ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿ ಆಗಲಿದೆ ಎಂಬ ಸುಳ್ಳು ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ಬಜೆಟ್‍ನಲ್ಲಿ ತಕ್ಕ, ಯೋಜನಾತ್ಮಕ ಉತ್ತರ ನೀಡಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.ತಮ್ಮ ಧೀರ್ಘ ರಾಜಕೀಯ ಅನುಭವ, ಬಡಜನರ ನೋವು ಕಣ್ಣಾರೆ ಕಂಡಿರುವ ಸಿದ್ದರಾಮಯ್ಯ ರಾಜ್ಯದ 6 ಕೋಟಿಗೂ ಹೆಚ್ಚು ಜನರ ಪ್ರಗತಿಗೆ ಬಜೆಟ್‍ನಲ್ಲಿ ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಸಮೃದ್ಧ ನಾಡು ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಪಂಚ ಗ್ಯಾರೆಂಟಿ ಯೋಜನೆಗಳಿಗೆ ಹಣ ಇಲ್ಲ, ಇವುಗಳು ನಿಲ್ಲುತ್ತವೆ ಎಂಬ ಅಪಪ್ರಚಾರಕ್ಕೆ ಸಾವಿರಾರು ಕೋಟಿ ರು. ಮೀಸಲಿಟ್ಟು ನುಡಿದಂತೆ ನಡೆಯುವುದು ನಮ್ಮ ಬದ್ಧತೆ ಎಂಬುದನ್ನು ಪ್ರದರ್ಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಸ್‍ಸಿಎಸ್‍ಪಿ, ಟಿಎಸ್‍ಪಿ ಜನರ ಕಲ್ಯಾಣಕ್ಕಾಗಿ ಬರೋಬ್ಬರಿ 42 ಸಾವಿರ ಕೋಟಿ ರು. ಮೀಸಲಿಟ್ಟಿರುವುದು, ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದವರಿಗೆ ಗುತ್ತಿಗೆ ಪದ್ಧತಿಯಲ್ಲಿ ಮೀಸಲಾತಿ ಜಾರಿಗೊಳಿಸಿರುವುದು ದೇಶದಲ್ಲಿಯೇ ಮೊದಲ ಕ್ರಾಂತಿಕಾರಕ ನಡೆ ಆಗಿದೆ. ವಿಜ್ಞಾನ, ಕೃಷಿ, ಆರೋಗ್ಯ, ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿ ಮೂಲಕ ನಾಡನ್ನು ಸಮೃದ್ಧವಾಗಿ ಕಟ್ಟುವ ಕೆಲಸ ಈ ಬಾರಿಯ ಬಜೆಟ್‍ನಲ್ಲಿ ಸಿದ್ದರಾಮಯ್ಯ ಸಮರ್ಥವಾಗಿ ಮಾಡಿದ್ದಾರೆ ಎಂದರು.ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಯ ಜನರ ಬಹುದಿನಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ತಾನೇ ಘೋಷಿಸಿದ 5,300 ಕೋಟಿ ರು. ಬಿಡುಗಡೆ ಮಾಡದೆ ಅಸಹಕಾರ ತೋರುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ 2,611 ಕೋಟಿ ರು. ಅನುದಾನ ನೀಡುವ ಮೂಲಕ ಬಯಲುಸೀಮೆ ಪ್ರದೇಶದ ಭೂಮಿಗೆ ನೀರುಣಿಸುವುದು ಹಾಗೂ ಜನರ ಬಾಯಾರಿಕೆ ತಣಿಸುವ ಕೆಲಸ ಮಾಡಲಾಗಿದೆ.ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿದ್ದು, ಅಪಘಾತಗಳು ಸಾಮಾನ್ಯವಾಗಿವೆ. ಅಪಘಾತ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಅಗತ್ಯ ಚಿಕಿತ್ಸೆ ದೊರೆಯದೆ ಪ್ರಾಣ ಬಿಟ್ಟವರು ಅನೇಕರು. ಇದನ್ನು ಮನಗಂಡು ಜನರ ಪ್ರಾಣ ರಕ್ಷಣೆಗೆ ಜಿಲ್ಲಾ ಕೇಂದ್ರದಲ್ಲಿ ಟ್ರಾಮಾ ಕೇರ್ ಸೆಂಟರ್ ಸ್ಥಾಪನೆ, ಮೊಳಕಾಲ್ಮೂರಲ್ಲಿ 200 ಹಾಸಿಗೆ ಸಾಮರ್ಥ್ಯವುಳ್ಳ ದೊಡ್ಡ ಆಸ್ಪತ್ರೆ ನಿರ್ಮಾಣ, ತೊಗರಿ ಬೆಳೆಗೆ ಪ್ರತಿ ಕ್ವಿಂಟಾಲ್‍ಗೆ 450 ರು. ಪ್ರೋತ್ಸಾಹಧನ, ರಸ್ತೆ ಸಂಚಾರ ಸುಗಮಗೊಳಿಸಲು ಯೋಜನೆ ಹೀಗೆ ಅನೇಕ ಯೋಜನೆಗಳ ಮೂಲಕ ಕನ್ನಡ ನಾಡನ್ನು ಸಮೃದ್ಧಗೊಳಿಸಲು, ಜನರ ಜೀವನಮಟ್ಟ ಉತ್ತಮಗೊಳಿಸಲು ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‍ನಲ್ಲಿ ರಾಜ್ಯದ ಎಲ್ಲ ವರ್ಗದ ಜನರ ಹಿತ ಅಡಗಿದ್ದು, ಅತ್ಯುತ್ತಮ ಅಯವ್ಯಯವಾಗಿದೆ ಎಂದು ಎಚ್.ಆಂಜನೇಯ ತಿಳಿಸಿದ್ದಾರೆ.
---ಪೋಟೋ: ಆಂಜನೇಯ