ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಎಲ್ಲಾ ಸಮಸ್ಯೆಗಳಿಗೂ ವೈಚಾರಿಕ ನೆಲೆಗಟ್ಟಿನಲ್ಲೇ ಪರಿಹಾರವನ್ನು ಬುದ್ಧ ಹಾಗೂ ಅಂಬೇಡ್ಕರ್ ಹೇಳಿದ್ದಾರೆ ಎಂದು ಖ್ಯಾತ ವಿಮರ್ಶಕ ಡಿ.ಎ. ಶಂಕರ್ ಹೇಳಿದರು.ಮಾನಸ ಗಂಗೋತ್ರಿಯ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಗುರುವಾರ 2568ನೇ ಬುದ್ಧ ಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ ಧಮ್ಮಪದ: ಜಾಗತಿಕ ಅನಿವಾರ್ಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ನೋವು, ನಲಿವು ನಮ್ಮ ಅಸ್ತಿತ್ವದಲ್ಲಿಯೇ ಇರುವಂಥದ್ದು. ನಾವು ವೈಚಾರಿಕವಾಗಿ ಯೋಚಿಸಬೇಕು. ಮನಸ್ಸು ಎಂಬ ಜಮೀನಿನ ಕಳೆಯನ್ನು ಕೀಳುತ್ತಾ ಹೋಗಬೇಕು. ಇಲ್ಲದಿದ್ದರೆ ಜಮೀನಿನಂತೆ ದೇಹವೂ ಹಾಳು ಬಿದ್ದು ಹೋಗುತ್ತದೆ. ಅಧ್ಯಾತ್ಮ ಸ್ವಾವಲಂಬನೆ ಎಂಬುದು ನಮಗೆ ಬುದ್ಧನ ಬಳುವಳಿ. ಅದಕ್ಕಿಂತ ಹಿಂದೆ ಮಂತ್ರ ತಂತ್ರ ಜಪ ಎಲ್ಲವೂ ಗುರು ಮೂಲಕವೇ ಆಗಬೇಕಿತ್ತು ಎಂದರು.ಬುದ್ಧ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದ. ಮನಸ್ಸನ್ನು ತಿಳಿದುಕೊಳ್ಳುವುದರಿಂದಲೇ ಸತ್ಯದರ್ಶನ ಆಗುತ್ತದೆ. ಆದ್ದರಿಂದ ನಿಮಗೆ ನೀವೇ ದೀಪವಾಗಬೇಕು. ಸಾವು ಬಂದೇ ಬರುತ್ತದೆ. ಸಂಯುಕ್ತ ವಸ್ತುಗಳುವಿಭಜಿತ ಆಗಲೇಬೇಕು. ನಾವು ಸಾವನ್ನು ಸಹಜ ಎಂದು ತಿಳಿಸಿದವರು. ಮನಸ್ಸು ನೇರವಾಗಿದ್ದರೆ ಸಾವಿನ ಬಗ್ಗೆ ಭಯ ಇರುವುದಿಲ್ಲ ಎಂದು ಅವರು ವಿಶ್ಲೇಷಿಸಿದರು.
ಬಯಕೆ ತೃಷೆಯಿಂದ ಮುಕ್ತರಾದರೆ ಅದೇ ಪರಿನಿರ್ವಾಣ. ಮನುಷ್ಯನಿಗೆ ನಾನಾ ರೀತಿಯ ಬಾಯಾರಿಕೆಗಳಿವೆ. ಅವುಗಳಿಂದ ಬಿಡುಗಡೆ ಹೊಂದಿದರೆ ಮಾತ್ರ ತೃಷೆಯಿಂದ ಮುಕ್ತವಾಗುತ್ತೇವೆ ಎಂದರು.ಇಂದು ಸಹಜತೆಯೇ ಇಲ್ಲವಾಗಿದೆ. ಎಲ್ಲವೂ ಉದ್ವಿಗ್ನ ನಡವಳಿಕೆಯೇ ಕಂಡುಬರುತ್ತಿದೆ. ಅಹಿಂಸೆ, ಆತ್ಮಹತ್ಯೆ, ಅತ್ಯಾಚಾರ ನಡೆಯುತ್ತಲೇ ಇದೆ. ಈ ಉದ್ವಿಗ್ನ ಮನಸ್ಥಿತಿಗೆ ಉಪಶಮನದ ಅಗತ್ಯವಿದೆ. ಧಮ್ಮಪದ ಅವಶ್ಯವಿದೆ. ಉದ್ವೇಗರಹಿತ ಶಾಂತ ಆರೋಗ್ಯಕರ ಮನಸ್ಥಿತಿಗೆ ಧಮ್ಮಪದ ಅನಿವಾರ್ಯವಿದೆ. ಅವುಗಳನ್ನು ಓದಿ ಧ್ಯಾನಿಸುವ ಅಗತ್ಯವಿದೆ ಅವರು ಕರೆ ನೀಡಿದರು. ಕಾಲೇಜುಗಳಲ್ಲಿ ಪಾಳಿ ಭಾಷೆ ಕಲಿಯಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಅದರಿಂದ ಬಹಳ ಅನುಕೂಲ ಆಗುತ್ತದೆ ಎಂದರು. ಬೈಲುಕುಪ್ಪೆ ಸೆರಾ ಜೆ ಮೊನಾಸ್ಟಿಕ್ವಿವಿಯ ಭಿಕ್ಕು ಜಂಪಾ ಗ್ಯಾಲ್ಸ್ಟೇನ್, ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್, ಡಾ.ಎಸ್. ನರೇಂದ್ರಕುಮಾರ್ ಇದ್ದರು.
ಗಾಂಧಿನಗರದಲ್ಲಿ ಬುದ್ಧ ಜಯಂತಿ ಆಚರಣೆಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ಗಾಂಧಿನಗರದಲ್ಲಿರುವ ಉರಿಲಿಂಗಿ ಪೆದ್ದೇಶ್ವರ ಮಠದಲ್ಲಿ ಜೈ ಭೀಮ್ ಜನಸ್ಪಂದನ ವೇದಿಕೆ ವತಿಯಿಂದ ಬುದ್ಧ ಜಯಂತಿಯನ್ನು ಗುರುವಾರ ಆಚರಿಸಲಾಯಿತು.
ಬುದ್ಧನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಶರತ್ ಸತೀಶ್ ಮಾತನಾಡಿ, ಗೌತಮ ಬುದ್ಧರು ಜಗತ್ತಿನ ಜನರಲ್ಲಿ ಆಳವಾಗಿ ಬೇರೂರಿದ್ದ ವೇದಗಳೆ ಪ್ರಮಾಣವೆಂಬ ನಂಬಿಕೆಯನ್ನು ಮತ್ತು ಅವುಗಳ ಅಧಿಕಾರವನ್ನು ತರ್ಕ ಬದ್ಧ ವಿಚಾರದಿಂದ ಸತ್ಯಾನ್ವೇಷಣೆ ಸಾಧ್ಯವೆಂಬುದನ್ನು ಸಾಧಿಸಿ ತೋರಿದ ಮಹಾನ್ ಚೇತನ. ತನ್ನ ತತ್ವ ಸಿದ್ಧಾಂತಗಳ ಮೂಲಕ ಇಡೀ ಏಷ್ಯಾಖಂಡಕ್ಕೆ ಜ್ಞಾನದ ಬೆಳಕು ಹೊತ್ತಸಿದ ಮಹಾನ ಜ್ಯೋತಿ ಎಂದರು.ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜ್ ಮಾತನಾಡಿ, ಬುದ್ಧನ ವಿಚಾರವು ಭಾವನಾತ್ಮಕ, ವೈಚಾರಿಕ, ಆಧ್ಯಾತ್ಮಿಕ, ವೈಜ್ಞಾನಿಕ ವಿಚಾರಗಳಾಗಿದ್ದು. ಸಮಾಜಮುಖಿ ಚಿಂತನೆ ಅವರ ಮೂಲ ಉದ್ದೇಶವಾಗಿತ್ತು. ಬಹುಜನ ಹಿತಾಯ ಬಹುಜನ ಸುಖಾಯ ಲೋಕಾನು ಕಂಪಾಯ ಎಂಬುವುದು ಬುದ್ಧ ಅವರ ಹಿತನುಡಿ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಬುದ್ಧನ ಪಂಚಶೀಲವನ್ನು ಹಿರಿಯರಾದ ಸ್ವಾಮಿ ನಡೆಸಿಕೊಟ್ಟರು.ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಉದಯ್ ಕುಮಾರ್, ಎಂಡಿಎ ಮಾಜಿ ಸದಸ್ಯ ಸಿ.ಜಿ. ಶಿವಕುಮಾರ್, ಚಿಂತಕ ಸಿದ್ದರಾಜು, ಕರ್ನಾಟಕ ಭೀಮ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಮಂಜುನಾಥ್, ಮುಖಂಡರಾದ ಕಿರಣ್ ಕುಮಾರ್, ರಮೇಶ್, ನಾಗಣ್ಣ, ರಮೇಶ್, ಕುಮಾರ್ ಮೊದಲಾದವರು ಇದ್ದರು.