ದೇಶದ ಜಿಡಿಪಿ ಹಾಗೂ ಕೇಂದ್ರ ತೆರಿಗೆ ಆದಾಯಕ್ಕೆ ಮಹತ್ತರ ಕೊಡುಗೆ ನೀಡುವ ಕರ್ನಾಟಕದಂತಹ ರಾಜ್ಯಕ್ಕೆ ಅಗತ್ಯವಾದ ಅನುದಾನ ಮತ್ತು ವಿಶೇಷ ಆದ್ಯತೆ ನೀಡದೇ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ದಾವಣಗೆರೆ ಕ್ಷೇತ್ರ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- ಕೇಂದ್ರ ಬಜೆಟ್‌ನಲ್ಲಿ ಈ ಬಾರಿಯೂ ಕರ್ನಾಟಕ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶನ: ಡಾ.ಪ್ರಭಾ ಆರೋಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದ ಜಿಡಿಪಿ ಹಾಗೂ ಕೇಂದ್ರ ತೆರಿಗೆ ಆದಾಯಕ್ಕೆ ಮಹತ್ತರ ಕೊಡುಗೆ ನೀಡುವ ಕರ್ನಾಟಕದಂತಹ ರಾಜ್ಯಕ್ಕೆ ಅಗತ್ಯವಾದ ಅನುದಾನ ಮತ್ತು ವಿಶೇಷ ಆದ್ಯತೆ ನೀಡದೇ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ದಾವಣಗೆರೆ ಕ್ಷೇತ್ರ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಜೆಟ್ ಕುರಿತು ಮಾತನಾಡಿದ ಅವರು, ಶಿವಮೊಗ್ಗ– ಹೊನ್ನಾಳಿ– ಮಲೇಬೆನ್ನೂರು– ಹರಿಹರ– ಮರಿಯಮ್ಮನಹಳ್ಳಿ ಮಾರ್ಗದ ಎಸ್‌ಎಚ್–25 ರಸ್ತೆಯನ್ನು ಮೇಲ್ದರ್ಜೆಗೇರಿಸಲು ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ಅದೇ ರೀತಿ ಜಗಳೂರು ತಾಲೂಕಿಗೆ ಏಕಲವ್ಯ ಮಾದರಿ ಶಾಲೆ, ಹಾಗೂ ರಾಯಚೂರು ಭಾಗಕ್ಕೆ ಏಮ್ಸ್ ಸಂಸ್ಥೆ ಸ್ಥಾಪನೆಗೆ ಸಲ್ಲಿಸಿದ್ದ ಬೇಡಿಕೆಗಳು ಈ ಬಜೆಟ್‌ನಲ್ಲಿ ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಟೀಕಿಸಿದರು.

“ವಿಕಸಿತ ಭಾರತ” ನಿರ್ಮಾಣವೆಂದರೆ ಎಲ್ಲ ರಾಜ್ಯಗಳಿಗೂ ಸಮನ್ಯಾಯ ಹಾಗೂ ಸಮರ್ಪಕ ಅನುದಾನ ನೀಡುವುದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ಹಾಗೂ ಸಂಸದರು ಕೇಂದ್ರ ಸರ್ಕಾರದ ಮುಂದೆ ಹಲವು ಬಾರಿ ಮನವಿ ಮಾಡಿದರೂ, ಕರ್ನಾಟಕದ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲಾಗಿಲ್ಲ ಎಂದು ಸಂಸದೆ ಬೇಸರ ವ್ಯಕ್ತಪಡಿಸಿದರು. ಅತ್ಯಂತ ಮುಖ್ಯವಾಗಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಅಡುಗೆದಾರರು ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಈ ಬಜೆಟ್‌ನಲ್ಲಿ ಯಾವುದೇ ಘೋಷಣೆ ಇಲ್ಲದಿರುವುದು ದುಃಖಕರವಾಗಿದೆ. ಕೇಂದ್ರ ಸರ್ಕಾರ ಪಿಎಂ ಇಂಟರ್ನ್‌ಶಿಪ್ ಯೋಜನೆಯ ಮೂಲಕ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರೂ, ಇದುವರೆಗೆ ಎಷ್ಟು ಉದ್ಯೋಗಗಳು ವಾಸ್ತವವಾಗಿ ಸೃಷ್ಟಿಯಾಗಿವೆ ಎಂಬ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದರು.

ಐಟಿ, ಡೀಪ್- ಟೆಕ್, ಸ್ಟಾರ್ಟ್ಅಪ್‌ಗಳು, ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಕ್ಷೇತ್ರಗಳಲ್ಲಿ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿವೆ. ಆದರೆ, ರಾಜ್ಯದ ಕೊಡುಗೆಗೆ ತಕ್ಕಷ್ಟು ಹಣಕಾಸು ಬೆಂಬಲ ಈ ಬಜೆಟ್‌ನಲ್ಲಿ ಕಾಣುತ್ತಿಲ್ಲ. 16ನೇ ಹಣಕಾಸು ಆಯೋಗಕ್ಕೆ ಕರ್ನಾಟಕ ಸಲ್ಲಿಸಿರುವ ಮನವಿಗಳ ಆಧಾರದಲ್ಲಿ ಬಜೆಟ್ ಹಂಚಿಕೆ ಆಗಬೇಕಿತ್ತು. ನ್ಯಾಯಯುತ ತೆರಿಗೆ ಹಂಚಿಕೆ, ನಿರೀಕ್ಷಿತ ಅನುದಾನ ವರ್ಗಾವಣೆ ಹಾಗೂ ನಿಜವಾದ ಹಣಕಾಸು ಫೆಡರಲಿಸಂಗೆ ಗೌರವ ಈ ಎಲ್ಲ ಅಂಶಗಳು ಕರ್ನಾಟಕದ ಪಾಲಿಗೆ ಇಲ್ಲವಾಗಿರುವುದು ದುರಂತದ ಸಂಗತಿ ಎಂದು ಡಾ.ಪ್ರಭಾ ಬೇಸರಿಸಿದರು.

ಒಟ್ಟಾರೆ, ಈ ಬಾರಿಯೂ ಕೇಂದ್ರ ಬಜೆಟ್ ಕರ್ನಾಟಕದ ಪಾಲಿಗೆ ಮಲತಾಯಿ ಧೋರಣೆಯನ್ನೇ ಮುಂದುವರಿಸಿದೆ. ಹೆಚ್ಚಿನ ತೆರಿಗೆ ಕೊಡುಗೆ ನೀಡುವ ರಾಜ್ಯಗಳ ಅಗತ್ಯಗಳಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಕರ್ನಾಟಕದ ಪಾಲಿಗೆ ವಿಶೇಷ ಆದ್ಯತೆಗಳಿಲ್ಲದ ಬಜೆಟ್ ಇದಾಗಿದೆ ಎಂದು ಹೇಳಿದರು.

- - -

-1ಕೆಡಿವಿಜಿ33: ಡಾ.ಪ್ರಭಾ ಮಲ್ಲಿಕಾರ್ಜುನ