ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಸರ್ಕಾರವು ಶ್ರೀಮಂತರ ಹಿತಕಾಯಲು ದೇಶದ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್ ಆರೋಪಿಸಿದರು.ನಗರದ ಬುದ್ದ ವಿಹಾರದಲ್ಲಿ ಶನಿವಾರ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ (ಕೆಆರ್ ಪಿಎಸ್) ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡುವುದಾಗಿ ದೇಶದುದ್ದಕ್ಕೂ ಭಾಷಣ ಮಾಡಿ, ಅಧಿಕಾರಕ್ಕೆ ಬಂದ ನಂತರ ರೈತರನ್ನ ಮರೆತು ಅದಾನಿ- ಅಂಬಾನಿಯಂತ ಶ್ರೀಮಂತರಿಗಾಗಿ ದೇಶವನ್ನು ಲೂಟಿ ಮಾಡಲು ನೀತಿಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಒಂದೆಡೆ ಬೆಳೆಗಳಿಗೆ ಬೆಲೆ ಇಲ್ಲದೆ, ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ, ಮತ್ತೊಂದೆಡೆ ಇದೇ ಶ್ರೀಮಂತ ಕಂಪನಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಕೃಷಿ ಲಾಗುವಾಡುಗಳ ಬೆಲೆ ಏರಿಸಿ ಕಂಪನಿಗಳಿ ಲಾಭ ಮಾಡಿಕೊಡುತ್ತಿದೆ. ಇಂತಹ ರೈತ ವಿರೋಧಿ ನೀತಿಗಳ ವಿರುದ್ಧ ರೈತರು ಸಂಘಟಿತರಾಗಿ ಹೋರಾಟಕ್ಕೆ ಮಾಡದಿದ್ದರೆ ರೈತ ಸಂತತಿಯೇ ನಾಶವಾಗಿ, ನಮ್ಮ ಭೂಮಿಯಲ್ಲಿ ನಾವೇ ಜೀತಗಾರರಾಗಬೇಕಾದ ಪರಿಸ್ಥಿತಿ ಬರಲಿದೆ ಎಂದು ಅವರು ಎಚ್ಚರಿಸಿದರು.ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ಕೃಷಿ ಮಾಡಲು ರೈತರಿಗೆ ಅಗತ್ಯವಾಗಿ ಬೇಕಿರುವುದು ಭೂಮಿ. ನಮ್ಮ ದೇಶದಲ್ಲಿ ಕೃಷಿ ಬಗ್ಗೆ ಜ್ಞಾನ ಇದ್ದರೂ ಭೂಮಿ ಇಲ್ಲದೇ, ಕೃಷಿ ಜ್ಞಾನ ಇಲ್ಲದ ಭೂ ಮಾಲೀಕರ ಭೂಮಿಯಲ್ಲಿ ಕೂಲಿಯಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ. 5 ಗುಂಟೆಯಿಂದ 3 ಎಕರೆ ಭೂಮಿಯಲ್ಲಿ ಯಾವುದೇ ಆಧಾರವಿಲ್ಲದೆ 50- 60 ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರ ನೀಡದೇ ಅದೇ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ರೈತರಿಗೆ ನೀಡಿ, ಅವರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಕಂಪನಿ ಮಾಡಲು ಫಲವತ್ತಾದ ಭೂಮಿ ನೀಡುವ ಸರ್ಕಾರ, ಬಡ ರೈತರಿಗೆ ಹಕ್ಕು ಪತ್ರ ನೀಡದೆ ವಂಚಿಸುತ್ತಿದೆ. ಆಳುವ ಸರ್ಕಾರದ ಇಂತಹ ಜನ ವಿರೋಧಿ ನೀತಿಗಳ ಬಗ್ಗೆ ರೈತರು ಜಾಗೃತರಾಗಬೇಕು. ಅದಕ್ಕಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಅವರು ಕರೆ ನೀಡಿದರು.ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಕೆ. ಬಸವರಾಜ್, ನೂರಾಣಿ, ಜಿಲ್ಲಾ ಖಜಾಂಚಿ ಚಂದ್ರಶೇಖರ್, ಮೈಸೂರು ತಾಲ್ಲೂಕು ಅಧ್ಯಕ್ಷ ದೂರ ಲೋಕೇಶ್, ಕಾರ್ಯದರ್ಶಿ ಜಯಪುರ ಮಹೇಶ್, ಪಿರಿಯಾಪಟ್ಟಣ ತಾಲೂಕು ಸಂಚಾಲಕ ಕಣಗಾಲು ಲೋಕೇಶ್, ಎಚ್.ಡಿ. ಕೋಟೆ ಕಾರ್ಯದರ್ಶಿ ಪ್ರಶಾಂತ್, ಸರಗೂರು ತಾಲೂಕು ಉಪಾಧ್ಯಕ್ಷ ಕೂಲ್ಯ ಮಹದೇವ, ಸಿದ್ದಯ್ಯ, ಪುಟ್ಟರಾಚ, ಐಚನಳ್ಳಿ ಕುಮಾರ್ ಮೊದಲಾದವರು ಇದ್ದರು.