ಸಾರಾಂಶ
ಶಿವಮೊಗ್ಗ: ಬುದ್ಧ ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಬೆಳಕು ನೀಡಿದ್ದು, ಆ ಮೂಲಕ ಶಾಂತಿ, ಸಹಬಾಳ್ವೆಯ ಮಾರ್ಗವನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಭಗವಾನ್ ಶ್ರೀ ಬುದ್ಧರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.ಈ ದೇಶಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಜ್ಞಾನದ ಶಕ್ತಿ ಕೊಟ್ಟಿದ್ದಾರೆ. ಇವರುಗಳು ಆಧ್ಯಾತ್ಮಿಕ, ವೈಚಾರಿಕತೆ ನೆಲೆಗಟ್ಟಿನ ಮಾರ್ಗ ತೋರಿಸಿದ್ದು, ಅದರಲ್ಲಿ ಬುದ್ಧ ಸದಾ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ಬುದ್ಧನ ನಡುವಳಿಕೆ, ಪದ್ಧತಿ ಈ ದೇಶಕ್ಕೆ ಪೂರಕವಾಗಿತ್ತು. ಅಂಬೇಡ್ಕರ್ ಬುದ್ಧನನ್ನು ಅಪ್ಪಿಕೊಂಡರು ಎಂದರು.
ಬುದ್ಧ ಈ ದೇಶಕ್ಕೆ ಶಾಂತಿಯನ್ನು ಸಾರಿದ್ದಾರೆ. ಆ ದಿಸೆಯಲ್ಲೆ ಬೆಳಗ್ಗೆ ಎದ್ದ ತಕ್ಷಣ ನಾವು ಬುದ್ಧನನ್ನು ನೆನೆಯುತ್ತೇವೆ. ನಾವೆಲ್ಲಾ ಆತನಂತೆ ದ್ವೇಷವನ್ನು ಬಿಟ್ಟು ಒಬ್ಬರಿಗೊಬ್ಬರು ಈ ದೇಶದಲ್ಲಿ ಶರಣಾಗಬೇಕು. "ಬುದ್ಧಂ ಶರಣಂ ಗಚ್ಚಾಮಿ " ಎಂಬ ಆಶಯವನ್ನು ಪ್ರತಿಯೊಬ್ಬ ವ್ಯಕ್ತಿ ತಮ್ಮೊಳಗೆ ಅಳವಡಿಸಿಕೊಳ್ಳಬೇಕು. ಬುದ್ಧ, ಬಸವ, ಅಂಬೇಡ್ಕರ್ ಈ ದೇಶದ ತ್ರಿವೇಣಿ ಸಂಗಮ. ಈ ಮೂರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ನಡೆಯಬೇಕು ಎಂದು ಕರೆ ನೀಡಿದರು.ಉಪನ್ಯಾಸಕ ರಘು ಆರ್.ಮಲ್ಲಣ್ಣರ್ ಮಾತನಾಡಿ, ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಬುದ್ಧನ ತತ್ವಗಳು ಅನೇಕ ರೀತಿಯಲ್ಲಿ ಪ್ರಚಾರವಾಗಿದೆ. ತತ್ವಶಾಸ್ತ್ರದ ಪ್ರತಿಪಾದಕದ 9ನೇ ದರ್ಶನವನ್ನು ಬುದ್ಧ ದರ್ಶನವೆಂದು ವಿದ್ವಾಂಸರುಗಳು ಹೇಳಿದ್ದು, ಇದನ್ನು ಪ್ರತೀಕಾರದ ದರ್ಶನವೆಂದು ಸಹ ಕರೆದಿದ್ದಾರೆ. ಈ ದೇಶದ ಎಲ್ಲಾ ಧರ್ಮಕ್ಕೆ ರಾಜಾಶ್ರಯವಿದೆ. ಆದರೆ ಬುದ್ಧನ ಧರ್ಮಕ್ಕೆ ಯಾವುದೇ ರಾಜಾಶ್ರಯವಿಲ್ಲ. ಆದರೆ ಇಡೀ ದೇಶವೇ ಬುದ್ಧ ತತ್ವದ ಮಾರ್ಗವನ್ನು ಒಪ್ಪಿಕೊಂಡು ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಬುದ್ಧನ ಕೃತಿ, ತತ್ವದ ಮೇಲೆ ಇಂದಿಗೂ ಅತ್ಯಧಿಕವಾಗಿ ಸಂಶೋಧನೆ ನಡೆಯುತ್ತಿದೆ. ಜಗತ್ತಿನಲ್ಲಿ ಅಷ್ಟು ಸಂಶೋಧನೆ ಯಾವ ಕೃತಿಯ ಮೇಲು ನಡೆದಿಲ್ಲ. ರಾಜ ಕುಟುಂಬದಲ್ಲಿ ಹುಟ್ಟಿದ್ದರೂ ಯುದ್ಧಾಭ್ಯಸದಲ್ಲಿ ತೊಡಗದೆ ಬಾಲ್ಯದಿಂದಲ್ಲೇ ಮನುಷ್ಯ ಪ್ರೀತಿ ಹೊಂದಿದ್ದ ಬುದ್ಧ ಭವಿಷ್ಯದಲ್ಲಿ ಇಡೀ ಜಗತ್ತಿಗೆ ಮನುಷ್ಯ ಪ್ರೀತಿ ಹಾಗೂ ಶಾಂತಿಯನ್ನು ಸಾರಿದ ಎಂದರು.ರಾಜ ಕರ್ತವ್ಯವನ್ನು ತಿಳಿಸಿದ ತನ್ನ ತಾಯಿಗೆ ಮನುಷ್ಯ ಮನುಷ್ಯನನ್ನು ಕೊಲ್ಲುವುದು ಯಾವ ಕರ್ತವ್ಯವೆಂದು ಪ್ರಶ್ನಿಸಿದ. ತಂದೆ ಶುದ್ದೋಧನು ಕೂಡ ಬುದ್ಧನಿಗೆ ಸಾಮಾಜಿಕ ಅರಿವು ಮೂಡಿಸಲು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ, ಅಲ್ಲಿನ ರೈತರೊಂದಿಗೆ ಭೂಮಿಯಲ್ಲಿ ಉಳುಮೆ ಮಾಡುವುದು ಅವರೊಂದಿಗೆ ಸ್ನೇಹದೊಂದಿಗೆ ಬೆರೆಯುವುದನ್ನು ಕಲಿಸುತ್ತಿದ್ದ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕೊಲೆ, ಸುಲಿಗೆ, ಅತ್ಯಾಚಾರಗಳಂತಹ ಅನಾಚಾರಗಳು ದೇಶದ ಉದ್ದಗಲಕ್ಕೂ ಹರಡಿದೆ. ಇದನ್ನು ನಾಶ ಮಾಡಲು ಬುದ್ಧ ತತ್ವಗಳಿಂದ ಮಾತ್ರ ಸಾಧ್ಯ. ಈಗೀನ ಯುವಕರು ಕೆಟ್ಟಚಟಗಳಿಗೆ ದಾಸರಾಗಿ ಕಿನ್ನತೆಗೆ ಒಳಗಾಗುತ್ತಿದ್ದಾರೆ. ಇದರಿಂದ ಆಚೆ ಬರಲು ಬುದ್ಧ ತತ್ವವೇ ಸರಿಯಾದ ಮಾರ್ಗ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಸ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ರಾಮಣ್ಣ, ಭದ್ರಾವತಿಯ ಸಂವಕ್ ಬುದ್ಧ ಧರ್ಮಾಂಕುರ ಟ್ರಸ್ಟ್ ಉಪಾಧ್ಯಕ್ಷ ಸಾವಕ್ಕನವರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಎಚ್.ಉಮೇಶ್ ಉಪಸ್ಥಿತರಿದ್ದರು.