೂ ಕುಂಬಾರವಾಡದ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ವರ್ಷಾವಾಸ ಮುಕ್ತಾಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬುದ್ಧರು ಜ್ಞಾನೋದಯ ಪಡೆದ ನಂತರ 18 ವರ್ಷಗಳ ಬಳಿಕ ತಮ್ಮ ತಾಯ್ನಾಡಿಗೆ ಮರಳಿ, ಪ್ರತಿಯೊಬ್ಬರೂ ಸ್ವಯಂ ಪ್ರಕಾಶಿತರಾಗಬೇಕು ಎಂಬ ಸಂದೇಶ ನೀಡಿದರು.
ಯಾವುದೇ ಧರ್ಮವನ್ನು ನಿಂದಿಸದೆ, ಸಮಾಜದಲ್ಲಿನ ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆ ಹಾಗೂ ಲಿಂಗ ತಾರತಮ್ಯದ ವಿರುದ್ಧ ಹೋರಾಡಿ, ತ್ರಿಶರಣ, ಪಂಚಶೀಲ ಮತ್ತು ಅಷ್ಟಾಂಗ ಮಾರ್ಗಗಳ ಮೂಲಕ ಸಮಾಜಕ್ಕೆ ಬೆಳಕು ತೋರಿದರು ಎಂದು ಹೇಳಿದರು.ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಜಿಲ್ಲೆಯ ವಿವಿಧ ಭಜನಾ ತಂಡಗಳಿಂದ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು. ಸ್ಪರ್ಧೆಯಲ್ಲಿ ಪ್ರಬುದ್ಧ ಭಾರತ ತಂಡ ಪ್ರಥಮ ಬಹುಮಾನವಾಗಿ 10 ಸಾವಿರ, ಕರ್ನಾಟಕ ಪಂಚಶೀಲ ಸಾಹಿತ್ಯ ಪರಿಷತ್ತು ದ್ವಿತೀಯ 5 ರು.ಸಾವಿರ ಹಾಗೂ ಬೋಧಿವೃಕ್ಷ ತಂಡ ತೃತೀಯ 3 ಸಾವಿರ ರು. ಪಡೆದುಕೊಂಡವು. ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ನೀಡಿದ ಉಳಿದ ಭಜನಾ ತಂಡಗಳಿಗೆ ತಲಾ 1 ಸಾವಿರ ರು. ಪ್ರೋತ್ಸಾಹಧನ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಾರ್ಡ್ ಸಂಖ್ಯೆ- 29ರ ಕಾರ್ಪೊರೇಟರ್ ಪ್ರಭುಶೆಟ್ಟಿ ಪಾಟೀಲ ಹಾಗೂ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ದ ಅಧ್ಯಕ್ಷ ವಿನೋದ ಕುಮಾರ ಅಪ್ಪೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಂತೆ ವರಜ್ಯೋತಿ, ಭಂತೆ ಸಂಘರಕ್ಷಿತ, ಭಂತೆ ಎಸ್. ಹಾಗೂ ಭಂತೆ ಧಮ್ಮಕೀರ್ತಿ ಸಾನ್ನಿಧ್ಯ ವಹಿಸಿದ್ದರು.ಸಿದ್ಧಾರ್ಥ ಬುದ್ಧ ವಿಹಾರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಭಾಷ್ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಖಜಾಂಚಿ ಬಕ್ಕಪ್ಪ ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು. ಸಂಗಮ ಭೀಮರಾವ್ ನಿರೂಪಿಸಿ ದರು. ಸಮಿತಿಯ ಕಾರ್ಯದರ್ಶಿ ನಾಗಸೇನ ಗಾಯಕವಾಡ ವಂದಿಸಿದರು.
ಕಾರ್ಯಕ್ರಮ ಆಯೋಜನಾ ಸಮಿತಿಯ ಉಪಾಧ್ಯಕ್ಷೆ ಜಗದೇವಿ ಕೆ. ಭಂಡಾರೆ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಎಚ್. ಮೊಳಕೆರೆ, ಸಂಘಟನಾ ಕಾರ್ಯದರ್ಶಿ ರಂಗಮ್ಮ ಬಿ. ಕಡೆ, ಸನರಿಂಗ ವರ್ಮಾ, ಸಮಿತಿ ಸದಸ್ಯರಾದ ಬಾಬುರಾವ್ ಸಿ. ಹೊಸಮನಿ, ಗೋರಖನಾಥ ಸದಾಫುಲೆ, ಪುಣ್ಯಾವತಿ, ಪಪ್ಪಾ, ದ್ರೌಪದಿ ಮಳ್ಳಿ, ಚಿತ್ರಮ್ಮ, ಭಾಸ್ಕರ್, ವೀರಣ್ಣ ಟಿ. ಚಂದನ, ತುಕಾರಾಮ ಜಿ. ದೇವನೂರೆ ಹಾಗೂ ಕಾನೂನು ಸಲಹೆಗಾರ ರಾಜಕುಮಾರ ಚಿಮಕೋಡೆ ಸೇರಿದಂತೆ ಬುದ್ಧ ಉಪಾಸಕರು, ಉಪಾಸಿಕೆಯರು, ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.--
ಚಿತ್ರ 12ಬಿಡಿಆರ್51:ಬೀದರ್ ನಗರದ ಬ್ಯಾಂಕ್ ಕಾಲೋನಿ, ರಾಮಪುರ ಕಾಲೋನಿ ಹಾಗೂ ಕುಂಬಾರವಾಡದ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ವರ್ಷಾವಾಸ ಮುಕ್ತಾಯ ಸಮಾರಂಭ ಜರುಗಿತು.