ಜಗತ್ತಿನಾದ್ಯಂತ ಅಶಾಂತಿ, ಅಸಹನೆ ಮತ್ತು ಹಿಂಸಾಚಾರ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ, ಭಗವಾನ್ ಬುದ್ಧರ ಶಾಂತಿ, ಕರುಣೆ, ಸಮಾನತೆ, ಅಹಿಂಸೆಯ ಬೋಧನೆಗಳು ಮಾನವಕುಲದ ಸಂಕಷ್ಟಗಳಿಗೆ ಪರಿಹಾರವಾಗಬಲ್ಲವು ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಗತ್ತಿನಾದ್ಯಂತ ಅಶಾಂತಿ, ಅಸಹನೆ ಮತ್ತು ಹಿಂಸಾಚಾರ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ, ಭಗವಾನ್ ಬುದ್ಧರ ಶಾಂತಿ, ಕರುಣೆ, ಸಮಾನತೆ ಹಾಗೂ ಅಹಿಂಸೆಯ ಬೋಧನೆಗಳು ಮಾನವಕುಲದ ಸಂಕಷ್ಟಗಳಿಗೆ ಪರಿಹಾರವಾಗಬಲ್ಲವು ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನದಲ್ಲಿ ಪಾಲ್ಗೊಂಡು, ಭಗವಾನ್ ಬುದ್ಧ ಹಾಗೂ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಬುದ್ಧರ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ ಎಂದರು.
ಸಾವಿರಾರು ವರ್ಷಗಳ ಹಿಂದೆಯೇ ಬುದ್ಧರು ಶಾಂತಿ, ಸಮಾನತೆ ಮತ್ತು ಅಹಿಂಸೆಯ ಸಂದೇಶವನ್ನು ಜಗತ್ತಿಗೆ ಸಾರಿದ್ದರು. ಕುರುಡು ನಂಬಿಕೆಗಳಿಗಿಂತ ವಿಚಾರವಿಮರ್ಶೆ, ವೈಚಾರಿಕತೆ ಮತ್ತು ಸತ್ಯಾನ್ವೇಷಣೆಗೆ ಮಹತ್ವ ನೀಡಿದ ಬುದ್ಧರು, ಯಾವುದೇ ವಿಚಾರವನ್ನು ಪ್ರಶ್ನಿಸದೆ ಒಪ್ಪಿಕೊಳ್ಳಬಾರದು. ಅದನ್ನು ಸ್ವತಃ ಪರಿಶೀಲಿಸಿ, ಸತ್ಯವೆಂದು ಮನಗಂಡ ಬಳಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ವೈಜ್ಞಾನಿಕ ಮನೋಭಾವವನ್ನು ಬೋಧಿಸಿದರು. ಈ ಮೂಲಕ ಮಾನವೀಯತೆ ಮತ್ತು ವೈಚಾರಿಕತೆಗೆ ಆದ್ಯತೆ ನೀಡಿದ ಮಹಾನ್ ಚೇತನವಾಗಿ ಬುದ್ಧರು ಜಗತ್ತಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.ವರ್ಣವ್ಯವಸ್ಥೆ ಹಾಗೂ ಜಾತಿ ಆಧಾರಿತ ಅಸಮಾನತೆಯನ್ನು ತಿರಸ್ಕರಿಸಿದ ಬುದ್ಧರು, ಪ್ರತಿಯೊಬ್ಬ ಮನುಷ್ಯನೂ ಸಮಾನ ಎಂಬ ಉದಾತ್ತ ಸಂದೇಶವನ್ನು ಸಾರಿದರು. ಬುದ್ಧರ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಉತ್ತಮ ಸಮಾಜವನ್ನು ನಿರ್ಮಿಸಬಹುದು. ದೇಶದಲ್ಲಿ ಶಾಂತಿ, ಸಹನೆ ಮತ್ತು ಕರುಣೆ ನೆಲೆಸಬೇಕಾದರೆ ಬೌದ್ಧ ಧರ್ಮದ ತತ್ವಗಳು ಹಾಗೂ ಬುದ್ಧರ ವಿಚಾರಗಳು ಪ್ರತಿಯೊಂದು ಜಿಲ್ಲೆಗೂ ತಲುಪಬೇಕು ಎಂದು ತಿಳಿಸಿದರು.
ದಲಿತರು, ಶೋಷಿತರು, ಮಹಿಳೆಯರು ಹಾಗೂ ಸಮಾಜದ ಅಂಚಿನಲ್ಲಿರುವ ಜನರು ಗೌರವದಿಂದ ಮತ್ತು ಸ್ವಾಭಿಮಾನದಿಂದ ಬದುಕುವ ಹಕ್ಕು ದೊರಕಿಸಿಕೊಟ್ಟ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್. ಅವರು ರಚಿಸಿದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯ, ಸಮಾನತೆ ಮತ್ತು ಹಕ್ಕುಗಳ ಭದ್ರತೆಯನ್ನು ಒದಗಿಸಿದೆ ಎಂದು ಹೇಳಿದರು.ಸಮಾಜದಲ್ಲಿ ಬೇರೂರಿದ್ದ ಜಾತಿ ಆಧಾರಿತ ತಾರತಮ್ಯವನ್ನು ಪ್ರಶ್ನಿಸಿದ ಅಂಬೇಡ್ಕರ್ ಅವರು, ಸಮಾನತೆ ಮತ್ತು ಮಾನವ ಘನತೆಯನ್ನು ಪ್ರತಿಪಾದಿಸುವ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ನಮ್ಮ ಸಂವಿಧಾನದ ಪೀಠಿಕೆಯಲ್ಲಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಆಶಯಗಳಿಗೆ ಬೌದ್ಧ ಚಿಂತನೆಗಳು ಮಹತ್ವದ ಪ್ರೇರಣೆಯಾಗಿವೆ. ಬಾಬಾಸಾಹೇಬರು ಯಾವ ಆದರ್ಶಗಳಿಗಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಿದರೋ, ಆ ಆದರ್ಶಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದೇಶವು ಯಾವುದೇ ಒಂದು ಧರ್ಮದ ಆಧಾರದ ಮೇಲೆ ನಡೆಯದೆ, ಸಂವಿಧಾನದ ಆಶಯಗಳ ಆಧಾರದ ಮೇಲೆ ಮುನ್ನಡೆಯಬೇಕು ಎಂಬುದು ಅಂಬೇಡ್ಕರ್ ಅವರ ಚಿಂತನೆಯಾಗಿತ್ತು. ಸಂವಿಧಾನವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸಂವಿಧಾನದ ಮೌಲ್ಯಗಳಲ್ಲಿ ಅಚಲ ನಂಬಿಕೆ ಹೊಂದಿರುವ ಹಾಗೂ ಅದರ ಆಶಯಗಳನ್ನು ಕಾಪಾಡಲು ಬದ್ಧರಾಗಿರುವವರನ್ನು ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಬೇಕು ಎಂದು ಹೇಳಿದರು.ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ಮೆಚ್ಚುಗೆ:
ಭಾರತೀಯ ಬೌದ್ಧ ಮಹಾಸಭಾದ ಅಧ್ಯಕ್ಷರು ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಮೊಮ್ಮಗ ಶ್ರೀ ಯಶವಂತರಾವ್ ಭೀಮರಾವ್ ಅಂಬೇಡ್ಕರ್ ಅವರನ್ನು ಕರ್ನಾಟಕಕ್ಕೆ ಸ್ವಾಗತಿಸಿ, ಇಂತಹ ಮಹತ್ವದ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನವನ್ನು ಆಯೋಜಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಕೊಳ್ಳೇಗಾಲದ ಶಾಸಕ ಎ.ಆರ್.ಕೃಷ್ಣಮೂರ್ತಿ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಬಾಬಾಸಾಹೇಬ ಅಂಬೇಡ್ಕರ್ ಮೊಮ್ಮಗ, ಭಾರತೀಯ ಬೌದ್ಧ ಮಹಾಸಭಾದ ಅಧ್ಯಕ್ಷ ಯಶವಂತರಾವ್ ಭೀಮರಾವ್ ಅಂಬೇಡ್ಕರ್, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಡಾ.ಎಚ್.ಸಿ.ಮಹದೇವಪ್ಪ, ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕರಾದ ಆರ್.ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಜ್ಞಾನಪ್ರಕಾಶ ಸ್ವಾಮೀಜಿ, ಮನೋರಕ್ಕಿತ ಬಂತೇಜಿ, ಹಿರಿಯ ಕವಿ ಶ್ರೀ ಮೂಡ್ನಾಕೂಡು ಚಿನ್ನಸ್ವಾಮಿ, ಎಸ್ಸಿ/ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ, ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಮರಿಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಶಿವಶಂಕರ್, ವೆಂಕಟರಮಣಸ್ವಾಮಿ ಪಾಪು, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜೆ.ಯೋಗೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು, ಜಿಪಂ ಮಾಜಿ ಸದಸ್ಯ ಆರ್.ಬಾಲರಾಜ್ ಸೇರಿ ಬೌದ್ಧ ಭಿಕ್ಕುಗಳು ಹಲವು ಗಣ್ಯರು ಹಾಜರಿದ್ದರು.