ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಜನತೆಯ ನಿರೀಕ್ಷೆ ಹುಸಿ ಮಾಡಿದೆ.
ಶಿರಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಜನತೆಯ ನಿರೀಕ್ಷೆ ಹುಸಿ ಮಾಡಿದೆ. ಅಭಿವೃದ್ಧಿಗೆ ಪೂರಕ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೇ ಕೇವಲ ಕಿವಿಗೆ ಹಿತವೆನಿಸುವ ಕಾರ್ಯಕ್ರಮಗಳನ್ನು ಘೋಷಿಸಿ, ಜನರ ಮೂಗಿಗೆ ತುಪ್ಪ ಸವರಲು ಸಿಎಂ ಹೊರಟಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಆರೋಪಿಸಿದ್ದಾರೆ.
ಕೇವಲ ಮುಸ್ಲಿಂ ಸಮುದಾಯವನ್ನು ಅತಿಯಾಗಿ ಓಲೈಸಲು ಒತ್ತು ನೀಡಿರುವ ಬಜೆಟ್ ಇದಾಗಿದೆ. ಶಿಕ್ಷಣದ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಅವಕಾಶವಿರುವ ಕೈಗಾರಿಕೆಗಳಿಗೆ ಉತ್ತೇಜನವೇ ಇಲ್ಲ. ಕೃಷಿ ವಲಯಕ್ಕೆ ಆದ್ಯತೆ ನೀಡದೇ ರೈತರ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಹುಸಿಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಗಳಿಂದ ಜನ ನಗರದತ್ತ ಮುಖಮಾಡುವ ಪರಿಸ್ಥಿತಿ ಹಿನ್ನೆಲೆಯಲ್ಲಿ, ಅದನ್ನು ತಡೆಯುವ ಯಾವುದೇ ಕಾರ್ಯಕ್ರಮವನ್ನೂ ಸಿ.ಎಂ ಪ್ರಕಟಿಸಿಲ್ಲ. ಹಾಗಾಗಿ ಇದು ಗ್ರಾಮೀಣ ಜನರ ಹಾಗೂ ರೈತ ವಿರೋಧಿ ಬಜೆಟ್ ಆಗಿದೆ. ಜಿಲ್ಲೆಗೆ ತೀರಾ ಅಗತ್ಯವಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಪ್ರವಾಸೋದ್ಯಮಕ್ಕೆ ಪೂರಕವಾದ ನಿರ್ದಿಷ್ಟವಾದ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸದೇ, ಕರಾವಳಿ ಭಾಗದ ಜನರಿಗೆ ಕೇವಲ ಹುಸಿ ಭರವಸೆ ನೀಡಲಾಗಿದೆ ಎಂದರು.