ಸಾರಾಂಶ
ಗದಗ: ಸರ್ಕಾರದ 34 ಇಲಾಖೆಗಳಲ್ಲಿ ಒಟ್ಟು 274188 ಹುದ್ದೆಗಳು ಖಾಲಿ ಇದ್ದು, ಅದರ ಪೈಕಿ ಶಾಲಾ ಶಿಕ್ಷಣ ಹಾಗೂ ಉನ್ನತ ಶಿಕ್ಷಣದಲ್ಲಿ 12 ಸಾವಿರ ಶಿಕ್ಷಕ ಮತ್ತು ಸಹಾಯಕ ಪ್ರಾಧ್ಯಾಪಕರನ್ನು ತುಂಬಿಕೊಳ್ಳುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ನಿರುದ್ಯೋಗ ಪದವೀಧರರಿಗೆ ನಿರಾಶೆ ಹಾಗೂ ಆಘಾತ ತಂದಿದೆ ಎಂದು ವಿಪ ಸದಸ್ಯ ಎಸ್.ವಿ.ಸಂಕನೂರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಸರಕಾರಿ ನೌಕರರಿಗೆ ಎನ್.ಪಿ.ಎಸ್ ಬದಲಾಗಿ ಓ.ಪಿ.ಎಸ್ ಜಾರಿ ಮಾಡುವುದು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2006ರ ನಂತರ ನೇಮಕಗೊಂಡಿರುವ ನೌಕರರಿಗೆ ಪಿಂಚಣಿ ಸೌಲಭ್ಯ ಒದಗಿಸುವ ಕುರಿತು ಯಾವ ಪ್ರಸ್ತಾಪವನ್ನು ಬಜೆಟ್‌ನಲ್ಲಿ ಪ್ರಕಟಿಸದೇ ಇರುವುದು ನೌಕರರ ವರ್ಗಕ್ಕೆ ಅನ್ಯಾಯ ಮಾಡಿದಂತಾಗಿದೆ.ಕಾಂಗ್ರೆಸ್ ಪಕ್ಷ 2023 ರ ಚುನಾವಣಾ ಪ್ರಣಾಳಿಕೆಯಲ್ಲಿ ಈ ಎರಡು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ಈಡೇರಿಸುವದೇ ಇರುವುದು ದುರ್ದೈವದ ಸಂಗತಿ. ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಮಾಸಿಕ ತಲಾ 2000 ಹೆಚ್ಚಳ ಮಾಡಿರುವುದು, ಅದರಂತೆ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ಮಾಸಿಕ ತಲಾ 1000 ರೂ ಹೆಚ್ಚಳ, ಆಶಾಕಾರ್ಯಕರ್ತರಿಗೆ 1000 ರೂ ಗೌರವಧನ ಹೆಚ್ಚಿಸಿರುವುದು ಸ್ವಾಗತಾರ್ಹ, ಆದರೆ ಉತ್ತರ ಕರ್ನಾಟಕ ಭಾಗಗಳಾದ ಧಾರವಾಡ, ಹಾವೇರಿ, ಗದಗ, ಉತ್ತರಕನ್ನಡ ಇತರ ಜಿಲ್ಲೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಹೊಸ ಯೋಜನೆಗಳನ್ನು ಹಾಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಲ್ಲ, 2024-25 ನೇ ಸಾಲಿನ ಆಯೋಗದಲ್ಲಿ ಬಜೆಟ್ ಗಾತ್ರದ ಶೇ 12 ಶಿಕ್ಷಣಕ್ಕೆ ಮೀಸಲಾಗಿಟ್ಟದನ್ನು 2025-26 ನೇ ಬಜೆಟ್‌ನಲ್ಲಿ ಶೇ 10 ಕ್ಕೆ ಇಳಿಸಿರುವುದು ವಿಷಾದದ ಸಂಗತಿಯಾಗಿದೆ.