ಯುದ್ಧದ ಕ್ರೌರ್ಯವೆ ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ಬುದ್ಧ ಅತ್ಯಂತ ಪ್ರಸ್ತುತ. ಅಹಿಂಸೆ ಮತ್ತು ಅಸಮಾನತೆಯ ಸಮಾಜದಲ್ಲಿ ಬುದ್ಧರ ಚಿಂತನೆಗಳು ಪ್ರಭಾವಿಸಲಿದೆ. ಅಯೋಧ್ಯೆ ರಾಮಮಂದಿರ ಕಟ್ಟುವ ಸಂದರ್ಭದಲ್ಲಿಯೂ ಬುದ್ಧನ ಮೂರ್ತಿಗಳೆ ಮೊದಲು ಸಿಕ್ಕವು. ಆದರೆ ಪ್ರಚಾರಕ್ಕೆ ಬರಲಿಲ್ಲ. ಈಗ ಬುದ್ಧ ಧಮ್ಮ ಭಾರತದಲ್ಲಿ ಬೆಳೆಯುತ್ತಿದೆ. ಇದು ಸಂತಸದ ವಿಷಯ.
ಕನ್ನಡಪ್ರಭ ವಾರ್ತೆ ಮೈಸೂರು
ಅಹಿಂಸೆ ಮತ್ತು ಅಸಮಾನತೆಯ ಸಮಾಜದಲ್ಲಿ ಬುದ್ಧರ ಚಿಂತನೆಗಳು ಸಮಾಜ ಸುಧಾರಕರನ್ನು ಪ್ರಭಾವಿಸಲಿದೆ ಎಂದು ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.ನಗರದ ಎಂಜಿನಿಯರ್ ಗಳ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ, ಮೈಸೂರು ವಿವಿ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಉಳುಮೆ ಪ್ರತಿಷ್ಠಾನ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಎಚ್.ಎಸ್. ಅನುಪಮಾ ಅವರ ಬುದ್ಧ ಧಮ್ಮ ಮತ್ತು ಸಮಾಜ ಸುಧಾರಕರು ಹಾಗೂ ಬುದ್ಧ, ಧಮ್ಮ ಮತ್ತು ಮಹಿಳೆ ಕುರಿತ ಕೃತಿ ಬಿಡುಗೊಳಿಸಿ ಅವರು ಮಾತನಾಡಿದರು.
ಯುದ್ಧದ ಕ್ರೌರ್ಯವೆ ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ಬುದ್ಧ ಅತ್ಯಂತ ಪ್ರಸ್ತುತ. ಅಹಿಂಸೆ ಮತ್ತು ಅಸಮಾನತೆಯ ಸಮಾಜದಲ್ಲಿ ಬುದ್ಧರ ಚಿಂತನೆಗಳು ಪ್ರಭಾವಿಸಲಿದೆ. ಅಯೋಧ್ಯೆ ರಾಮಮಂದಿರ ಕಟ್ಟುವ ಸಂದರ್ಭದಲ್ಲಿಯೂ ಬುದ್ಧನ ಮೂರ್ತಿಗಳೆ ಮೊದಲು ಸಿಕ್ಕವು. ಆದರೆ ಪ್ರಚಾರಕ್ಕೆ ಬರಲಿಲ್ಲ. ಈಗ ಬುದ್ಧ ಧಮ್ಮ ಭಾರತದಲ್ಲಿ ಬೆಳೆಯುತ್ತಿದೆ. ಇದು ಸಂತಸದ ವಿಷಯ ಎಂದರು.ಬಸವಣ್ಣ ಕ್ರಾಂತಿಕಾರಿ ಪುರುಷ. ವೈದಿಕ ವಿರೋಧಿ ಧರ್ಮವನ್ನು ಅವರು ಹುಟ್ಟಿ ಹಾಕಿದರು. ಅವರು ಸಮಾಜಕ್ಕೆ ಬೋಧಿಸಿರುವ ವಿಚಾರಗಳು ಒಂದು ಧರ್ಮಕ್ಕೆ ಸಮಾನವಾಗಿದೆ. ಆದರೆ, ಈಗ ಬಸವಣ್ಣ ಅವರ ಸ್ಥಾಪಿಸಿದ ಧರ್ಮದ ವಿರುದ್ಧವಾದ ಚರ್ಚೆ ನಡೆಯುತ್ತಿದೆ. ಬೌದ್ಧ ಧಮ್ಮದ ವಿಚಾರಗಳು ಬಸವವಾದಿ ಶರಣರ ವಚನಗಳಲ್ಲಿ ಪುನರ ವರ್ತಿತವಾಗಿವೆ. ಜೊತೆಗೆ ವಚನಗಳ ಮೂಲಕ ಕನ್ನಡದಲ್ಲಿ ಧಮ್ಮವನ್ನು ಕಟ್ಟಿಕೊಟ್ಟಿದ್ದಾರೆ ಎಂದರು.
ಭಾರತದಲ್ಲಿ ಒಂದು ಸಾವಿರ ವರ್ಷಗಳ ಕಾಲ ಬುದ್ಧ ಧಮ್ಮ ಪ್ರಮುಖ ಧರ್ಮವಾಗಿತ್ತು. ಅಶೋಕನ ಕಾಲದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಯುದ್ಧ ಪ್ರಿಯನಾಗಿದ್ದ ಅಶೋಕ ಕಳಿಂಗ ಯುದ್ಧದ ರಕ್ತಪಾತ ಕಂಡು ಕುಪಿತಗೊಂಡ. ಆ ನಂತರ ಯುದ್ಧ ಮಾಡದೆ ಬೌದ್ಧ ಧಮ್ಮ ಪ್ರಚಾರ ಮಾಡುತ್ತ ರಾಜ್ಯವನ್ನು ವಿಸ್ತರಿಸಿಕೊಂಡನು. ಆತ ಇಲ್ಲದಿದ್ದರೆ ಬೌದ್ಧ ಧಮ್ಮ ಭಾರತದಲ್ಲಿ ಇರುತ್ತಿರಲಿಲ್ಲ ಎಂದರು.ಭಾರತದಿಂದ ಬೌದ್ಧ ಧಮ್ಮವನ್ನು ಪಲಾಯನಗೊಳಿಸಲು ರಕ್ತಪಾತವೇ ನಡೆದಿದೆ. ಇದಕ್ಕೆ ಮುಸ್ಲಿಂರು ಕಾರಣವೆಂದು ಕೆಲವು ಸಂಘಗಳು ಬರೆಯುತ್ತಿವೆ. ಆದರೆ, ಸತ್ಯವಲ್ಲ. ಅದಾದ ನಂತರ ಬ್ರಿಟಿಷರ ಆಡಳಿತದಲ್ಲಿ ಬೌದ್ಧ ಧಮ್ಮ ಮತ್ತೆ ಮುನ್ನಲೆಗೆ ಬಂದಿತು. ಅಲ್ಲಮನ ವಚನಗಳಲ್ಲಿ ಬೌದ್ಧ ಧಮ್ಮ ತುಂಬಿದೆ ಎಂದು ಡಿ.ಆರ್.ನಾಗರಾಜು ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ ಅವರ ಪುಸ್ತಕದಲ್ಲಿ ಬರೆದಿದ್ದಾರೆ. ವಚನಕಾರರಿಗೆ ಬುದ್ಧ ಧಮ್ಮ ಸ್ಪೂರ್ತಿಯಾಗಿದೆ ಎನ್ನುವುದನ್ನು ಶರಣರ ವಚನಗಳೇ ತಿಳಿಸಲಿವೆ ಎಂದು ಹೇಳಿದರು.
ಕೃತಿಗಳ ಕುರಿತು ಹಿರಿಯ ಪತ್ರಕರ್ತ ಚ.ಹ. ರಘುನಾಥ್ ಮಾತನಾಡಿದರು. ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ವಿಶ್ರಾಂತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಆರ್. ಕುಮಾರ್, , ಉಪನ್ಯಾಸಕಿ ಕೀರ್ತಿ ಎಸ್ ಬೈಂದೂರು, ಸಂಶೋಧಕಿ ದೀಪಾ ಬುದ್ಧೆ ಪುಸ್ತಕ ಓದಿನ ಅನುಭವ ಹಂಚಿಕೊಂಡರು.