ಚಿಕ್ಕಮಗಳೂರುನಗರ ಸಭೆ ಸಿಬ್ಬಂದಿ ವೇತನ, ವಿದ್ಯುತ್‌ ಬಿಲ್‌ ಪಾವತಿ ಅನುದಾನ ಸೇರಿದಂತೆ ವಾರ್ಷಿಕ ಕೇವಲ ₹58 ಕೋಟಿ ನಷ್ಟು ಆದಾಯ ಹೊಂದಿರುವ ಚಿಕ್ಕಮಗಳೂರು ನಗರ ಸಭೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನ ನಂಬಿ ಬರೋಬ್ಬರಿ ₹153.54 ಕೋಟಿ ವೆಚ್ಚದ ಕಳೆದ ವರ್ಷಕ್ಕಿಂತ ಸುಮಾರು ₹30 ಕೋಟಿಯಷ್ಟು ಹೆಚ್ಚಿನ ಗಾತ್ರದ ಬಜೆಟ್‌ ಮಂಡಿಸಿದೆ.

ಚಿಕ್ಕಮಗಳೂರು ನಗರ ಸಭೆಯಲ್ಲಿ ಅಧ್ಯಕ್ಷೆ ಬಿ.ಶೀಲಾ ದಿನೇಶ್ 2026-27ನೇ ಸಾಲಿನ ಆಯವ್ಯಯ ಮಂಡನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಗರ ಸಭೆ ಸಿಬ್ಬಂದಿ ವೇತನ, ವಿದ್ಯುತ್‌ ಬಿಲ್‌ ಪಾವತಿ ಅನುದಾನ ಸೇರಿದಂತೆ ವಾರ್ಷಿಕ ಕೇವಲ ₹58 ಕೋಟಿ ನಷ್ಟು ಆದಾಯ ಹೊಂದಿರುವ ಚಿಕ್ಕಮಗಳೂರು ನಗರ ಸಭೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನ ನಂಬಿ ಬರೋಬ್ಬರಿ ₹153.54 ಕೋಟಿ ವೆಚ್ಚದ ಕಳೆದ ವರ್ಷಕ್ಕಿಂತ ಸುಮಾರು ₹30 ಕೋಟಿಯಷ್ಟು ಹೆಚ್ಚಿನ ಗಾತ್ರದ ಬಜೆಟ್‌ ಮಂಡಿಸಿದೆ.

ಚಿಕ್ಕಮಗಳೂರು ನಗರ ಸಭೆಯಲ್ಲಿ ಗುರುವಾರ ಅಧ್ಯಕ್ಷೆ ಬಿ.ಶೀಲಾ ದಿನೇಶ್ 2026-27ನೇ ಸಾಲಿನ ಆಯವ್ಯಯ ಮಂಡಿಸಿದರು. 2026-27ನೇ ಸಾಲಿನಲ್ಲಿ ಸ್ವಂತ ಆದಾಯದ ಮೂಲ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ, ಸರ್ಕಾರಿ ಸಂಸ್ಥೆಗಳಿಗೆ ಸಾಲ ಸೇರಿದಂತೆ ಒಟ್ಟು ₹156.15 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಈ ಪೈಕಿ ₹153.54 ಕೋಟಿ ವೆಚ್ಚದ ಯೋಜನೆ ರೂಪಿಸಿ, ₹2.60 ಕೋಟಿ ಉಳಿತಾಯ ಬಜೆಟ್‌ ಮಂಡಿಸಲಾಯಿತು.

ಕಳೆದ ವರ್ಷ ₹129.04 ಕೋಟಿ ಆದಾಯ ನಿರೀಕ್ಷೆ ಮಾಡಿ, ₹123.92 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜಸ್ವ ಸ್ವೀಕೃತಿಯಲ್ಲಿ ಸುಮಾರು ₹10 ಕೋಟಿ ಸೇರಿದಂತೆ ವಿವಿಧ ವಿಭಾಗದಲ್ಲಿ ಆದಾಯ ಹೆಚ್ಚಳ ತೋರಿಸಿ ಸುಮಾರು ₹30 ಕೋಟಿ ಯಷ್ಟು ಬಜೆಟ್‌ ಗಾತ್ರ ಹೆಚ್ಚಿಸಲಾಗಿದೆ.

ನಗರ ಸಭೆ ಆದಾಯ ₹58 ಕೋಟಿ

ನಗರ ಸಭೆಗೆ ಆಸ್ತಿ ತೆರಿಗೆ ಪ್ರಮುಖ ಆದಾಯದ ಮೂಲ. ಇದರಿಂದ ₹22 ಕೋಟಿ ನಿರೀಕ್ಷಿಸಲಾಗಿದೆ. ನೀರಿನ ಸರಬರಾಜು ಶುಲ್ಕ, ಸಿಬ್ಬಂದಿ ವೇತನಕ್ಕೆ ಸರ್ಕಾರ ನೀಡುವ ಎಸ್‌ಎಫ್‌ಸಿ ವೇತನ ಬಾಬ್ತು, ಎಸ್‌ಎಫ್‌ಸಿ ಮುಕ್ತ ನಿಧಿ, ವಿದ್ಯುತ್‌ ಅನುದಾನ ಸೇರಿದಂತೆ ₹58 ಕೋಟಿ ಯಷ್ಟು ಖಾಯಂ ಆದಾಯ ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಆದಾಯ ನಂಬಿ ಕೊಂಡು ಆದಾಯದ ಎರಡು ಪಟ್ಟು ಹೆಚ್ಚಿನ ಮೊತ್ತದ ಬಜೆಟ್‌ ಮಂಡಿಸಿದೆ.

ಶೇ.50 ರಷ್ಟು ಆಸ್ತಿ ತೆರಿಗೆ ಹೆಚ್ಚಳ ನಿರೀಕ್ಷೆ

ನಗರಸಭೆ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ನಕ್ಷಾ ಯೋಜನೆಯಡಿ ಸರ್ವೆ ನಡೆಸಲಾಗುತ್ತಿದೆ. ಸರ್ವೆ ಪೂರ್ಣಗೊಂಡ ಬಳಿಕ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣ ಗೊಳಿಸಲಾಗುವುದು. ಆಗ ನಗರ ಸಭೆಗೆ ಬರುವ ಆಸ್ತಿ ತೆರಿಗೆ ಶೇ.50ರಷ್ಟು ಹೆಚ್ಚಾಗಲಿದೆ. ಸದ್ಯ ₹22 ಕೋಟಿ ಬರುತ್ತಿದ್ದು, ಸುಮಾರು ₹50 ಕೋಟಿಗೆ ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ.ಜತೆಗೆ, ನಾಗರಿಕರು ತಮ್ಮ ಮನೆ ಬಾಗಿಲಿನಲ್ಲಿಯೇ ಚಲನ್‌ ಪಡೆದು ಯುಪಿಐ ಮೂಲಕ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸ ಲಾಗಿದೆ. ಕಂದಾಯ ವಸೂಲಾತಿ ಜವಾಬ್ದಾರಿಯನ್ನು ಸ್ಥಳೀಯ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಲು ತೀರ್ಮಾನಿಸಲಾಗಿದೆ.

ಕಸದಿಂದ ₹2.50 ಕೋಟಿ

ನಗರಸಭೆ ವ್ಯಾಪ್ತಿಯಲ್ಲಿ ಕಸದ ಸಂಗ್ರಹಣೆಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಕಳೆದ ಜನವರಿಯಿಂದಲೇ ಕಸ ಸಂಗ್ರಹಣೆ ಜವಾಬ್ದಾರಿಯನ್ನು ನಗರಸಭೆಯೇ ವಹಿಸಿಕೊಂಡಿದೆ. ಕಸ ಸಂಗ್ರಹಣೆ ಶುಲ್ಕ ₹2.50 ಕೋಟಿ ವಸೂಲಿಯಾಗುವ ನಿರೀಕ್ಷೆಯಿದೆ. ಕಳೆದ ಆರ್ಥಿಕ ವರ್ಷದಲ್ಲಿ ಹಸಿ ಕಸದಿಂದ 200 ಟನ್ ಸಾವಯವ ಗೊಬ್ಬರ ತಯಾರಿಸಿ ₹6 ಲಕ್ಷ ಆದಾಯ ಗಳಿಸಲಾಗಿದೆ.

ನಗರಸಭೆ ಉಪಾಧ್ಯಕ್ಷ ಲಲಿತಾ ನಾಯ್ಕ, ಆಯುಕ್ತ ಬಿ.ಸಿ.ಬಸವರಾಜು, ಸದಸ್ಯರಾದ ಟಿ.ರಾಜಶೇಖರ್, ಲಕ್ಷ್ಮಣ್, ಇಂದಿರಾ, ಮುನೀರ್, ಕವಿತಾ ಶೇಖರ್, ಸುಜಾತಾ ಶಿವಕುಮಾರ್ ಸೇರಿದಂತೆ ಇತರ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

--ಬಾಕ್ಸ್‌--

₹35 ಕೋಟಿ ಸಾಲಕ್ಕೆನಿಂತ ನಗರ ಸಭೆಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ನಗರ ಸಭೆ ಅದರೊಂದಿಗೆ ಇತರೆ ಕಾಮಗಾರಿಗಾಗಿ ಸರ್ಕಾರಿ ಸಂಸ್ಥೆಗಳ ಮುಂದೆ ಸಾಲಕ್ಕೆ ಮುಂದಾಗಿದೆ. ಸುಮಾರು ₹35 ಕೋಟಿಯಷ್ಟು ಪ್ರಸ್ತಕ 2026-27ನೇ ಸಾಲಿನಲ್ಲಿ ಸಾಲ ಪಡೆಯುವುದಾಗಿ ಬಜೆಟ್‌ನಲ್ಲಿ ಹೇಳಿದೆ.

-- ಬಾಕ್ಸ್--

ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ

ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಸುವಂತೆ ಸಾರ್ವಜನಿಕರು ನಗರಸಭೆಯನ್ನು ಆಗ್ರಹಿಸಿದ್ದರು. ಆದರೆ ಸಂತಾನಹರಣ ಶಾಸ್ತ್ರ ಚಿಕಿತ್ಸೆ ನೀಡಲು ಹಲವು ಬಾರಿ ಟೆಂಡರ್ ಕರೆದರೂ ಯಾರು ಟೆಂಡರ್ ನಲ್ಲಿ ಭಾಗವಹಿಸಿಲ್ಲ. ಪಶುಪಾಲನ ಇಲಾಖೆ ಸಹಕಾರದಲ್ಲಿ ನಗರಸಭೆಯಿಂದಲೇ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಇಂದಾವರ ಘನತಾಜ್ಯ ವಸ್ತು ವಿಲೇವಾರಿ ಘಟಕ ಜಾಗದಲ್ಲಿ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೇಂದ್ರವನ್ನು ತಾತ್ಕಾಲಿಕವಾಗಿ ₹15 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಅನುಮೋದನೆ ದೊರಕಿದ ನಂತರ ಶಸ್ತ್ರ ಚಿಕಿತ್ಸೆ ಆರಂಭ.-- ಬಾಕ್ಸ್‌ --

ಬಜೆಟ್‌ ಮಂಡನೆಗೂ ಮುನ್ನ ವಿನಾಯಕನಿಗೆ ಪೂಜೆ

ನಗರ ಸಭೆ ಅಧ್ಯಕ್ಷ, ಸದಸ್ಯರು, ಅಧಿಕಾರಿಗಳು ಬಜೆಟ್‌ ಮಂಡನೆಗೂ ಮುನ್ನಾ ನಗರಸಭೆ ಆವರಣದ ಕಾರ್ಯಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತೆರಳಿ, ಬಜೆಟ್‌ ಪ್ರತಿಯನ್ನು ದೇವರ ಮುಂದಿಟ್ಟು ಪೂಜೆ ಸಲ್ಲಿಸಿ ನಂತರ ಸಭಾಂಗಣಕ್ಕೆ ಆಗಮಿಸಿ ಬಜೆಟ್‌ ಮಂಡಿಸಿದರು.

-- ಬಾಕ್ಸ್‌--

ಶಾಸಕರು, ವಿಧಾನಪರಿಷತ್‌ ಸದಸ್ಯರಿಲ್ಲ

ಚಿಕ್ಕಮಗಳೂರು ನಗರಸಭೆ ಬಜೆಟ್‌ ಮಂಡನೆಯಲ್ಲಿ ಶಾಸಕರು, ವಿಧಾನಪರಿಷತ್‌ ಸದಸ್ಯರು, ಸಂಸದರು ಯಾರೊಬ್ಬರು ಹಾಜರಾಗಿಲ್ಲ ಎಂದು ನಗರಸಭೆ ಸದಸ್ಯರು ಬೇಸರ ವ್ಯಕ್ತಪಡಿಸಿದರು.

---

₹18.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ

ರಸ್ತೆಗೆ ಕಲ್ಲು ಹಾಸು ಮತ್ತು ಪಾದಚಾರಿ ಮಾರ್ಗ ನಿರ್ಮಾಣಕ್ಕೆ 6 ಕೋಟಿ ರು, ರಸ್ತೆ ಬದಿ ಚರಂಡಿ ನಿರ್ಮಾಣ ಕಾಮಗಾರಿಗೆ 6 ಕೋಟಿ ರು. ಮೀಸಲಿಡಲಾಗಿದೆ. ಸೇತುವೆ, ಮೇಲ್ಸೇತುವೆ ನಿರ್ಮಾಣಕ್ಕೆ 1 ಕೋಟಿ ರು, ಬೀದಿ ದೀಪಕ್ಕೆ 1 ಕೋಟಿ ರು, ಮಳೆ ನೀರು ಚರಂಡಿ, ಸಣ್ಣ ಸೇತುವೆ ನಿರ್ಮಾಣಕ್ಕೆ 2.50 ಕೋಟಿ ರು. ಮೀಸಲಿಡಲಾಗಿದೆ.

---

ವಿದ್ಯುತ್ ಚಿತಾಗಾರಕ್ಕೆ ₹4 ಕೋಟಿ

ನಗರದಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಾಣಕ್ಕೆ ಮುಂದಾದ ನಗರಸಭೆ ಪ್ರಸಕ್ತ ಸಾಲಿನ ಬಜೆಟ್ಟಲ್ಲಿ ₹4 ಕೋಟಿ ಅನುದಾನ ಮೀಸಲಿಟ್ಟಿದೆ. ಆದರೆ, ಸಾರ್ವಜನಿಕ ಆರೋಗ್ಯ ನಿರ್ವಹಣೆಗೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ.

---

ಘನತ್ಯಾಜ್ಯ ನಿರ್ವಹಣೆಗೆ ₹2.45 ಕೋಟಿ

ನಗರದ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಭಾರೀ ವಾಹನ ಖರೀದಿಗೆ ₹50 ಲಕ್ಷ, ಲಘು ವಾಹನ ಖರೀದಿಗೆ ₹45 ಲಕ್ಷ , ಯಂತ್ರೋಪಕರಣಕ್ಕೆ ₹50 ಲಕ್ಷ ಹಾಗೂ ಸ್ಥಿರಾಸ್ತಿ ಹೆಸರಿನಲ್ಲಿ ₹1 ಕೋಟಿ ಒಟ್ಟು ₹2.45 ಕೋಟಿ ಮೀಸಲಿಟ್ಟಿದೆ.

---

ನೀರು, ಕೊಳಚೆ ನೀರು ನಿರ್ವಹಣೆಗೆ ₹11.60 ಕೋಟಿ ವೆಚ್ಚ

ನಗರಸಭೆ ವ್ಯಾಪ್ತಿಯ ಜನರಿಗೆ ನೀರು ಪೂರೈಕೆ ಮತ್ತು ಯುಜಿಡಿ ಸೇರಿದಂತೆ ಕೊಳವೆ ಮಾರ್ಗ ಸೇರಿದಂತೆ ವಿವಿಧ ಕಾಮಗಾರಿಗೆ ಒಟ್ಟು ₹11.60 ಕೋಟಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.