₹1200 ಕೋಟಿ ಬಜೆಟ್‌ ಮಂಡನೆಯ ಗುರಿ

| Published : Jan 25 2024, 02:03 AM IST

ಸಾರಾಂಶ

ಪಾಲಿಕೆಗೆ ಆದಾಯ ಹೆಚ್ಚಿಸುವಂತಹ ಸಾರ್ವಜನಿಕರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಪ್ರಸಕ್ತ ಸಾಲಿನ ಪಾಲಿಕೆ ಬಜೆಟ್‌ ಸಿದ್ಧಪಡಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ಹುಬ್ಬಳ್ಳಿ: ಕಳೆದ ವರ್ಷ 1130 ಕೋಟಿ ಬಜೆಟ್‌ ಮಂಡಿಸಿದ್ದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಈ ವರ್ಷ 1200 ಕೋಟಿಗೂ ಮಿಕ್ಕಿದ ಬಜೆಟ್‌ ಮಂಡಿಸುವ ಗುರಿ ಹೊಂದಿದೆ.

ಪಾಲಿಕೆ ಕಚೇರಿ ಸಭಾಂಗಣದಲ್ಲಿ ಬುಧವಾರ ಬಜೆಟ್‌ ಪೂರ್ವ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆ ನಡೆಸಿತು. ಸಭೆಯಲ್ಲಿ ಪಾಲಿಕೆಯ ಆದಾಯ ಹೆಚ್ಚಿಸುವ ಕುರಿತಂತೆ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆಗೆ ಆದಾಯ ಹೆಚ್ಚಿಸುವಂತಹ ಸಾರ್ವಜನಿಕರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಪ್ರಸಕ್ತ ಸಾಲಿನ ಪಾಲಿಕೆ ಬಜೆಟ್‌ ಸಿದ್ಧಪಡಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ₹1200 ಕೋಟಿ ಬಜೆಟ್‌ ಮಂಡಿಸುವ ಗುರಿ ಹೊಂದಲಾಗಿದೆ ಎಂದರು.

ನಗರೋತ್ಥಾನ, ಅಮೃತ ಯೋಜನೆ, ಯುಜಿಡಿ, 15ನೇ ಹಣಕಾಸು ಯೋಜನೆ, ರಸ್ತೆ ಅಭಿವೃದ್ಧಿ ನಿಧಿ, ಶಾಸಕ ನಿಧಿ ಸೇರಿದಂತೆ ವಿವಿಧ ಯೋಜನೆಗಳಡಿಯಲ್ಲಿ ₹800 ಕೋಟಿ ಅಧಿಕ ಮೊತ್ತ ಪಾಲಿಕೆಗೆ ಹರಿದು ಬರುವ ನಿರೀಕ್ಷೆ ಇದೆ. ಪಾಲಿಕೆಯ ವಾಣಿಜ್ಯ ಮತ್ತು ಆಸ್ತಿ ಕರ ಹಾಗೂ ಇತರ ಮೂಲಗಳಿಂದ ಕನಿಷ್ಠ ₹300 ಕೋಟಿ ಹಾಗೂ ಅನಧಿಕೃತ ಬಡಾವಣೆಗಳಿಂದ ಹೆಚ್ಚುವರಿ ಟ್ಯಾಕ್ಸ್‌ ಸಂಗ್ರಹದಿಂದ ₹80 ಕೋಟಿ ಪಾಲಿಕೆಯ ವಾಣಿಜ್ಯ ಮಳಿಗೆಗಳ ಹರಾಜಿನಿಂದ ₹60 ಕೋಟಿ ಆದಾಯ ಈ ಬಜೆಟ್‌ನಲ್ಲಿ ಪ್ರಕಟಿಸುವ ಬಗ್ಗೆ ಚರ್ಚೆ ನಡೆದಿದೆ ಎಂದರು.

ಕಳೆದ ವರ್ಷದ ₹1130 ಕೋಟಿ ಬಜೆಟ್‌ನಲ್ಲಿ ಶೇ. 60ರಷ್ಟು ಸಾಧನೆ ಮಾಡಲಾಗಿದೆ. ನಿರೀಕ್ಷೆಗೂ ಮೀರಿ 100 ಕೋಟಿ ಆಸ್ತಿ ಕರ ಸಂಗ್ರಹಿಸಲಾಗಿದೆ ಎಂದ ಆಯುಕ್ತ ಡಾ. ಉಳ್ಳಾಗಡ್ಡಿ, ಅವಳಿನಗರದಲ್ಲಿ ಬಹಳಷ್ಟು ಅಂಗಡಿಗಳು ಟ್ರೇಡ್‌ ಲೈಸನ್ಸ್‌ ಇಲ್ಲದೇ ವ್ಯಾಪಾರ ನಡೆಸುತ್ತಿದ್ದು, ಅಂತಹವುಗಳನ್ನು ಪತ್ತೆ ಹಚ್ಚಿ ಹೆಚ್ಚಿನ ಆದಾಯ ಕ್ರೋಢೀಕರಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು.

ಅಭಿಪ್ರಾಯ ಸಂಗ್ರಹ: ಇದಕ್ಕೂ ಮುನ್ನ ಸಾರ್ವಜನಿಕರು ಹಲವಾರು ಸಲಹೆಗಳನ್ನು ನೀಡಿದರು. ಜನಾಗ್ರಹ ಸಂಸ್ಥೆಯ ಸಂಯೋಜಕ ಶಿವಶಂಕರ ಐಹೊಳೆ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಮಕ್ಕಳಿಗಾಗಿ ಸಾಹಸ ಕ್ರೀಡೆಗಳಿಗೆ ವ್ಯವಸ್ಥೆ ಇಲ್ಲ. ಪಾಲಿಕೆಯಿಂದಾಗಲಿ ಅಥವಾ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಮಕ್ಕಳಿಗೆ ಕಸರತ್ತು ಚಟುವಟಿಕೆಗಳನ್ನು ನಡೆಸಲು ವ್ಯವಸ್ಥೆ ರೂಪಿಸಿ, ಅದನ್ನು ಏಜೆನ್ಸಿಗಳಿಗೆ ವಹಿಸುವುದರಿಂದ ಪಾಲಿಕೆಗೆ ಹೆಚ್ಚುವರಿ ಆದಾಯ ಬರಲಿದೆ. ಇತ್ತ ಮಕ್ಕಳಿಗೂ ಅನುಕೂಲವಾಗಲಿದೆ ಎಂದು ಸಲಹೆ ಮಾಡಿದರು.

ಸಾಮಾಜಿಕ ಕಾರ್ಯಕರ್ತ ರೇವಣಸಿದ್ದಪ್ಪ ಹೆಬ್ಬಳ್ಳಿ ಮಾತನಾಡಿ, ತೆರಿಗೆ ಪಾವತಿದಾರರು ಮತ್ತು ಪಾಲಿಕೆ ಆದಾಯ ಹಿತದೃಷ್ಟಿಯಿಂದ ಟ್ಯಾಕ್ಸ್‌ ಪಾವತಿ ಕುರಿತು ತಂತ್ರಜ್ಞಾನ ಬಳಸಿಕೊಂಡು ಮೆಸೆಜ್‌ ಕಳುಹಿಸುವ ವ್ಯವಸ್ಥೆ ಅಳವಡಿಸಿಕೊಳ್ಳಬಹುದಾಗಿದೆ. ಇದರಿಂದ ತೆರಿಗೆ ಪಾವತಿದಾರರಿಗೂ ಎಚ್ಚರಿಸಿದಂತಾಗುತ್ತದೆ. ಈ ಮೂಲಕ ಜನರು ಟ್ಯಾಕ್ಸ ಕಟ್ಟಲು ಮುಂದೆ ಬರುತ್ತಾರೆ. ಸಹಜ ವಿಧಾನ ಮೂಲಕ ಪಾಲಿಕೆಗೆ ನಿರಂತರವಾಗಿ ಟ್ಯಾಕ್ಸ್‌ ಹರಿದು ಬರುತ್ತದೆ ಎಂದರು.

ರಕ್ಷಣಾ ವೇದಿಕೆಯ ಮಂಜುನಾಥ ಲೂತಿಮಠ ಮಾತನಾಡಿ, ಅವಳಿ ನಗರದಲ್ಲಿ ಹಲವಾರು ಅಂಗಡಿಗಳು ಟ್ರೇಡ್‌ ಲೈಸನ್ಸ್‌ ಹೊಂದಿಲ್ಲ. ಅಂಥವುಗಳನ್ನು ಪತ್ತೆ ಹಚ್ಚಿದರೆ ಒಂದು ಲಕ್ಷಕ್ಕೂ ಹೆಚ್ಚು ಅಂಗಡಿಗಳನ್ನು ಟ್ರೇಡ್‌ ಲೈಸನ್ಸ್‌ಗೆ ಒಳಪಡಿಸಬಹುದು. ಇದರಿಂದ ಕೋಟ್ಯಂತರ ಆದಾಯ ಪಾಲಿಕೆ ಒದಗಲಿದೆ ಎಂದು ತಿಳಿಸಿದರು.

ವಾರ್ಡ್‌ ಸಮಿತಿಗೆ ಹಣ ಕೊಡಿ: ನಿಯಮಾವಳಿ ಪ್ರಕಾರ ಪಾಲಿಕೆಯಲ್ಲಿ ವಾರ್ಡ್‌ ಸಮಿತಿ ರಚಿಸಬೇಕು. ಇದಕ್ಕಾಗಿ ಹಣ ಮೀಸಲಿಡಬೇಕು ಎಂದು ಹೇಳಿದ ವಾರ್ಡ್‌ ಸಮಿತಿ ಬಳಗದ ಸಂಚಾಲಕ ಲಿಂಗರಾಜ ಧಾರವಾಡಶೆಟ್ರ, ವಾರ್ಡ್‌ ಮಟ್ಟದಲ್ಲಿ ಸಭೆ ಆಯೋಜಿಸಬೇಕು. ಇದರಿಂದ ಇನ್ನೂ ಹೆಚ್ಚಿನ ಸಲಹೆಗಳು ಹರಿದುಬರುತ್ತವೆ ಎಂದರು.

ಬೀದಿ ಬದಿ ವ್ಯಾಪಾರಸ್ಥರ ಸಲುವಾಗಿ ರೂಪಿಸಿದ ಪ್ರತ್ಯೇಕ ವಲಯಗಳನ್ನು ಅಭಿವೃದ್ಧಿ ಪಡಿಸಲು ಬಜೆಟ್‌ನಲ್ಲಿ ಕನಿಷ್ಠ ₹10 ಕೋಟಿ ಮೀಸಲಿಡಬೇಕೆಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ಮುಖಂಡ ಮುಲ್ಲಾನವರ ಮನವಿ ಮಾಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಸಂಸ್ಕಾರ ಸ್ಕೂಲ್‌ ಸಂಸ್ಥಾಪಕ ಮಹೇಂದ್ರ ಸಿಂಘಿ ಮಾತನಾಡಿ, ಪಾಲಿಕೆಗೆ ಪ್ರಾಮಾಣಿಕವಾಗಿ ಮತ್ತು ನಿಯಮಿತವಾಗಿ ಟ್ಯಾಕ್ಸ್‌ ಪಾವತಿಸುವವರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ದಿನದಂದು ಗೌರವಿಸುವ ಕೆಲಸ ಮಾಡಬೇಕೆಂದು ಅಭಿಪ್ರಾಯಪಟ್ಟರು.

ಪಾಲಿಕೆ ಅವಕಾಶ ಕೊಟ್ಟರೆ ತಂತ್ರಜ್ಞಾನ ವ್ಯವಸ್ಥೆ ಪೂರೈಸಲು ಜನಾಗ್ರಹ ಸಂಸ್ಥೆ ಮುಂದೆ ಬರಲಿದೆ. ಪ್ರತಿಯೊಬ್ಬ ಟ್ಯಾಕ್ಸ್‌ ಪಾವತಿದಾರರಿಗೆ ಉಚಿತವಾಗಿ ಮೆಸೆಜ್‌ ತಲುಪಿಸುವುದನ್ನು ಸಂಸ್ಥೆ ನಿಭಾಯಿಸಲಿದೆ ಎಂದು ಜನಾಗ್ರಹ ಸಂಸ್ಥೆ ಸಂಯೋಜಕ ಶಿವಶಂಕರ ಐಹೊಳೆ ಹೇಳಿದರು.ಸಾಮಾಜಿಕ ಕಾರ್ಯಕರ್ತ ಜಗದೀಶ ಹೊಂಬಾಳಿ, ಸಂಜೀವ ಧುಮಕನಾಳ, ಚೌಕಿಮಠ ಸೇರಿದಂತೆ ಹಲವರು ಸಲಹೆ ಮಂಡಿಸಿದರು.

ಮೇಯರ್‌ ವೀಣಾ ಬರದ್ವಾಡ, ಉಪಮೇಯರ್‌ ಸತೀಶ ಹಾನಗಲ್ಲ, ತೆರಿಗೆ ಮತ್ತು ಹಣಕಾಸು ನಿರ್ಧರಣಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗುಂಡೂರ, ಸಭಾನಾಯಕ ಶಿವು ಹಿರೇಮಠ, ಶಿವು ಮೆಣಸಿನಕಾಯಿ, ಪ್ರತಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ, ಬೀರಪ್ಪ ಖಂಡೇಕರ ಹಾಗು ಇತರರು ಸಭೆಯಲ್ಲಿದ್ದರು.