ಬಜೆಟ್‌ ಘೋಷಣೆಗಳು ಬರಪೂರ ಅನುಷ್ಠಾನ ಅಪೂರ್ಣ

| Published : Mar 07 2025, 12:45 AM IST

ಸಾರಾಂಶ

ಕೆಲ ವರ್ಷಗಳಿಂದ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಬಾಗಲಕೋಟೆ ಜಿಲ್ಲೆಗೆ ಘೋಷಣೆ ಆಗಿರುವ ಬಹುತೇಕ ಯೋಜನೆಗಳಿಗೆ ಅಗತ್ಯ ಅನುದಾನ ನೀಡದಿರುವ ಕಾರಣಕ್ಕೆ ಬಹುತೇಕ ಯೋಜನೆಗಳಿಗೆ ಹಿನ್ನಡೆಯಾಗಿದೆ. ಮೂರು ವರ್ಷದ ಹಿಂದೆ ಜಿಲ್ಲೆಗೆ ಘೋಷಣೆಯಾದ ಗುಳೇದಗುಡ್ಡದ ಜವಳಿ ಪಾರ್ಕ್‌ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್‌ ನಲ್ಲಿ ನಿಗದಿಯಾದ ₹5 ಸಾವಿರ ಕೋಟಿಗಳಲ್ಲಿ ನಿರೀಕ್ಷಿತ ಹಣ ನೀಡದ್ದರಿಂದ ಯೋಜನೆ ಪೂರ್ಣತೆಗೆ ಬಹುದೊಡ್ಡ ಹಿನ್ನಡೆಯಾಗಿದೆ.

ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೆಲ ವರ್ಷಗಳಿಂದ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಬಾಗಲಕೋಟೆ ಜಿಲ್ಲೆಗೆ ಘೋಷಣೆ ಆಗಿರುವ ಬಹುತೇಕ ಯೋಜನೆಗಳಿಗೆ ಅಗತ್ಯ ಅನುದಾನ ನೀಡದಿರುವ ಕಾರಣಕ್ಕೆ ಬಹುತೇಕ ಯೋಜನೆಗಳಿಗೆ ಹಿನ್ನಡೆಯಾಗಿದೆ. ಮೂರು ವರ್ಷದ ಹಿಂದೆ ಜಿಲ್ಲೆಗೆ ಘೋಷಣೆಯಾದ ಗುಳೇದಗುಡ್ಡದ ಜವಳಿ ಪಾರ್ಕ್‌ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್‌ ನಲ್ಲಿ ನಿಗದಿಯಾದ ₹5 ಸಾವಿರ ಕೋಟಿಗಳಲ್ಲಿ ನಿರೀಕ್ಷಿತ ಹಣ ನೀಡದ್ದರಿಂದ ಯೋಜನೆ ಪೂರ್ಣತೆಗೆ ಬಹುದೊಡ್ಡ ಹಿನ್ನಡೆಯಾಗಿದೆ.

ನಿರೀಕ್ಷಿತ ಅನುದಾನ ದೊರೆತಿದ್ದರೆ ಹಲವು ನೀರಾವರಿ ಯೋಜನೆಗಳು, ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲ ತುಂಬುವ ಕಾರ್ಯ ಜೊತೆಗೆ ನನೆಗುದಿಗೆ ಬಿದ್ದ ಪುನರ್ವಸತಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಅನುದಾನ ದೊರೆತು ಜಿಲ್ಲೆ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತಿತ್ತು. ಆದರೆ, ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರೀಕ್ಷಿತ ಪರಿಶ್ರಮ ಸಿಗದ ಕಾರಣ ಹತ್ತು ಹಲವು ಯೋಜನೆಗಳು ಕುಂಟುತ್ತ ಸಾಗಿದೆ.

ಬಾಗಲಕೋಟೆಗೆ ಮಂಜೂರಾದ ಸರ್ಕಾರಿ ವೈದ್ಯಕೀಯ ಕಾಲೇಜು, ವಿಜ್ಞಾನ ಕೇಂದ್ರದ ಸ್ಥಾಪನೆ, ಕೂಡಲಸಂಗಮ ಅಭಿವೃದ್ಧಿ, ಐಹೊಳೆ ಹಾಗೂ ಪಟ್ಟದಕಲ್ಲು, ಬಾದಾಮಿಯ ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳು ಬಜೆಟ್ ನಲ್ಲಿ ಪ್ರಸ್ತಾಪವಾಗಿ ನೆಪಮಾತ್ರದ ಅನುದಾನ ದೊರೆತು ವಿಳಂಬ ಕಾರ್ಯದಿಂದ ಹಿನ್ನಡೆಯಾಗಿದ್ದು, ಬಜೆಟ್ ಘೋಷಣೆಗಳೇ ಅನುಷ್ಠಾನಗೊಳ್ಳದಿದ್ದರೆ ಉಳಿದ ಭರವಸೆಗಳಿಗೆ ನ್ಯಾಯ ಹೇಗೆ ಸಿಗಲು ಸಾಧ್ಯ ಎಂಬುದು ಜನತೆಯ ಮಾತಾಗಿದೆ.

2013-14ರಲ್ಲಿ ಬಜೆಟ್ ಘೋಷಣೆಯಾದ ವೈದ್ಯಕೀಯ ಕಾಲೇಜು ಇನ್ನೂ ಕನಸಾಗಿ ಉಳಿದಿದೆ. ಇದೆ ಅವಧಿಯಲ್ಲಿ ಮಂಜೂರಾದ ವಿಜ್ಞಾನ ಕೇಂದ್ರ ಪೂರ್ಣಗೊಂಡಿಲ್ಲ, ಇಂತಹ ಮಹತ್ವಾಕಾಂಕ್ಷಿ ಯೋಜನೆಗಳೆ ಸಾಕಾರಗೊಳ್ಳುತ್ತಿಲ್ಲ, ಹೀಗಾಗಿ ಬಜೆಟ್ ಘೋಷಣೆಗಳು ಸಹ ಅರ್ಥ ಕಳೆದುಕೊಳ್ಳುವಂತಾಗಿದೆ.

ಪ್ರವಾಸೋದ್ಯಮಕ್ಕೂ ಇಲ್ಲದ ಆದ್ಯತೆ :

ಐತಿಹಾಸಿಕ ಪರಂಪರೆಯ ತಾಣಗಳಾಗಿರುವ ಐಹೊಳೆ, ಬಾದಾಮಿ, ಪಟ್ಟದಕಲ್ಲಿನ ಅಭಿವೃದ್ಧಿ ವಿಷಯ ಬಂದಾಗಲೆಲ್ಲ ದೊಡ್ಡದಾಗಿ ಮಾತನಾಡುವ ಜಿಲ್ಲೆಯ ಪ್ರತಿನಿಧಿಗಳು ಪ್ರವಾಸೋಧ್ಯಮ ಕ್ಷೇತ್ರ ಬಲ ಪಡಿಸಲು ಬೇಕಾದ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗದ ಅಸಹಾಯಕರಾಗಿದ್ದಾರೆ. ಈ ಹಿಂದೆ ಬಾದಾಮಿ ಪ್ರತಿನಿಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಳಜಿಯಿಂದ ಕೆಲವು ಕೆಲಸಗಳು ಆರಂಭವಾಗುವ ಲಕ್ಷಣಗಳು ಇವೆಯಾದರೂ ನಿರೀಕ್ಷಿತ ಅಭಿವೃದ್ಧಿ ಕಾಣುತ್ತಿಲ್ಲ. ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮದಲ್ಲಿನ ಘೋಷಿತ ಕಾಮಗಾರಿಗಳಿಗೆ ವೇಗ ಸಿಗುತ್ತಿಲ್ಲ. ಹೀಗಾದರೆ ಅಭಿವೃದ್ಧಿಯ ಕನಸು ನನಸಾಗುವುದಾದರೂ ಹೇಗೆ ಎಂಬುದು ಜಿಲ್ಲೆಯ ಜನತೆಯ ಪ್ರಶ್ನೆ.

ನನಸಾಗದ 2024ರ ಬಜೆಟ್ ಘೋಷಣೆ:

ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಕಳೆದ ವರ್ಷದ ಬಜೆಟ್ ಘೋಷಣೆ ಜಿಲ್ಲೆಯ ಮಟ್ಟಿಗೆ ಅರ್ಥ ಕಳೆದುಕೊಂಡಿದೆ. ಕೆರೂರ ಏತ ನೀರಾವರಿ ಅನುಷ್ಠಾನ ಮಂದಗತಿಯಲ್ಲಿದೆ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ ನ್ಯಾಯ ಸಿಕ್ಕಿಲ್ಲ. ಮೆಳ್ಳಿಗೇರಿ, ಸಸಾಲಟ್ಟಿ, ಶಿವಲಿಂಗೇಶ್ವರ ಏತ ನೀರಾವರಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಶಿರೂರ ಏತ ನೀರಾವರಿ ಕಾಮಗಾರಿ ಇದೀಗ ಅಲ್ಪ ಪ್ರಮಾಣದಲ್ಲಿ ಕಾರ್ಯಾರಂಭವಾಗುವ ಲಕ್ಷಣ ಕಾಣುತ್ತಿದೆ.

ಬಜೆಟ್ ನಿರೀಕ್ಷೆಗಳು: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ ಆರಂಭಕ್ಕೆ ಬೇಕಾದ ಹತ್ತಾರು ಸಾವಿರಕೋಟಿ ಹಣವನ್ನು ಗುರುವಾರದ ಬಜೆಟ್ ನಲ್ಲಿ ಒದಗಿಸಿ ಸಂತ್ರಸ್ತರ ಭಾವನೆಗಳಿಗೆ ಸ್ಪಂದಿಸುತ್ತಾರೆ ಎಂಬ ಭರವಸೆಯಲ್ಲಿರುವ ಜಿಲ್ಲೆಯ ಜನತೆಗೆ ಬಜೆಟ್‌ನಲ್ಲಿ ನ್ಯಾಯ ದೊರೆಯಬಹುದೆ ಎಂಬುದು ಸದ್ಯದ ಪ್ರಶ್ನೆ.

ಆಲಮಟ್ಟಿ ಯೋಜನಾ ಸಂತ್ರಸ್ತರಿಗೆ ಮಾರುಕಟ್ಟೆ ಬೆಲೆಯಲ್ಲಿ ಪರಿಹಾರ ಧನ ವಿತರಣೆ, ಸೂಕ್ತ ಪುನರರ್ವತಿ ದೊರೆತು ಗೌರವಯುತ ಬದುಕು ಕಟ್ಟಿಕೊಳ್ಳಲು ಹಾಗೂ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ತರುವ ವಿಶ್ವಾಸದಲ್ಲಿರುವ ಜಿಲ್ಲೆಯ ಬಿಜೆಪಿ ಶಾಸಕರಿಗೆ ಸ್ಪಂದನೆ ದೊರೆಯಬಹುದೇ ಎಂಬುದು ಸಹ ಕೂತುಹಲ ಮೂಡಿಸಿದೆ.

ವಿಶ್ವಪಾರಂಪರಿಕ ಪ್ರವಾಸಿ ತಾಣಗಳಾದ ಐಹೊಳೆ, ಪಟ್ಟದಕಲ್ಲು, ಬಾದಾಮಿಯಲ್ಲಿನ ಸ್ಮಾರಕಗಳಿಗೆ ಹೊಂದಿಕೊಂಡಿರುವ ಜನವಸತಿಯನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಬೇಕಾದ ಅನುದಾನವನ್ನು ಬಜೆಟ್ ನಲ್ಲಿ ಒದಗಿಸುವ ಭರವಸೆ ನೀಡಿದ್ದರೂ ಸಹ ಅಂದಿನ ಬಜೆಟ್ ನಲ್ಲಿ ಹಣ ಒದಗಿಸಲು ಸಾಧ್ಯವಾಗಿರಲಿಲ್ಲ. ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದ್ದರೂ ಸೂಕ್ತ ಅನುದಾನ ಸಿಗದೆ, ಕಾಲೇಜು ಸ್ಥಾಪನೆಗೆ ಬೇಕಾದ ಸೌಲಭ್ಯಗಳಿಲ್ಲದ ಕಾರಣಕ್ಕೆ ಹಿನ್ನಡೆಯಾಗಿದ್ದು, ಪ್ರಸಕ್ತ ಬಜೆಟ್ ನಲ್ಲಿ ಅನುದಾನ ಸಿಗಬಹುದೇ ಎಂಬುದು ಮುಖ್ಯವಾಗಿದೆ. ಒಟ್ಟಾರೆ ಶುಕ್ರವಾರ ಮಂಡನೆಯಾಗಲಿರುವ ಬಜೆಟ್ ನಲ್ಲಿ ಜಿಲ್ಲೆಯ ಶುಕ್ರದೆಸೆ ತರುವ ನಿರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಜನರಿದ್ದಾರೆ.ಜವಳಿ ಪಾರ್ಕ್‌ ಬೇಕು ವೇಗ:

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ಮೇರೆಗೆ ಹಿಂದಿನ ಬಜೆಟ್ನಲ್ಲಿ ಜವಳಿ ಪಾರ್ಕ್‌ ಸ್ಥಾಪನೆಗೆ ಘೋಷಣೆ ಮಾಡಲಾಗಿತ್ತು. ಆದರೆ ಇಡೀ ವರ್ಷದಲ್ಲಿ ಗುಳೇದಗುಡ್ಡ ಹೊರವಲಯದ ತೋಗುಣಿಸಿ ಬಳಿ ಸದ್ಯ 12 ಎಕರೆ ಜಮೀನು ಗುರುತಿಸಲಾಗಿದೆ. ಇನ್ನೂ 3 ಎಕರೆ ಜಮೀನಿನ ಅವಶ್ಯಕತೆ ಇದೆ. ಜಮೀನಿನ ನಂತರ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರದ ನೆರವಿನಲ್ಲಿ ಸ್ಥಾಪಿತವಾಗಬೇಕಾದ ಜವಳಿ ಪಾರ್ಕ್‌ ಇನ್ನೂ ಎಷ್ಟು ದಿನದ ನಂತರ ಆರಂಭಗೊಳ್ಳಲಿದೆಯೋ ಕಾಯ್ದು ನೋಡಬೇಕಿದೆ.ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆಯ ಕಾರಣಕ್ಕೆ ಉದ್ಯೋಗ ಕಳೆದುಕೊಂಡ ಸಹಸ್ರಾರು ಕುಟುಂಬಕ್ಕೆ ಶಾಶ್ವತ ಉದ್ಯೋಗ ಕಲ್ಪಿಸುವಂತಹ ಕೈಗಾರಿಕೆಗಳ ಅಗತ್ಯತೆ ಇದ್ದು, ಸರ್ಕಾರ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುವ ಅವಶ್ಯಕತೆ ಇದೆ. ಬಾಗಲಕೋಟೆ ಸಂತ್ರಸ್ತರ ಶಾಶ್ವತ ಪುನರರ್ವಸತಿ ಅಗತ್ಯವಾಗಿದ್ದು, ನಗರದ 527 ಮೀಟರ್ ವ್ಯಾಪ್ತಿಯ ಒಳಗೆ ಭೂಸ್ವಾಧೀನ ಮಾಡಿಕೊಂಡು ಸಂತ್ರಸ್ತರಿಗೆ ಯೋಗ್ಯ ಪರಿಹಾರ ಧನ ನೀಡುವ 2013ರ ಭೂಸ್ವಾಧೀನ ಕಾಯ್ದೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಆಧ್ಯತೆ ನೀಡಲಿ.

- ಎ.ಎ. ದಂಡಿಯಾ, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಹೋರಾಟಗಾರರು, ಬಾಗಲಕೋಟೆ