ಬೌದ್ಧ ಧರ್ಮ ದೇಶದಲ್ಲಿ ನಿರೀಕ್ಷೆಯಂತೆ ಬೆಳೆಯಲಿಲ್ಲ: ಸತೀಶ್‌ ಜಾರಕಿಹೊಳಿ

| Published : Apr 28 2025, 12:46 AM IST

ಬೌದ್ಧ ಧರ್ಮ ದೇಶದಲ್ಲಿ ನಿರೀಕ್ಷೆಯಂತೆ ಬೆಳೆಯಲಿಲ್ಲ: ಸತೀಶ್‌ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಬೌದ್ಧ ಧರ್ಮ ಭಾರತದಲ್ಲಿ ಬೆಳವಣಿಗೆ ಕಾಣದಿದ್ದರೂ ಚೈನಾ, ಮಂಗೋಲಿಯಾ, ಟಿಬೆಟ್‌, ಹಾಂಗ್‌ಕಾಂಗ್‌ ದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ಕಂಡಿತು. ಆರನೇ ಶತಮಾನದಲ್ಲೇ ಬುದ್ಧ ಶಾಂತಿಯ ಸಂದೇಶವನ್ನು ಸಾರಿದರು. ಆದರೆ, ಬುದ್ಧ, ಬಸವ, ಅಂಬೇಡ್ಕರ್‌ ಇವರ್ಯಾರೂ ನಮಗೆ ಆದರ್ಶವಾಗಲೇ ಇಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಆರನೇ ಶತಮಾನದಲ್ಲಿ ಜನ್ಮ ತಳೆದ ಬೌದ್ಧ ಧರ್ಮ ಭಾರತದಲ್ಲಿ ಬಹಳ ಎತ್ತರಕ್ಕೆ ಬೆಳೆಯಬೇಕಿತ್ತು. ಮನೆ ಮನೆಯನ್ನು ತಲುಪಬೇಕಿತ್ತು. ಆದರೆ, ಆ ಧರ್ಮ ನಿರೀಕ್ಷೆಯಂತೆ ಬೆಳವಣಿಗೆ ಕಾಣಲೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ವಿಷಾದಿಸಿದರು.ನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ಬುದ್ಧಿಸ್ಟ್‌ ಒಕ್ಕೂಟ, ಮಾನವ ಬಂಧುತ್ವ ವೇದಿಕೆ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಆಯೋಜಿಸಿದ್ದ ಜಿಲ್ಲಾ ಮಟ್ಟದ ಬೌದ್ಧ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಶೋಷಣೆ ವಿರುದ್ಧ ಹೋರಾಡುವ ಧರ್ಮ, ಸಂಘಟನೆಗಳನ್ನು ಮಟ್ಟಹಾಕುವ ಪ್ರಯತ್ನಗಳು ನಡೆದವು. ಬುದ್ಧನ ನಂತರ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಹುಟ್ಟುಹಾಕಿದ ಲಿಂಗಾಯತ ಧರ್ಮವನ್ನೂ ಕೂಡ ಬೆಳೆಯಲು ಬಿಡಲಿಲ್ಲ. ಅದು ಕೂಡ ಒಂದು ಜಾತಿಗೆ ಸೀಮಿತವಾಗಿ ಉಳಿದುಕೊಂಡಿದೆ ಎಂದು ಹೇಳಿದರು.ಬೌದ್ಧ ಧರ್ಮ ಭಾರತದಲ್ಲಿ ಬೆಳವಣಿಗೆ ಕಾಣದಿದ್ದರೂ ಚೈನಾ, ಮಂಗೋಲಿಯಾ, ಟಿಬೆಟ್‌, ಹಾಂಗ್‌ಕಾಂಗ್‌ ದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ಕಂಡಿತು. ಆರನೇ ಶತಮಾನದಲ್ಲೇ ಬುದ್ಧ ಶಾಂತಿಯ ಸಂದೇಶವನ್ನು ಸಾರಿದರು. ಆದರೆ, ಬುದ್ಧ, ಬಸವ, ಅಂಬೇಡ್ಕರ್‌ ಇವರ್ಯಾರೂ ನಮಗೆ ಆದರ್ಶವಾಗಲೇ ಇಲ್ಲ. ಈಗಲೂ ನಾವು ಸಂಘರ್ಷದಲ್ಲೇ ಇದ್ದೇವೆ. ನಾವು ಬದಲಾವಣೆಯಾಗಬೇಕು. ಶಿಕ್ಷಣದಿಂದ ವಂಚಿತರಾಗಿರುವುದರಿಂದ ನಾವು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದೇವೆ. ಅದಕ್ಕಾಗಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಸಲಹೆ ನೀಡಿದರು.ಬುದ್ಧನ ಸಂದೇಶ, ಬಸವಣ್ಣನವರ ಆದರ್ಶ, ಅಂಬೇಡ್ಕರ್‌ ಸಿದ್ಧಾಂತವನ್ನು ಅರಿತು ಕಳೆದುಹೋಗಿರುವ ಅವಕಾಶಗಳನ್ನು ನಾವು ಪಡೆದುಕೊಳ್ಳಬೇಕು. ಈಗಾಗಲೇ ಬಸವಣ್ಣನವರ 22 ಸಾವಿರ ವಚನಗಳಲ್ಲಿ 20 ಸಾವಿರ ವಚನಗಳನ್ನು ನಾಶ ಮಾಡಿದ್ದು, 2 ಸಾವಿರ ವಚನಗಳು ಮಾತ್ರ ಉಳಿದುಕೊಂಡಿವೆ. ಜೊತೆಗೆ ಈಗ ಅಂಬೇಡ್ಕರ್‌ರವರ ಸಂವಿಧಾನವನ್ನು ಬದಲಾವಣೆ ಮಾಡುವ ಪ್ರಯತ್ನಗಳೂ ನಡೆದಿವೆ. ಸಂವಿಧಾನದಿಂದ ಸರ್ಕಾರಿ ಹುದ್ದೆಗಳಲ್ಲಿ ಅವಕಾಶ ಸಿಕ್ಕಿದೆ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಸಂವಿಧಾನ ರಕ್ಷಣೆ ಮಾಡಿಕೊಳ್ಳುವುದಕ್ಕೆ ಪಣ ತೊಡಬೇಕು. ಸಂವಿಧಾನ ಉಳಿದಾಗ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ ಎಂದರು. ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿ, ಬೌದ್ಧ ಧರ್ಮ ಎಲ್ಲ ಧರ್ಮಗಳಿಗಿಂತಲೂ ವಿಭಿನ್ನವಾದ ಧರ್ಮ. ಇದು ಯಾವುದೇ ಜಾತಿಗೆ ಅಂಟಿಕೊಂಡಿಲ್ಲ, ಸೀಮಿತವಾಗಿಯೂ ಇಲ್ಲ. ಯಾರು ಬೇಕಾದರೂ ಈ ಧರ್ಮವನ್ನು ಸ್ವೀಕಾರ ಮಾಡಬಹುದು ಎಂದು ಹೇಳಿದರು.ವಿಶ್ವಕ್ಕೇ ಮಾದರಿಯಾಗುವಂತಹ ಸಂವಿಧಾನವನ್ನು ನೀಡಿದ ಅಂಬೇಡ್ಕರ್‌ ಕೂಡ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು. ದ್ವೇಷ, ಅಸೂಯೆಯನ್ನು ಬಿಟ್ಟು ಎಲ್ಲರನ್ನೂ ಪ್ರೀತಿಸುವ ಧರ್ಮ ಶ್ರೇಷ್ಠ ಧರ್ಮ. ನಮ್ಮ ಕಾರ್ಯಚಟುವಟಿಕೆಗಳು ನಿಸ್ವಾರ್ಥದಿಂದ ಇರಬೇಕು. ಸಮಾಜಕ್ಕೆ ಕೆಟ್ಟದ್ದನ್ನು ಮಾಡುವ ಮನಸ್ಸು ಇರಬಾರದು ಎಂದು ತಿಳಿಸಿದರು.ಶಾಸಕ ಪಿ.ರವಿಕುಮಾರ್‌ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್‌ರವರ ಸಹಬಾಳ್ವೆ, ಶಾಂತಿಯನ್ನು ನಾವೂ ಬೆಳೆಸಿಕೊಳ್ಳಬೇಕು. ಅಂಬೇಡ್ಕರ್‌ ಹಿಂದೂ ಆಗಿ ಹುಟ್ಟಿ ಬೌದ್ಧ ಧರ್ಮ ಸ್ವೀಕರಿಸಿದರು. ಭಾರತ ಸೇರಿದಂತೆ ಪ್ರಪಂಚದ 26 ದೇಶಗಳಲ್ಲಿ ಬೌದ್ಧ ಧರ್ಮ ಬೆಳೆಯುತ್ತಿದೆ. ನಾವೆಲ್ಲರೂ ಸಂವಿಧಾನದ ಪರ ಇರಬೇಕು. ಸಂವಿಧಾನ ತಿದ್ದುತ್ತೇವೆ, ಬದಲಿಸುತ್ತೇವೆ ಎನ್ನುವವರಿಗೆ ಬುದ್ಧಿ ಕಲಿಸಿ ಮನೆಗೆ ಕಳುಹಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಓ ಕೆ.ಆರ್‌.ನಂದಿನಿ, ಚನ್ನಲಿಂಗನಹಳ್ಳಿ ಬೌದ್ಧಬಿಕ್ಕು ಚೇತವನದ ಮನೋರಕ್ಷಿತ ಬಂತೇಜಿ, ಬುದ್ದಿಸ್ಟ್‌ ಒಕ್ಕೂದ ಗೌರವಾಧ್ಯಕ್ಷ ಎಂ.ಸಿ.ಬಸವರಾಜು, ಸುನಂದಾ ಜಯರಾಂ, ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ, ಎಂ.ವಿನಯ್‌ಕುಮಾರ್‌ ಇತರರಿದ್ದರು.