ಭಾರತ ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಬಜೆಟ್ ಅತ್ಯಂತ ಸಹಕಾರಿಯಾಗುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ.ಎಂ.ಕುಮಾರಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭಾರತ ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಬಜೆಟ್ ಅತ್ಯಂತ ಸಹಕಾರಿಯಾಗುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ.ಎಂ.ಕುಮಾರಸ್ವಾಮಿ ಹೇಳಿದರು.ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಕೇಂದ್ರ ಬಜೆಟ್ 2026 ಒಂದು ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಮಾತನಾಡಿ,
ಈ ವರ್ಷದ ಬಜೆಟ್ 2047ರ ಆತ್ಮ ನಿರ್ಭರ ಭಾರತ್ ಅಂದರೆ ಎಲ್ಲ ವಿಷಯಗಳಲ್ಲಿ ಸ್ವಾವಲಂಬನೆ ಸಾಧಿಸಲು ಈ ಬಜೆಟ್ ಸಹಕಾರಿಯಾಗಲಿದೆ. ಬಹಳ ಮುಖ್ಯವಾಗಿ ಭಾರತದ ಸಾಲದ ಪ್ರಮಾಣ ಮತ್ತು ಸಾಲಕ್ಕೆ ಕಟ್ಟುವ ಬಡ್ಡಿಯ ಪ್ರಮಾಣ ಇಳಿಮುಖವಾದರೂ ಅದನ್ನು ಇನ್ನಷ್ಟು ಕಡಿಮೆ ಮಾಡಿಕೊಳ್ಳುವ ಅವಕಾಶವಿದೆ ಎಂದು ತಿಳಿಸಿದರು.ಇಂದಿನ ಬಜೆಟ್‌ನಲ್ಲಿ ಬಹಳ ಮುಖ್ಯವಾಗಿ ಎಂಎಸ್‌ಎಂಇಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಒಳ್ಳೆಯ ಲಕ್ಷಣವಾಗಿದೆ. ಒಟ್ಟಾರೆ ಬಜೆಟ್ ಉತ್ತಮವಾಗಿದ್ದು, ಅಭಿವೃದ್ಧಿಯತ್ತ ಭಾರತವನ್ನು ಕೊಂಡೊಯ್ಯುತ್ತದೆ ಎಂದು ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಅಧ್ಯಕ್ಷ ಕೆ.ಬಸಪ್ಪ ಗೌಡ ಮಾತನಾಡಿ, ಬಜೆಟ್ ಎಂಬುದು ರಾಷ್ಟ್ರ ರಕ್ಷಣೆಯನ್ನು ಒಳಗೊಂಡಂತೆ ದೇಶದ ಅಭಿವೃದ್ಧಿಯನ್ನು ಸೂಚಿಸುತ್ತದೆ. ಮುಂದುವರಿದ ರಾಷ್ಟ್ರಗಳಲ್ಲಿ ರಕ್ಷಣಾ ವೆಚ್ಚ ಹೆಚ್ಚಾಗಿರುತ್ತದೆ. ಆದ್ದರಿಂದ ನಮ್ಮ ದೇಶದಲ್ಲೂ ಇದಕ್ಕೆ ಹೆಚ್ಚು ಗಮನ ಕೊಡಬೇಕು ಎಂದು ತಿಳಿಸಿದರು.ದೇಶೀಯ ವಿದ್ಯಾಶಾಲಾ ಸಮಿತಿಯ ಉಪಾಧ್ಯಕ್ಷ ಜಿ.ಮಧುಸೂದನ್ ಮಾತನಾಡಿ, ವಿದ್ಯಾರ್ಥಿಗಳು ಬಜೆಟ್ ಅಂಶಗಳನ್ನು ಅಧ್ಯಯನ ನಡೆಸಿ ಅದರ ಪರಿಣಾಮಗಳನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಸಹ ಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಐಕ್ಯೂಎಸಿ ಸಂಯೋಜಕ ಎನ್.ಕುಮಾರಸ್ವಾಮಿ, ನಿರ್ದೇಶಕ ಎಂ.ರಾಜು, ಸಹಾಯಕ ಪ್ರಾಧ್ಯಾಪಕ ಎಸ್.ಶಿವಲಿಂಗಂ, ಎಚ್.ಎಲ್.ರಂಜಿತಾ ಇತರರಿದ್ದರು.