90ರ ಹರೆಯದಲ್ಲೂ ಮಾಸದ ಸಂಗೀತ ಕಲೆ । ಭಕ್ತಿ ಪಂಥದ ಕೊನೆಯ ಕೊಂಡಿ ಕಲಾವಿದ । ಸರ್ಕಾರಕ್ಕೆ ಅಭಿನಂದನೆ ತಿಳಿಸಿದ ಗ್ರಾಮಸ್ಥರು

ಜಡೇಕುಂಟೆ ಮಂಜುನಾಥ್

ಕನ್ನಡಪ್ರಭವಾರ್ತೆ ಚಳ್ಳಕೆರೆ

ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿಯ ಅಜ್ಜಪ್ಪ ಎಂಬ 90ರ ಹರೆಯದ ಹಾರ್ಮೋನಿಯಂ ಕಲಾವಿದನಿಗೆ ಸಂಗೀತ ನೃತ್ಯ ಆಕಾಡೆಮಿಯು ಕೊಡಮಾಡುವ 2026ರ ಕರ್ನಾಟಕ ಕಲಾಶ್ರೀ ಪ್ರಶಸ್ತಿಯ ಗರಿಮೆ ಇವರ ಮುಡಿಗೇರಿದೆ.

ಕಡುಬಡತನದಲ್ಲಿ ಜನಿಸಿದ ಅಜ್ಜಪ್ಪ ಓದಿದ್ದು ನಾಲ್ಕನೆ ತರಗತಿವರೆಗೆ ಮಾತ್ರ. ಜೀವನದ ಬಂಡಿ ಸಾಗಿಸಲು ಹೊಟ್ಟೆಯ ತುತ್ತಿನ ಚೀಲ ತುಂಬಿಸಿಕೊಳ್ಳಲು ಊರೂರು ಅಲೆಮಾರಿಯಂತೆ ಸುತ್ತಿ ಹಾರ್ಮೋನಿಯಂ, ಪಿಟೀಲುಗಳ ಮೂಲಕ ಸಂಗೀತ ರಸದೌತಣ ನೀಡುವ ಕಾಯಕ ಮಾಡಿಕೊಂಡು ಬಂದ ಕಲಾವಿದನ ಬದುಕು ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಎಂಬಂತೆ ನಡೆದುಕೊಂಡು ಹೋಗುತ್ತಿತ್ತು.

ಇಳಿವಯಸ್ಸಿನಲ್ಲೂ ಕುಗ್ಗದ ಉತ್ಸಾಹ, ಎಲ್ಲಾದರೂ ನಾಟಕ, ಸಂಗೀತ ಕಾರ್ಯಕ್ರಮಗಳು ಎಂದರೆ ಸಾಕು ನೂರಾರು ಕಿ.ಮೀ ಕ್ರಮಿಸಿ ಹಗಲು, ರಾತ್ರಿ ಎನ್ನದೇ ಪಿಟೀಲು, ಹಾರ್ಮೋನಿಯಂ ಬಾರಿಸುವ ಬದ್ಧತೆಯುಳ್ಳ ಈ ಕಲಾವಿದ ಹಾರ್ಮೋನಿಯಂ ರಿಪೇರಿ ಎಂದು ಯಾರಾದರೂ ಕರೆ ಮಾಡಿದರೆ ಕ್ಷಣಾರ್ಧದಲ್ಲಿ ಹೊರಡುತ್ತಾರೆ. ಕಣ್ಣಿಗೆ ಕಾಣುವ ಯಾವುದೇ ವಾದ್ಯ ಇರಲಿ ಅದನ್ನು ಅಲ್ಲಿಯೇ ಸರಿ ಮಾಡಿ ಒಂದು ಜಾ‌ನಪದ ಹಾಡು ಹಾಡಿ ಅಲ್ಲಿರುವವರನ್ನು ರಂಜಿಸುವ ಮಗುವಿನ ಮನಸ್ಸು ಇವರದ್ದು.

ಅಲೆಮಾರಿಗಳಾಗಿ ತಿರುಗಾಡುತ್ತಾ ಬುಡ್ನಹಟ್ಟಿ ಗ್ರಾಮಕ್ಕೆ ಬಂದು ನೆಲೆ ನಿಂತ ಸಂಗೀತಗಾರ ಸಂಜೀವಪ್ಪನ ಮೊಮ್ಮಗ.

ಸಂಗೀತ ಮತ್ತು ಬಯಲಾಟ ಆಡಿಸುವ ದೊಂಬಿದಾಸ ಕಲಾವಿದ ರಾಮಪ್ಪ ಮತ್ತು ರಂಗಮ್ಮ ದಂಪತಿಯ ಪುತ್ರ ಈ ಅಜ್ಜಪ್ಪ.

ತಾಲೂಕು ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ದೈವದ ಮಹತ್ವವನ್ನು ಸಾರುತ್ತ ಜಾನಪದ ಭಕ್ತಿಗೀತೆಗಳನ್ನು ಹಾಡುತ್ತಾ, ಏಕತಾರಿ ಪಿಟೀಲು, ತಾಳ ತಂತಿಗಳನ್ನು ನುಡಿಸುತ್ತಾ ಭಿಕ್ಷಾಟನೆ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಭಕ್ತಿ ಪಂಥದ ಕೊನೆಯ ಕೊಂಡಿ ಈ ಕಲಾವಿದ.

ಆಧುನಿಕ ಭರಾಟೆಯಲ್ಲೂ ನೂರಾರು ಸಂಗೀತ ಉಪಕರಣಗಳು ಮಾರುಕಟ್ಟೆಯಲ್ಲಿದ್ದರೂ ಹಳೇ ಹಾರ್ಮೋನಿಯಂ ಮೂಲಕವೇ ಜನರ ಮನವನ್ನ ತೂಗಾಡಿಸುವ ಕಲೆ ಇವರ ಕಿಸೆಯಿಂದ ಬರುವ ಸಂಗೀತಕ್ಕಿದೆ.

ಅಜ್ಜಪ್ಪ 1936ರ ಜನವರಿಯಲ್ಲಿ ಜನಿಸಿದರು. ಪಾರಂಪರಿಕ, ಸಂಪ್ರದಾಯಿಕವಾಗಿ ಬಂದ ಮನೆ, ಮನೆ ಸುತ್ತಿ ಭಿಕ್ಷಾಟನೆ ಮಾಡುತ್ತಿದ್ದ ತಾತನ ಹಿಂದೆ ಬಿದ್ದ ಅಜ್ಜಪ್ಪ, ಅವರ ಅನುಕರಣೆ ಮಾಡುತ್ತಲೇ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡರು. ಶಾಲೆಗೆ ಹೋಗಿ ಬುದ್ಧಿವಂತನಾಗು ಎಂದರೂ ತಾತನ ಜತೆ ಸುತ್ತುವುದು ಮಾತ್ರ ಬಿಟ್ಟಿರಲಿಲ್ಲ. ನಾಲ್ಕನೇ ತರಗತಿಯವರೆಗೆ ಮಾತ್ರ ಓದಲಾಯಿತು. ಅಷ್ಟರೊಳಗೆ ಸಂಗೀತ ಮಾಸ್ಟರ್ ನಾಗಗೊಂಡನಹಳ್ಳಿ ಗುರುಸಿದ್ದಪ್ಪ ಬಳಿ ಸಂಗೀತ ಕಲಿಯಲು ಮುಂದಾದ ಅಜ್ಜಪ್ಪ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.

ಶಾಸ್ತ್ರೀಯ ಗಾಯನದಲ್ಲಿ ಜೂನಿಯರ್, ಸೀನಿಯರ್ ಕಲಿತು ಗಾಯನ ಮಾಡುತ್ತಾ ಹಾಡುತ್ತಲೇ ನಾಟಕಗಳಿಗೆ ಸಂಗೀತ ನಿರ್ದೇಶನವನ್ನು ಮಾಡುತ್ತಾ ಸಾಗಿ ಸುಮಾರು 65 ವರ್ಷಗಳಾದವು. ಈಗ ಅವರಿಗೆ 90 ವರ್ಷ.

ಗುರು ಗುರುಸಿದ್ದಪ್ಪನವರು ವರ್ಗಾವಣೆಗೊಂಡು ಮೈಸೂರಿಗೆ ಹೋದಾಗ ಅವರ ಸ್ಥಾನವನ್ನು ಈ ಭಾಗದಲ್ಲಿ ತುಂಬಿ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದ ನಾಟಕಗಳಿಗೆ ಸಂಗೀತ ನಿರ್ದೇಶಕರಾಗಿ, ಪುರಾಣಗಳನ್ನು ಹಾಡುತ್ತಾ ಗುರು ಕಲಾ ಸಂಘವನ್ನು ಕಟ್ಟಿಕೊಂಡು ಶಾಲೆ- ಕಾಲೇಜು, ದೇವಸ್ಥಾನ, ನಾಟಕ, ವಿವಿಧ ಕಾರ್ಯಕ್ರಮಗಳಲ್ಲಿ ಹಾಡುತ್ತಾ ಸಾಗಿದವರು. ಇವರ ಶ್ರುತಿ ಜ್ಞಾನಕ್ಕೆ ಸಾಟಿಯೇ ಇಲ್ಲ. ನಾಟಕಗಳು, ಬಯಲಾಟಗಳು, ಇಲ್ಲದ ಸಂದರ್ಭದಲ್ಲಿ ಹಾರ್ಮೋನಿಯಂ,ಪಿಟೀಲು, ಮದ್ದಲಿ, ತಬಲಾಗಳ ರಿಪೇರಿ ಮಾಡಿ ಬದುಕು ಸಾಗಿಸಿದವರು. ಯಾವುದೇ ಪ್ರಶಸ್ತಿ, ಪದಕಗಳ ಹಿಂದೆ ಬೀಳದೆ ತಮ್ಮ ಪಾಡಿಗೆ ತಾವು ಸಂಗೀತ ವಾದ್ಯಗಳ ರಿಪೇರಿ ಮಾಡುತ್ತಾ ಉಳಿದ ಸಮಯದಲ್ಲಿ ನಾಟಕಗಳಲ್ಲಿ ಸಂಗೀತ ನಿರ್ದೇಶನ ಮಾಡುತ್ತಾ ತಮ್ಮ ಬದುಕು ರೂಪಿಸಿಕೊಂಡವರು. ತಾಲ್ಲೂಕಿನ ಸುತ್ತಮುತ್ತಲ ಗ್ರಾಮದಲ್ಲಿ ಸಂಗೀತ ಮಾಸ್ಟರ್, ಹಾರ್ಮೋನಿಯಂ, ತಬಲಾ, ಮದ್ದಲಿ, ಪಿಟೀಲು ವಾದ್ಯಗಳ ರಿಪೇರಿಕ ಅಜ್ಜಪ್ಪ ಎಂದೇ ಖ್ಯಾತಿ ಪಡೆದವರು.

ನಾಡಿನ ಬೇರೆ, ಬೇರೆ ಜಿಲ್ಲೆಗಳಿಂದ ಶ್ರುತಿ ತಿದ್ದಿಸಿಕೊಳ್ಳಲು ಹಾರ್ಮೋನಿಯಂ ತಯಾರಿಸಿಕೊಳ್ಳಲು ಇವರನ್ನು ಹುಡುಕಿಕೊಂಡು ಬರುತ್ತಾರೆ. ಜಾತಿ ಜನಾಂಗ ಪಕ್ಷಪಾತಿಗಳ ಮಧ್ಯೆ ಇಂತಹ ವ್ಯಕ್ತಿತ್ವಗಳು ಮುನ್ನಲೆಗೆ ಬಾರದೆ ಹಾಗೆಯೇ ತೆರೆಮರೆಗೆ ಸರಿದಿದ್ದಾರೆ. ಇಂತಹವರನ್ನು ಗುರುತಿಸುವ ಕೆಲಸ ಬಹಳಷ್ಟಿದೆ ಎನ್ನುತ್ತಾರೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ರಮೇಶ್ ಗಬ್ಬೂರ್.

ಇವರನ್ನು ಸರ್ಕಾರ ಗುರುತಿಸಿದ್ದೂ ಕೂಡ ಅತ್ಯಂತ ಶ್ಲಾಘನೀಯ ಎನ್ನುತ್ತಾರೆ ಹಿರಿಯ ರಂಗಕರ್ಮಿ ಪಿ.ತಿಪ್ಪೇಸ್ವಾಮಿ. ಇದೊಂದು ಬಯಲುಸೀಮೆಯ ಬಡ ಕಲಾವಿದನಿಗೆ ಸಿಕ್ಕ ಗೌರವ ಎಂಬುದಾಗಿ ಅವರು ಸಂತಸ ವ್ಯಕ್ತಪಡಿಸುತ್ತಾರೆ.200ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ

ಬುಡ್ನಹಟ್ಟಿಯ ಅಜ್ಜಪ್ಪನವರು ಸುಮಾರು 30ವರ್ಷಗಳಿಂದ ಹಲವಾರು ವಿಧದ ನೂರಾರು ಸಂಗೀತ ವಾದ್ಯಗಳ ರೀಪೇರಿ ಮಾಡಿದ ಕೀರ್ತಿ ಇವರದ್ದು. 200ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಯಾವುದೇ ಪ್ರಚಾರ ಗೀಳು ಹತ್ತಿಸಿಕೊಳ್ಳದೆ ಎಲೆಮರೆಕಾಯಿಯಂತೆ ನಾನು ಮಾಡುವ ಸೇವೆ ಕಲಾಸೇವೆ ಎಂದು ನಿಸ್ವಾರ್ಥದಿಂದಲೇ ಕಲೆ, ಸಂಗೀತ, ಸರಸ್ವತಿಯ ಸೇವೆ ಮಾಡುತ್ತಾ ತಮ್ಮ ಜೀವನವನ್ನು ಸವಿಸುತ್ತಿದ್ದಾರೆ. ಇಂತಹ ಕಲಾವಿದನನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಗ್ರಾಮದ ಜನರು ಸರ್ಕಾರವನ್ನ ಅಭಿನಂದಿಸಿದ್ದಾರೆ.