ಸಾರಾಂಶ
ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಅಭಿವೃದ್ಧಿ ಹೊಂದುತ್ತಿರುವ ಎರಡನೇ ಸ್ತರದ ಜಿಲ್ಲೆಗಳ ಪೈಕಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಘಟ್ಟನಗರಿ ಶಿವಮೊಗ್ಗದ ಇನ್ನಷ್ಟು ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಹೊಸ ಕೊಡುಗೆಗಳನ್ನು ನೀಡಬಹುದೆಂಬ ಅಪಾರ ನಿರೀಕ್ಷೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ೨೪-೨೫ ನೇ ಸಾಲಿನ ಆಯವ್ಯಯದತ್ತ ಜಿಲ್ಲೆಯ ಜನರ ದೃಷ್ಟಿ ನಿಂತಿದೆ.ಮುಖ್ಯವಾಗಿ ಎರಡು ಪ್ರಮುಖ ಕಾರಣಗಳಿಂದಾಗಿ ಈ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ. ಮೊದಲನೆಯದಾಗಿ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿ ಬರುವ ತನಕ ಯಾವುದೇ ಸರ್ಕಾರದ ಆಯವ್ಯಯದಲ್ಲಿ ಶಿವಮೊಗ್ಗ ಎಂದೂ ಪ್ರಮುಖವಾಗಿ ಕಂಡಿರಲಿಲ್ಲ. ಯಾವುದೇ ಅಭಿವೃದ್ಧಿ ಯೋಜನೆಗಳು ತುಂಗಾ ನದಿಯನ್ನು ದಾಟಿ ಇತ್ತ ಬಂದಿರಲಿಲ್ಲ. ಆದರೆ ಯಡಿಯೂರಪ್ಪ ಅವರು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಹಣಕಾಸು ಖಾತೆಯೊಂದಿಗೆ ಉಪ ಮುಖ್ಯಮಂತ್ರಿಯಾಗಿ ಮತ್ತು ಬಳಿಕ ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದ ಬಳಿಕ ಅಭಿವೃದ್ಧಿಯ ಮಹಾಪೂರವೇ ಇಲ್ಲಿಗೆ ಹರಿದು ಬಂದಿತ್ತು. ಯಡಿಯೂರಪ್ಪ ಅಧಿಕಾರ ಕಳೆದುಕೊಂಡ ಬಳಿಕ ಈ ಅಭಿವೃದ್ಧಿಯೂ ಕುಂಠಿತಗೊಂಡಿತ್ತು. ಹೀಗಾಗಿ ಯಡಿಯೂರಪ್ಪ ಹೊರತಾಗಿಯೂ ಇಲ್ಲಿ ಅಭಿವೃದ್ಧಿ ಸಾಧ್ಯ ಎಂಬುದನ್ನು ತೋರಿಸಲಾದರೂ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ ದೊಡ್ಡ ಪಾಲು ನೀಡಬೇಕಾಗಿದೆ.
ಇನ್ನೊಂದು ಕಾರಣವೆಂದರೆ, ಕಳೆದ ಒಂದೂವರೆ ದಶಕದಲ್ಲಿ ಜಿಲ್ಲೆಯಲ್ಲಿ ಪ್ರಬಲವಾಗಿ ಬೇರೂರಿದ್ದ ಬಿಜೆಪಿಯನ್ನು ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನರು ಸ್ವಲ್ಪ ದೂರ ತಳ್ಳಿದ್ದರು. ೭ ವಿಧಾನಸಭಾ ಸ್ಥಾನಗಳ ಪೈಕಿ ಮೂರು ಸ್ಥಾನಗಳು ಕಾಂಗ್ರೆಸ್‌ಗೆ ಜಿಲ್ಲೆಯ ಮತದಾರರು ನೀಡುವ ಮೂಲಕ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಗೆ ಭದ್ರತೆಯನ್ನು ಒದಗಿಸಿದ್ದರು. ಈ ಕಾರಣಕ್ಕಾಗಿಯಾದರೂ ಅಭಿವೃದ್ಧಿಗೆ ಹಣ ನೀಡಬೇಕು ಎಂಬ ನಿರೀಕ್ಷೆ ಜನರಲ್ಲಿ ಮತ್ತು ಕಾಂಗ್ರೆಸ್ ಪಾಳಯದಲ್ಲಿ ಕೂಡ ಇದೆ. ಸಾಕಷ್ಟು ಅಭಿವೃದ್ಧಿಯ ಬಳಿಕವೂ ಇನ್ನೂ ಆಗಬೇಕಾದ ಕೆಲಸಗಳು ಸಾಕಷ್ಟಿವೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ: ಮುಖ್ಯವಾಗಿ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ವಿಫುಲ ಅವಕಾಶವಿದ್ದರೂ ಈವರೆಗೆ ಈ ವಲಯದಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ. ಜೋಗ, ತ್ಯಾವರೆಕೊಪ್ಪ, ಬಳ್ಳಿಗಾವೆ, ಕೆಳದಿ, ಇಕ್ಕೇರಿ, ಗಾಜನೂರು ಸಮೀಪದ ಆನೆಬೈಲು ಆನೆ ಬಿಡಾರ, ತುಂಗಾ ಮತ್ತು ಭದ್ದಾ ಹಿನ್ನೀರನ್ನು ಬಳಸಿಕೊಂಡು ಪ್ರವಾಸೋಧ್ಯಮ ಅಭಿವೃದ್ಧಿ.. ಹೀಗೆ ಸಾಲು ಸಾಲು ಅಭಿವೃದ್ಧಿ ಕೆಲಸಗಳು ಕಾಯುತ್ತಿವೆ. ಸಂಸದ ಬಿ. ವೈ. ರಾಘವೇಂದ್ರ ಅವರು ತಮ್ಮ ಮಿತಿಯಲ್ಲಿ ಜೋಗ, ಸಕ್ರೆಬೈಲು ಆನೆ ಬಿಡಾರ, ಉಡುತಡಿ ಸೇರಿದಂತೆ ಹಲವು ಪ್ರವಾಸೋಧ್ಯಮ ಕ್ಷೇತ್ರಕ್ಕೆ ಸಾಕಷ್ಟು ಹಣ ತಂದರು. ಆದರೆ ಸಕ್ರೆಬೈಲು ಆನೆ ಬಿಡಾರ ಸೇರಿದಂತೆ ಹಲವು ಕ್ಷೇತ್ರಕ್ಕೆ ನೀಡಿದ ಹಣವನ್ನು ರಾಜ್ಯ ಸರ್ಕಾರ ವಾಪಸ್ಸು ಪಡೆದಿದೆ.ಈ ಆಯವ್ಯಯದಲ್ಲಿ ಮಲೆನಾಡಿನ ಪ್ರಾಕೃತಿಕ ಸಂಪತ್ತನ್ನು ಬಳಸಿಕೊಂಡ ಪ್ರವಾಸೋಧ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು. ಇದಕ್ಕಾಗಿ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬ ಬೇಡಿಕೆಯಿದೆ. ಇದಾದರೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬೆಳವಣಿಗೆಗೆ ಸಾಕಷ್ಟು ಸಹಾಯವಾಗುತ್ತದೆ. ಈ ಹಿಂದೆ ಶಿವಮೊಗ್ಗದ ಅಭಿವೃದ್ಧಿಗೆ ಘೋಷಣೆಯಾದ ಹಲವು ಯೋಜನೆಗಳು ಹಾಗೆಯೇ ಉಳಿದಿವೆ. ಆಯುಷ್ ವಿವಿ: ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಶಿವಮೊಗ್ಗಕ್ಕೆ ಆಯುಷ್ ವಿವಿ ಘೋಷಿಸಿದರು. ಇದಕ್ಕಾಗಿ ಎನ್.ಆರ್. ಪುರ ರಸ್ತೆಯಲ್ಲಿ ೧೦೦ ಎಕರೆ ಭೂಮಿಯ ಜೊತೆಗೆ ತಮ್ಮ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ೧೦ ಕೋಟಿ ರು. ಅನುದಾನವನ್ನು ಮೀಸಲಿಟ್ಟರು. ಇದರ ಸ್ಥಾಪನೆ ಮತ್ತು ಅಭಿವೃದ್ಧಿಗೆ ಪೂರಕವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಬಜೆಟ್ ಲ್ಲಿ ವಿಶೇಷ ಅನುದಾನ ನೀಡಬೇಕಾಗಿದೆ.ಬೀದರ್‌ನಲ್ಲಿರುವ ರಾಜ್ಯದ ಏಕೈಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಪ್ರತ್ಯೇಕಿಸಿ ಶಿವಮೊಗ್ಗ ಕೇಂದ್ರ ಮಾಡಿಕೊಂಡು ದಕ್ಷಿಣ ಕರ್ನಾಟಕಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಬೇಡಿಕೆಯಿದ್ದು, ಅದನ್ನು ಕೂಡ ಈಡೇರಿಸಬೇಕಿದೆ.ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್: ಯಡಿಯೂರಪ್ಪ ಅವರ ಕನಸಿನ ವಿಮಾನ ನಿಲ್ದಾಣ ಕೊನೆಗೂ ಈಡೇರಲು ಅವರೇ ಪುನಃ ಮುಖ್ಯಮಂತ್ರಿಯಾಗಿ ಬರಬೇಕಾಯಿತು. ಅದರ ಉದ್ಘಾಟನೆಯಾಗಿದ್ದು, ೨೦೨೩ ರ ಫೆ. ೨೭. ಅಂದು ಯಡಿಯೂರಪ್ಪ ಜನ್ಮ ದಿನವಾಗಿದ್ದು, ಅಂದೇ ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಿದರು. ಆದರೆ ವಿಮಾನ ಸಂಚಾರ ಆರಂಭಿಸಿದ್ದು, ಮಾತ್ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಜೊತೆಗೆ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರವೇ ಉಳಿಸಿಕೊಂಡಿತು. ಸದ್ಯ ವಿಮಾನ ಸಂಚಾರ ಸುಲಲಿತವಾಗಿ ನಡೆಯುತ್ತಿದ್ದರೂ ರಾತ್ರಿ ವೇಳೆ ವಿಮಾನ ಇಳಿಯಲು ಮತ್ತು ದಟ್ಟ ಮಂಜು ಇರುವ ಸಂದರ್ಭದಲ್ಲಿ ವಿಮಾನ ಇಳಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೈಟ್ ಲ್ಯಾಂಡಿಂಗ್ ಗೆ ಬೇಕಾದ ಅವಶ್ಯಕ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕಾಗಿದೆ. ಇದಕ್ಕಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ೬೫ ಕೋಟಿ ರು. ಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಅದು ಬಿಡುಗಡೆಯಾಗುವ ಮುನ್ನವೇ ಆ ಸರ್ಕಾರದ ಅವಧಿ ಮುಗಿದಿತ್ತು.ಕಾರ್ಗೋ ವಿಮಾನ: ಪ್ರಯಾಣಿಕ ವಿಮಾನಗಳು ಸಂಚರಿಸುತ್ತಿವೆ. ಆದರೆ. ಕೈಗಾರಿಕೋದ್ಯಮಗಳ ಬೆಳವಣಿಗೆಗೆ ಪೂರಕವಾಗಿ ಸರಕು ಸಾಮಗ್ರಿ (ಕಾರ್ಗೋ) ವಿಮಾನಗಳ ಸಂಚಾರ ಆರಂಭಿಸಬೇಕಾಗಿದೆ. ಕೈಗಾರಿಕಾ ಪ್ರದೇಶ: ಕೈಗಾರಿಕೆಗಳ ಅಭಿವೃದ್ಧಿಗೆ ವಿಮಾನ ಸಂಚಾರ ಸೇವೆ ಬಹಳ ದೊಡ್ಡ ಕೊಡುಗೆ ನೀಡುತ್ತಿದೆಯಾದರೂ, ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಕೂಡ ಮುಖ್ಯ ವಾಗಿದೆ. ಆದರೆ ಸದ್ಯ ಅಗತ್ಯಕ್ಕೆ ತಕ್ಕಂತೆ ಕೈಗಾರಿಕಾ ಭೂಮಿ ಲಭ್ಯವಿಲ್ಲ. ಹೊಸತಾಗಿ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗಬೇಕು. ಜೊತೆಗೆ ವಿಶೇಷ ಕೈಗಾರಿಕಾ ವಲಯ ಕೂಡ ಸ್ಥಾಪನೆಯಾಗಬೇಕಿದೆ. ಫುಡ್ ಪಾರ್ಕ್: ಈ ಹಿಂದೆ ಜಿಲ್ಲೆಯಲ್ಲಿ ಆಹಾರ ಪಾರ್ಕ್ ಸ್ಥಾಪನೆ ಕುರಿತು ಮಾತುಗಳು ಕೇಳಿ ಬಂದಿತ್ತು. ಇದಕ್ಕಾಗಿ ೧೦೦ ಎಕರೆ ಭೂಮಿಯನ್ನು ಗುರುತಿಸಲಾಗಿತ್ತು. ವಿಮಾನ ಸಂಚಾರ ಮತ್ತು ಉತ್ತಮ ಸಂಪರ್ಕಗಳು ಈಗ ಲಭ್ಯವಿದೆ. ಸಮರ್ಪಕ ರೀತಿಯಲ್ಲಿ ಫುಡ್ ಪಾರ್ಕ್ ಸ್ಥಾಪನೆಯಾದರೆ ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ದಕ್ಕಿದಂತಾಗುತ್ತದೆ. ಫುಡ್‌ಪಾರ್ಕ್ ನಿರ್ಮಾಣದಿಂದ ಸ್ಥಳೀಯ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮುಂದಿನ ೨೫ ವರ್ಷದ ಗುರಿಯನ್ನಿಟ್ಟುಕೊಂಡು ಕೇಂದ್ರ ಸರ್ಕಾರ ಬೆಂಗಳೂರು- ಮುಂಬೈ ಕೈಗಾರಿಕಾ ಕಾರಿಡಾರ್ ಘೋಷಿಸಿದೆ. ಆದರೆ, ಈ ಕಾರಿಡಾರ್ ಶಿವಮೊಗ್ಗಕ್ಕೆ ಬರುವುದಿಲ್ಲ. ಅದಕ್ಕೆ ಪೂರಕವಾಗಿ ಶಿವಮೊಗ್ಗ ದಾವಣಗೆರೆ ಅಥವಾ ಶಿವಮೊಗ್ಗ ಚಿತ್ರದುರ್ಗ ಮಾರ್ಗದಲ್ಲಿ ಕೈಗಾರಿಕಾ ಕಾರಿಡಾರ್ ಮಾಡಲು ಅವಕಾಶವಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಆದ್ಯತೆಯಲ್ಲಿ ಗಮನ ಹರಿಸಿದರೆ ಮಲೆನಾಡಿನ ಚಿತ್ರಣವೇ ಬದಲಾಗುತ್ತದೆ ಎಂಬುದು ಉದ್ಯಮಿಗಳ ಮಾತು. ಹಿಂದಿನಿಂದಲೂ ಟ್ರಕ್ ಟರ್ಮಿನಲ್ ಕುರಿತು ಒತ್ತಾಯ ಕೇಳಿ ಬರುತ್ತಿದೆ. ಆದರೆ ಇದುವರೆಗೂ ಈ ಬೇಡಿಕೆ ಈಡೇರಿಲ್ಲ.ಮಂಕಿ ಪಾರ್ಕ್: ಮಲೆನಾಡಿನ ಕೃಷಿಕರ ದೊಡ್ಡ ಸಮಸ್ಯೆಯೆಂದರೆ ಸದ್ಯಕ್ಕೆ ಮಂಗಗಳು. ರೈತರ ಮತ್ತು ವಾನರ ನಡುವಿನ ಯುದ್ಧದಲ್ಲಿ ಸದ್ಯ ರೈತರು ಹಣ್ಣಾಗಿದ್ದಾರೆ. ಫಸಲು ಉಳಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳ ಹಿಂದೆ ಮಂಕಿ ಪಾರ್ಕ್ ಸ್ಥಾಪನೆ ವಿಷಯ ಪ್ರಸ್ತಾಪವಾದಾಗ ರೈತರು ಖುಷಿ ಪಟ್ಟಿದ್ದರು. ಆದರೆ ಕೊನೆಗೂ ಈ ಬಗ್ಗೆ ಇದುವರೆಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ನಿರ್ಧಾರವಾಗಿಲ್ಲದೆ ಇರುವುದು ಬೇಸರ ಮೂಡಿಸಿದೆ. ಈ ಬಾರಿಯಾದರೂ ಅದು ಈಡೇರುವುದೇ ಎಂದು ಕಾದು ನೋಡಬೇಕು.
ಕಳೆದ ಬಜೆಟ್‌ನಲ್ಲಿ ಘೋಷಿಸಿದ ಯಾವುದೇ ಅಂಶ ಈಡೇರಿಲ್ಲ!ಶಿವಮೊಗ್ಗ: ಕಳೆದ ವರ್ಷ ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಂಡಿಸಿದ ಬಜೆಟ್ ನಲ್ಲಿ ಶಿವಮೊಗ್ಗ ಜಿಲ್ಲೆಗೆ ಘೋಷಿಸಿದ ಕೇವಲ ಎರಡು ಅಂಶಗಳಲ್ಲಿ ಒಂದನ್ನು ಕೂಡ ಈಡೇರಿಸಿಲ್ಲ.ಕಳೆದ ವರ್ಷವೂ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಹತ್ತು ಹಲವು ನಿರೀಕ್ಷೆಗಳನ್ನು ಜಿಲ್ಲೆಯ ರೈತ ಮತ್ತು ಉದ್ಯಮ ವಲಯ ನಿರೀಕ್ಷಿಸಿತ್ತು. ಆದರೆ ಗ್ಯಾರಂಟಿಗೆ ಹಣ ಹೊಂದಿಸುವದರತ್ತವೇ ಗಮನ ಹರಿಸಿದ್ದ ರಾಜ್ಯ ಸರ್ಕಾರ ಶಿವಮೊಗ್ಗ ಜಿಲ್ಲೆಗೆ ಯಾವ ಕೊಡುಗೆಯನ್ನೂ ನೀಡಿರಲಿಲ್ಲ. ಇಡೀ ಬಜೆಟ್ ನಲ್ಲಿ ಕಣ್ಣಿಗೆ ಕಂಡೂ ಕಾಣದಂತೆ ಎರಡು ಅಂಶವನ್ನು ಜಿಲ್ಲೆಯ ಹೆಸರಿನಲ್ಲಿ ಘೋಷಿಸಲಾಗಿತ್ತು. ರೈತರ ಕೃಷಿ ಉತ್ಪನ್ನ, ಪರಿಕರಗಳ ಸಾಗಾಣಿಕೆಗೆ ನಾಲ್ಕು ಚಕ್ರದ ಪಿಕಪ್ ವ್ಯಾನ್ ಖರೀದಿಗೆ ಶೇ. ೪ ರ ಬಡ್ಡಿದರದಲ್ಲಿ ೭ ಲಕ್ಷದವರೆಗೆ ಸಾಲ ಹಾಗೂ ಗಾಯಗೊಂಡ, ಅನಾರೋಗ್ಯಗೊಂಡ ಪ್ರಾಣಿಗಳ ರಕ್ಷಣೆ, ನಿರ್ವಹಣೆಗೆ ಹೊಸ ಪುನರ್ ವಸತಿ ಕೇಂದ್ರ ಸ್ಥಾಪನೆಯ ಕೊಡುಗೆಯನ್ನು ಪ್ರಕಟಿಸಲಾಗಿತ್ತು. ಆದರೆ ಇದುವರೆಗೂ ಈ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಲಾಭ ಜಿಲ್ಲೆಯ ಜನರಿಗೆ ಸಿಕ್ಕಿಲ್ಲ.