12ರಿಂದ 23ರವರೆಗೆ ಬಜೆಟ್‌ ಅಧಿವೇಶನ: ಯು.ಟಿ.ಖಾದರ್‌

| Published : Feb 08 2024, 01:34 AM IST

12ರಿಂದ 23ರವರೆಗೆ ಬಜೆಟ್‌ ಅಧಿವೇಶನ: ಯು.ಟಿ.ಖಾದರ್‌
Share this Article
  • FB
  • TW
  • Linkdin
  • Email

ಸಾರಾಂಶ

ನಾಳೆ ಬಜೆಟ್ ಬಗ್ಗೆ ಮಾಹಿತಿ, ಎಲ್ಲ ಶಾಸಕರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 16ಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಸ್ಪೀಕರ್‌ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಇದೇ ಫೆ.12ರಿಂದ 23ರ ವರೆಗೆ ವಿಧಾನಸಭೆ ಬಜೆಟ್ ಅಧಿವೇಶನ ನಡೆಯಲಿದೆ. 12ಕ್ಕೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 15ರ ವರೆಗೆ ರಾಜ್ಯಪಾಲರ ಭಾಷಣೆ ಮೇಲೆ ಚರ್ಚೆ ಸಾಗಲಿದೆ. ಫೆ.16ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. 23 ರವರೆಗೆ ಬಜೆಟ್ ಕುರಿತ ಚರ್ಚೆಗಳು ನಡೆಯಲಿವೆ. ಅದಕ್ಕೂ ಪೂರ್ವದಲ್ಲಿ ಬಜೆಟ್ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಎಲ್ಲ ಶಾಸಕರಿಗೆ ಫೆ.9 ರಂದು ಬೆಂಗಳೂರಿನ ಹೋಟೆಲ್ ಕ್ಯಾಪಿಟಲ್‌ನಲ್ಲಿ ಒಂದು ದಿನದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ ತಿಳಿಸಿದರು.

ಸ್ಥಳೀಯ ಯರಮರಸ್ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ನಡೆಸಿದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಎಂದರೆ ಏನು?, ಬಜೆಟ್ ಹೇಗೆ ರೂಪಿಸಲಾಗುತ್ತದೆ?, ಯಾವ ಯಾವ ಇಲಾಖೆಗೆ ಹೇಗೆ ಅನುದಾನ ಮೀಸಲಿಡಲಾಗುತ್ತದೆ. ಇಲಾಖೆಗಳ ಕಾರ್ವನಿರ್ವಹಣೆ ಹೇಗಿರುತ್ತದೆ ಎಂಬುವುದರ ಕುರಿತು ಎಲ್ಲ ಶಾಸಕರಿಗೆ ತರಬೇತಿ ನೀಡುತ್ತಿದ್ದು, ಇದರ ಜೊತೆಗೆ ಪತ್ರಕರ್ತರಿಗೂ ಸಹ ಪ್ರತ್ಯೇಕವಾಗಿ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.

ವಿಧಾನಸಭೆ ಜನರ ಹತ್ತಿರಕ್ಕೆ: ರಾಜ್ಯದ ವಿಧಾನಸಭೆಯನ್ನು ಜನರ ಹತ್ತಿರಕ್ಕೆ ತೆಗೆದುಕೊಂಡು ಹೋಗಬೇಕು, ಜನಸಾಮಾನ್ಯರನ್ನು ಪ್ರತಿನಿಧಿಸುವ ಸಭೆಯನ್ನಾಗಿಸಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ಸಮಾಜದ ಕಟ್ಟಕಡೆಯ ಜನ ವಿಧಾನಸಭೆ ನನಗೆ ಎಟಕುವದ್ದಲ್ಲ, ನಾನು ನೋಡುವಂತದ್ದಲ್ಲ ಎನ್ನುವ ಮನಸ್ಸು ಬರಬಾರದು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಕ್ರಮ: ಅಧಿವೇಶನ ನೋಡಲು ಯಾವುದೇ ಶಾಲೆ ಮಕ್ಕಳು ಬಂದರೂ ಅವರನ್ನು ಹೊರಗಡೆ ಸಾಲಲ್ಲಿ ನಿಲ್ಲಿಸದೇ ಒಳಗಡೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಈ ವೇಳೆ ಪ್ರೇರಣಾದಾಯಕ, ವ್ಯಕ್ತಿತ್ವ ವಿಕಸನ ಕುರಿತ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗುವುದು. ಈ ವೇಳೆ ತಂಪು ನೀರು, ಸಿಹಿಯನ್ನು ಕೊಟ್ಟು, ನಿಗದಿತ ಸಮಯದಲ್ಲಿ ಅಧಿವೇಶ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲು ಸೂಚನೆ ನೀಡಲಾಗಿದೆ. ಕೇವಲ ವಿಧಾನಸಭೆಯಷ್ಟೇ ಅಲ್ಲದೇ ಇಸ್ರೋ, ಕಿದ್ವಾ, ನಿಮಾನ್ಸ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಅರಿಯಲು, ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಸಂಸ್ಥೆಗಳು ಆಸಕ್ತಿ ತೋರಿದ್ದಲ್ಲಿ ಆ ಸ್ಥಳಗಳ ವೀಕ್ಷಣೆಗೂ ಸಹ ವಿದಾನಸಭೆಯಿಂದಲೆಯೇ ಪರವಾನಗಿ ಒದಗಿಸಿಕೊಡಲಾಗುವುದು ಎಂದು ಹೇಳಿದರು.

ಶಾಸಕರಿಗೆ ಟಿಪ್ಸ್: ಅಧಿವೇಶನ ಸಮಯದಲ್ಲಿ ಶಾಸಕರು ಗೈರು ಆಗುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ಅಧಿವೇಶನದಲ್ಲಿ ಪಾಲ್ಗೊಳ್ಳುವುದಕ್ಕೆಯೇ ಶಾಸಕರಾಗುವುದು. ಅವರಿಗೆ ವಿಶೇಷ ಸಂದೇಶ ನೀಡುವ ಅಗತ್ಯವಿಲ್ಲ, ಜನಸಾಮಾನ್ಯರು ಅವರಿಗೆ ಮತ ನೀಡಿ ಗೆಲ್ಲಿಸಿ ವಿಧಾನಸಭೆಗೆ ಕಳಿಸಿದ್ದಾರೆ. ಅದಕ್ಕೆ ನೂರರಷ್ಟು ಕೆಲಸ ಮಾಡುವೆ ಎನ್ನುವ ಆತ್ಮವಿಶ್ವಾಸ ಶಾಸಕರಲ್ಲಿ ಬರಬೇಕು, ಬೇರೆಲ್ಲ ಕೆಲಸ-ಕಾರ್ಯಗಳಿದ್ದರೂ ಮೊದಲ ಆದ್ಯತೆ ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಬೇಕು. ಯಾರು ಬೆಳಗಿನಿಂದ ಸಂಜೆ ಕುಳಿತುಕೊಳ್ಳುತ್ತಾರೆ, ಎಲ್ಲ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಅಂತವರು ಯಶಸ್ವಿ ನಾಯಕರಾಗುತ್ತಾರೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮೊಹಮ್ಮದ್ ಶಾಲಂ, ಶ್ರೀದೇವಿ ಆರ್.ನಾಯಕ, ಬಷೀರುದ್ದೀನ್ ಸೇರಿದಂತೆ ಕಾರ್ಯಕರ್ತರು ಇದ್ದರು.ಯಾವುದೇ ಸರ್ಕಾರ ಇರಲಿ, ಎಲ್ಲರಿಗೂ ನ್ಯಾಯ ಕೊಡಬೇಕು

ಯಾವುದೇ ಪಕ್ಷದ ಸರ್ಕಾರ ಇರಲಿ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಆಗಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಆಶಯದಂತೆ ಕೆಲಸ ಮಾಡಬೇಕು. ನಾನು ಸಭಾಧ್ಯಕ್ಷರಾಗಿದ್ದೇನೆ, ನನಗೆ ಆಡಳಿತ-ಪ್ರತಿಪಕ್ಷವೂ ಎರಡೂ ಒಂದೇ ಆಗಿದೆ. ಎಲ್ಲ ಶಾಸಕರನ್ನು ಸಮಾನತೆಯಿಂದ ನೋಡಿಕೊಂಡು ಹೋಗಬೇಕು ಮತ್ತು ಸದನದಲ್ಲಿ ಸೌಹಾರ್ದತೆ ನಿರ್ಮಾಣ ಮಾಡಿ, ಸಮರ್ಪಕವಾಗಿ ಚರ್ಚೆಗೆ ಅವಕಾಶ ನೀಡಬೇಕು. ವಿವಿಧ ಕಾನೂನು, ಜನಪರವಾದ ಯೋಜನೆ ರೂಪಿಸಲು ಉತ್ತಮವಾದ ವಾತಾವರಣ ರೂಪಿಸುವ ಕೆಲಸ ಮಾಡುತ್ತೇನೆ.

ಯು.ಟಿ.ಖಾದರ್, ಸಭಾಧ್ಯಕ್ಷರು, ವಿಧಾನಸಭೆ