ಬುದ್ಧ, ಕಾವ್ಯ ಮತ್ತು ಬೆಳದಿಂಗಳು ಈ ಮೂರರ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಬುದ್ಧನ ಶಾಂತತೆ, ಕಾವ್ಯದ ಸೌಂದರ್ಯ ಮತ್ತು ಬೆಳದಿಂಗಳ ತಂಪು ಇವೆಲ್ಲವೂ ಸಮಾಜಕ್ಕೆ ಮತ್ತು ಮನುಷ್ಯನ ಮನಸ್ಸಿಗೆ ನೆಮ್ಮದಿಯನ್ನು ನೀಡುವ ಅಂಶಗಳು. ಅಪ್ಪ ದೀಪೋ ಭವ (ನಿನ್ನ ದೀಪ ನೀನೇ ಆಗು) ಎನ್ನುವ ಮಾತು ಬುದ್ಧ ಮನುಕುಲಕ್ಕೆ ಕೊಟ್ಟ ದೀವಿಗೆಯಾಗಿದೆ
ಕನ್ನಡಪ್ರಭ ವಾರ್ತೆ, ಕೋಲಾರ
ಬುದ್ಧನ ಬದುಕೇ ಲೌಕಿಕ ಜಗತ್ತಿಗೆ ಅಗತ್ಯವಾಗಿ ಬೇಕಿರುವ ಕಾವ್ಯಾಔಷಧವಾಗಿದ್ದು, ಸಿದ್ಧಾರ್ಥ-ಬುದ್ಧನಾಗುವ ಮಾರ್ಗದಲ್ಲಿ ಪದ ಪಾಂಡಿತ್ಯ, ಶಬ್ದ ಚಮತ್ಕಾರಕ್ಕಿಂತ ಸತ್ಯ ಮತ್ತು ಸರಳತೆ ಬುದ್ಧನ ಆಯ್ಕೆಯಾಗಿತ್ತು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಬಣ್ಣಿಸಿದರು.ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಬುದ್ಧ ಪೂರ್ಣಿಮಾ ಅಂಗವಾಗಿ ಆಯೋಜಿಸಿದ್ದ ಕಾವ್ಯ ಬೆಳದಿಂಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬುದ್ಧ, ಕಾವ್ಯ ಮತ್ತು ಬೆಳದಿಂಗಳು ಈ ಮೂರರ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಬುದ್ಧನ ಶಾಂತತೆ, ಕಾವ್ಯದ ಸೌಂದರ್ಯ ಮತ್ತು ಬೆಳದಿಂಗಳ ತಂಪು ಇವೆಲ್ಲವೂ ಸಮಾಜಕ್ಕೆ ಮತ್ತು ಮನುಷ್ಯನ ಮನಸ್ಸಿಗೆ ನೆಮ್ಮದಿಯನ್ನು ನೀಡುವ ಅಂಶಗಳು. ಅಪ್ಪ ದೀಪೋ ಭವ (ನಿನ್ನ ದೀಪ ನೀನೇ ಆಗು) ಎನ್ನುವ ಮಾತು ಬುದ್ಧ ಮನುಕುಲಕ್ಕೆ ಕೊಟ್ಟ ದೀವಿಗೆಯಾಗಿದೆ ಎಂದು ಅವರು ನುಡಿದರು.
ಮನುಕುಲಕ್ಕೆ ದಾರಿದೀಪ: ಸಿದ್ಧಾರ್ಥನಿಂದ ಬುದ್ಧನಾದ ಆ ಮಹಾಚೇತನದ ಪಯಣವೇ ಒಂದು ಅದ್ಭುತ ಕಾವ್ಯವಾಗಿದೆ. ಅಧಿಕಾರದ ಅರಮನೆಯ ಸುಖವನ್ನು ತೊರೆದು, ಸುಳ್ಳು ಮತ್ತು ನಕಲಿತನದ ಕ್ಷಣಿಕತೆಯ ಹೊದಿಕೆಯನ್ನು ಕಿತ್ತೆಸೆದು ಸತ್ಯವನ್ನು ಅರಸಿ ಹೊರಟ ಸಿದ್ಧಾರ್ಥ ಇಟ್ಟ ಆ ಹೆಜ್ಜೆಗಳು ಇಂದಿಗೂ ಮನುಕುಲಕ್ಕೆ ದಾರಿದೀಪ ಮಾತ್ರವಲ್ಲ, ಈ ಮಹಾಚೇತನದ ಪಯಣವೇ ಒಂದು ಅದ್ಭುತ ಕಾವ್ಯ ಎಂದು ಬಣ್ಣಿಸಿದರು. ಬದುಕು ಒಡ್ಡುವ ಎಲ್ಲ ಬಗೆಯ ತಲ್ಲಣಗಳಿಗೆ ಕಾವ್ಯದಲ್ಲಿ ಮದ್ದು ಅಡಗಿದೆ. ಲಂಡನ್ ನಲ್ಲಿ ಪೊಯಿಟ್ರಿ ಥೆರಪಿ (ಕಾವ್ಯ ಚಿಕಿತ್ಸೆ) ಯನ್ನು ವೈದ್ಯರು ನಿರ್ದಿಷ್ಟ ರೋಗಕ್ಕೆ ಸೂಚಿಸುವ ಪದ್ಧತಿ ಇದೆ. ಆದರೆ ಬುದ್ಧನ ಬದುಕಿನ ಪ್ರತಿ ಹೆಜ್ಜೆಗಳೂ ಮೌನ ಮತ್ತು ಅರಿವಿನ ಕುಲುಮೆಯಲ್ಲಿ ಖುದ್ದು ರೂಪುಗೊಂಡ ಕಾವ್ಯಗಳಾಗಿವೆ. ಬೆಳದಿಂಗಳು ಬಾಹ್ಯ ಪ್ರಪಂಚವನ್ನು ಸುಂದರಗೊಳಿಸಿದರೆ, ಬುದ್ಧನ ಚಿಂತನೆಗಳ ಕಾವ್ಯವು ಮನುಷ್ಯನ ಅಂತರಂಗವನ್ನು ಶುದ್ಧಗೊಳಿಸುತ್ತದೆ ಎಂದು ವಿವರಿಸಿದರು. ಸಿದ್ಧಾರ್ಥ- ಬುದ್ಧನಾಗುವ ಮಾರ್ಗದಲ್ಲಿ ಪದ ಪಾಂಡಿತ್ಯ, ಶಬ್ದ ಚಮತ್ಕಾರದ ಕುಣಿಕೆಗೆ ಜೋತು ಬೀಳಲಿಲ್ಲ. ಸತ್ಯ ಮತ್ತು ಸರಳತೆ ಬುದ್ಧನ ದೃಷ್ಟಿಯಾಗಿತ್ತು ಎಂದು ಪ್ರಭಾಕರ್ ಹೇಳಿದರು. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವೆಂಕಟೇಶಯ್ಯ, ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ. ಕೆ. ರವಿ, ಹಿರಿಯ ಪತ್ರಕರ್ತರೂ ಲೇಖಕರೂ ಆದ ಜಿ.ಎನ್. ಮೋಹನ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.ಫೋಟೋ ಇವತ್ತಿನ ಡೇಟ್‌ಲ್ಲಿ