ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
೨೫೬೯ನೇ ಪವಿತ್ರ ವೈಶಾಖ ಬುದ್ಧ ಪೂರ್ಣಿಮಾವನ್ನು ಮೇ ೧೨ ರಂದು ಪ್ರತಿಮೆ, ಭಾವಚಿತ್ರದೊಂದಿಗೆ ರಥದ ಮೆರವಣಿಗೆ ನಂತರ ಹಾಸನಾಂಬ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ಎಚ್.ಟಿ. ಬಸವರಾಜು ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕ್ರಿ.ಪೂ. ೬೨೩ನೇ ವೈಶಾಖ ಹುಣ್ಣಿಮೆಯ ದಿನದಂದು ಸಿದ್ದಾರ್ಥ ಗೌತಮರ ಜನನವಾಗುತ್ತದೆ. ಯುವಕ ಸಿದ್ದಾರ್ಥ ಗೌತಮರು ಸಮಾಜದಲ್ಲಿನ ತಾರತಮ್ಯ, ಅಸಮಾನತೆ, ಮೇಲುಕೀಳು, ಮೌಢ್ಯಗಳ ನಿವಾರಣೆಗಾಗಿ ೨೯ನೇ ವಯಸ್ಸಿನಲ್ಲಿ ತನ್ನ ಸಂಸಾರಿಕ ಜೀವನ, ಸಂಪತ್ತು, ರಾಜ್ಯಾಧಿಕಾರ ತೊರೆದು ಸುಮಾರು ೬ ವರ್ಷಗಳ ಸತತ ಧ್ಯಾನದ ಮೂಲಕ ತನ್ನ ೩೫ನೇ ವಯಸ್ಸಿನಲ್ಲಿ ಪ್ರಾಕೃತಿಕ ಜ್ಞಾನೋದಯ ಪಡೆಯುತ್ತಾರೆ. ಮನುಷ್ಯನ ದುಃಖ ವಿನಾಶಕ್ಕೆ ಪಂಚಶೀಲ, ಅಷ್ಟಾಂಗ ಮಾರ್ಗಗಳನ್ನು ಬೋಧಿಸಿ ಸಂತೋಷಮಯ ಜೀವನ ನಡೆಸಲು ದಾರಿ ತೋರುತ್ತಾರೆ. ಜಗತ್ತಿನಲ್ಲಿ ಮನುಷ್ಯನ ದುಃಖಕ್ಕೆ ಮದ್ದನ್ನು ಕಂಡು ಹಿಡಿದ ಮೊದಲ ವೈದ್ಯರಾಗುತ್ತಾರೆ ಎಂದರು.ನಮಗೆ ಯುದ್ಧ ಬೇಡ ಬುದ್ಧ ಬೇಕು ಎನ್ನುವಷ್ಟರ ಮಟ್ಟಿಗೆ ಬುದ್ಧರ ಪ್ರೀತಿ, ಕರುಣೆ, ಮೈತ್ರಿ, ಸಮಾನತೆ, ಅನುಕಂಪ ಜಗತ್ತಿನಲ್ಲೆಡೆ ಪ್ರಕಸರ ಬೆಳಕಾಗಿ ಬೆಳಗುತ್ತಿದೆ. ಬುದ್ಧದ ಜ್ಞಾನೋದಯ ದಿನ ವೈಖಾಖ ಹುಣ್ಣಿಮೆಯಾಗಿತ್ತು. ಬುದ್ಧರು ತನ್ನ ೮೦ನೇ ವಯಸ್ಸಿನಲ್ಲಿ ಮಹಾಪರಿ ನಿಬ್ಬಾಣ ಹೊಂದುತ್ತಾರೆ. ಅಂದು ಸಹ ವೈಶಾಖ ಹುಣ್ಣಿಮೆಯಾಗಿತ್ತು. ಭಗವಾನ್ ಬುದ್ಧರ ಜೀವನದಲ್ಲಿ ಅವರ ಹುಟ್ಟು, ಜ್ಞಾನೋದಯ ಮತ್ತು ಮಹಾಪರಿನಿಬ್ಬಾಣ ಈ ಮೂರು ಘಟನೆಗಳು ವೈಶಾಖ ಹುಣ್ಣಿಮೆಯಂದೇ ನಡೆದಿರುವುದರಿಂದ “ಬುದ್ಧ ಪೂರ್ಣಿಮೆ”ಯು ಪ್ರಪಂಚದ ಎಲ್ಲಾ ಬೌದ್ಧರಿಗೂ ಅತ್ಯಂತ ಪವಿತ್ರ ದಿನವಾಗಿರುತ್ತದೆ. ಪ್ರಪಂಚದ ಸುಮಾರು ೩೦ ರಾಷ್ಟ್ರಗಳಲ್ಲಿ ರಾಷ್ಟ್ರೀಯ ಹಬ್ಬವಾಗಿ ಆಚರಣೆಯಾಗಿ ಮಾಡಲಾಗುತ್ತಿದೆ ಎಂದರು.
೧೯೩೫ನೇ ಇಸವಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರವರು "ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ” ಎಂದು ಶಪಥ ಮಾಡಿದ ನಂತರ ಸುಮಾರು ೨೨ ವರ್ಷಗಳ ಕಾಲ ಎಲ್ಲಾ ಧರ್ಮಗಳನ್ನು ಸತತವಾಗಿ ಅಧ್ಯಯನ ಮಾಡಿ ೧೯೫೬ ಅಕ್ಟೋಬರ್ ೧೪ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಸುಮಾರು ಎಂಟುವರೆ ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮಕ್ಕೆ ಮರಳುತ್ತಾರೆ.ಕಾರಣ, ಬೌದ್ಧ ಧಮ್ಮ, ಭಾರತೀಯ ಧಮ್ಮ, ಬೌದ್ಧಧಮ್ಮದಲ್ಲಿ ಸಮಾನತೆ, ಸೋದರತೆ, ಸಹಬಾಳ್ವೆ, ಪ್ರೀತಿ, ಕರುಣೆ, ಮೈತ್ರಿ ಹಾಗೂ ಮಾನವೀಯತೆಗೆ ಪ್ರಾಮುಖ್ಯತೆ ಇರುವುದರಿಂದ ನನ್ನ ಜನರಿಗೆ ಇದು ಸೂಕ್ತವಾಗಿದೆ ಎಂದು ತಿಳಿದು ಬೌದ್ಧಧಮ್ಮ ಸ್ವೀಕರಿಸುತ್ತಾರೆ. ಮಹಾಸಭಾ ಸಂಸ್ಥೆಯನ್ನು ೧೯೫೪ ಮೇ ೪ರಂದು ಸ್ಥಾಪಿಸಿ, ಸ್ವತಃ ತಾವೇ ಅಧ್ಯಕ್ಷರಾಗುತ್ತಾರೆ. ಅವರ ಕೊನೆಯ ಆಸೆ. ಬೌದ್ಧ ಧಮ್ಮದ ಉಳಿವಿಗಾಗಿ ನನ್ನ ಜನ ಯಾವ ರೀತಿಯ ತ್ಯಾಗವನ್ನಾದರೂ ಮಾಡುತ್ತಾರೆಂದು ನಂಬಿಕೆ ಇಡುತ್ತಾರೆ. ಬನ್ನಿ, ಬಾಬಾಸಾಹೇಬರ ಅನುಯಾಯಿಗಳು, ಅಭಿಮಾನಿಗಳು, ಹಿತೈಷಿಗಳಾದ ನಾವು ಅವರ ನಂಬಿಕೆಯನ್ನು ಉಳಿಸಿಕೊಳ್ಳೋಣ. ಬಾಬಾಸಾಹೇಬರು ತೋರಿದ ಧಮ್ಮದ ಹಾದಿಯಲ್ಲಿ ನಡೆಯುವ ಮೂಲಕ ಅವರ ಆಶಯವನ್ನು ಈಡೇರಿಸೋಣ. ಮೆರವಣಿಗೆಯು ಮೇ ೧೨ರಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಲಾಭವನದವರೆಗೆ ಬುದ್ದರ ರಥದೊಂದಿಗೆ ಬೌದ್ಧ ಧರ್ಮಿಯರು ಮೆರವಣಿಗೆಯಲ್ಲಿ ಭಾಗವಹಿಸಬೇಕು. ಎಂದು ಕರೆ ನೀಡಿದರು.
ಮುಯತ್ರೆಯ ಬುದ್ಧ ವಿಹಾರ ಅಧ್ಯಕ್ಷ ಟಿ. ಅನಂತಸ್ವಾಮಿ, ಬೌದ್ಧ ಮಹಾಸಭಾ ಅಧ್ಯಕ್ಷ ಮಲ್ಲಯ್ಯ ಬೌದ್, ಭಾರತೀಯ ಬೌದ್ಧಮಹಾಸಭಾ ಕಾರ್ಯದರ್ಶಿ ಕುಮಾರ್ ಗೌರವ್, ಕೆ.ಸಿ. ನಾಗರಾಜು ಇತರರು ಉಪಸ್ಥಿತರಿದ್ದರು.