ಕನ್ನಡಪ್ರಭ ವಾರ್ತೆ ಬೆಂಗಳೂರು

ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ 1.15 ಲಕ್ಷ ಕೋಟಿ ರು. ಸಾಲ ಮಾಡಿ ಬಜೆಟ್‌ ಮಂಡಿಸಲಿದ್ದಾರೆ. ಜನರ ಮೇಲೆ ತೆರಿಗೆಗಳ ಹೊರೆ ಹಾಕುವುದು ಖಚಿತ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಎಂದರೆ ತೆರಿಗೆ ಹೇರುವ ರಾಮಯ್ಯ ಆಗಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ತೆರಿಗೆಗಳ ಹೊರೆ ಕಡಿಮೆ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ತಿಂಗಳಿಗೆ ನಾಲ್ಕರಂತೆ ತೆರಿಗೆ ಹಾಕುತ್ತಾರೆ. ಈಗಾಗಲೇ 36 ತೆರಿಗೆಗಳನ್ನು ಜನರ ಮೇಲೆ ಹೇರಿದ್ದಾರೆ. ಚುನಾವಣೆಗೆ ಮುನ್ನ ಜನರ ಮೇಲೆ ಹೊರೆ ಹಾಕದೆ ಗ್ಯಾರಂಟಿ ತರುತ್ತೇವೆ ಎಂದು ಭರವಸೆ ನೀಡಿ, ಈಗ ತೆರಿಗೆಗಳ ಹೊರೆ ಹೇರಿದ್ದಾರೆ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಅವರ ಅವಧಿ ಮುಗಿಯುವ ವೇಳೆಗೆ ಒಟ್ಟು ಸಾಲ ಎಂಟು ಲಕ್ಷ ಕೋಟಿ ರು. ಮೀರಲಿದೆ. ಇದರಿಂದಾಗಿ ಆರ್ಥಿಕ ಶಿಸ್ತು ಮೀರಿ ಹೋಗುತ್ತದೆ. ಇದು ಅವರ ಕಣ್ಕಟ್ಟು ವಿದ್ಯೆ. ಸಿದ್ದರಾಮಯ್ಯ ಅವರು ಇಲ್ಲದ ಆದಾಯ ಸೃಷ್ಟಿಸಿ ಜಿಎಸ್‌ಡಿಪಿಗೆ ಹೋಲಿಸುವ ಮೂಲಕ ಶೇಕಡ ಪ್ರಮಾಣವನ್ನು ಕಡಿಮೆ ಇರುವಂತೆ ತೋರಿಸುತ್ತಾರೆ. ಈ ಮೂಲಕ ಆರ್ಥಿಕ ಶಿಸ್ತು ಪಾಲಿಸಿದ್ದೇವೆ ಎಂದು ಸುಳ್ಳಾಗಿ ತೋರಿಸುತ್ತಾರೆ ಎಂದು ಆರೋಪಿಸಿದರು.

ಬಜೆಟ್‌ ಎಂದರೆ ಆದಾಯ ಹೆಚ್ಚಿಸಿ, ಜನರಿಗೆ ಹೊರೆಯಾಗದಂತೆ ಮಾಡಬೇಕು. ಇದನ್ನೇ ಆರ್ಥಿಕ ಪರಿಣತಿ ಎನ್ನುತ್ತಾರೆ. ಸಾಲ ಮಾಡಿ ಸರ್ಕಾರ ನಡೆಸಲು ಇವರೇ ಬೇಕಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಜನ ಅಂದುಕೊಂಡಿದ್ದು, ಸಂಪೂರ್ಣ ಸುಳ್ಳಾಗಿದೆ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಸಾಲ ಇಲ್ಲದ ಬಜೆಟ್‌ ಮಂಡಿಸಿದ್ದು, ಇನ್ನೂ 24,400 ಕೋಟಿ ರು. ಸಾಲ ಪಡೆಯಬಹುದಿತ್ತು. ಅಂಥ ಅವಕಾಶವಿದ್ದರೂ ಅವರು ಆಗ ಸಾಲ ಪಡೆದಿರಲಿಲ್ಲ. ಕಾಂಗ್ರೆಸ್‌ ಮಾತ್ರ ಪ್ರತಿ ವರ್ಷ ಸಾಲ ಪಡೆಯುತ್ತಲೇ ಇದೆ. ಈ ಬಾರಿ 1.15 ಲಕ್ಷ ಕೋಟಿ ರೂ. ಸಾಲ ಪಡೆಯಲಿದ್ದಾರೆ. ಸಾಲವನ್ನು ಜನರ ತಲೆ ಮೇಲೆ ಹೇರುವ ಬಜೆಟ್‌ನ್ನು ಈ ಬಾರಿ ಮಂಡಿಸುತ್ತಾರೆ ಎಂದು ಅಶೋಕ್‌ ಲೇವಡಿ ಮಾಡಿದರು.

ನಂಜುಂಡಪ್ಪ ವರದಿಯಲ್ಲಿದ್ದ ಹಿಂದುಳಿದ ತಾಲೂಕುಗಳ ಸಂಖ್ಯೆ ಗೋವಿಂದರಾವ್‌ ವರದಿಯಲ್ಲಿ ಇನ್ನಷ್ಟು ಹೆಚ್ಚಾಗಿದೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಪ್ರತಿ ವರ್ಷ 15 ಸಾವಿರ ಕೋಟಿ ರು. ಮೀಸಲಿಡಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಈ ಬಜೆಟ್‌ನಲ್ಲಿ ಸರ್ಕಾರ ಇಷ್ಟೂ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.