ಕೊಟ್ಟೂರಲ್ಲಿ ಸಿಡಿಲು ಬಡಿದು ಎಮ್ಮೆ, ಎತ್ತು ಸಾವು

| Published : May 22 2024, 12:48 AM IST

ಸಾರಾಂಶ

ವಿಜಯನಗರ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಭಾರಿ ಬಿರುಗಾಳಿ, ಸಿಡಿಲು, ಮಳೆಗೆ ಅಪಾರ ಹಾನಿಯಾಗಿದೆ. ಕೊಟ್ಟೂರು ತಾಲೂಕಿನಲ್ಲಿ ಎಮ್ಮೆ, ಎತ್ತು ಬಲಿಯಾಗಿ, ಆರು ತೆಂಗಿನ ಮರಗಳು ಸುಟ್ಟು ಕರಕಲಾಗಿವೆ. ಜಿಲ್ಲೆಯಲ್ಲಿ ೧೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಜಯನಗರ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಭಾರಿ ಬಿರುಗಾಳಿ, ಸಿಡಿಲು, ಮಳೆಗೆ ಅಪಾರ ಹಾನಿಯಾಗಿದೆ.

ಕೊಟ್ಟೂರು ತಾಲೂಕಿನಲ್ಲಿ ಎಮ್ಮೆ, ಎತ್ತು ಬಲಿಯಾಗಿ, ಆರು ತೆಂಗಿನ ಮರಗಳು ಸುಟ್ಟು ಕರಕಲಾಗಿವೆ. ಜಿಲ್ಲೆಯಲ್ಲಿ ೧೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ.

ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮದಲ್ಲಿ ಮೈಲಪ್ಪ ಎಂಬ ರೈತನಿಗೆ ಸೇರಿದ ಎಮ್ಮೆ ಹಾಗೂ ಕೆ. ಬಸಾಪುರ ತಾಂಡದ ಮಿಟ್ಟಯ್ಯ ನಾಯ್ಕ ಎಂಬ ರೈತನಿಗೆ ಸೇರಿದ ಎತ್ತು ಸಿಡಿಲಿಗೆ ಬಲಿಯಾಗಿವೆ. ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹರಪನಹಳ್ಳಿ ತಾಲೂಕಲ್ಲಿ ಉತ್ತಮ ಮಳೆ

ಹರಪನಹಳ್ಳಿ ತಾಲೂಕಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆ ಸುರಿಯತ್ತಿದ್ದು, ಕೆರೆ ಕಟ್ಟೆಗಳು, ಗೋಕಟ್ಟೆಗಳು, ಕೃಷಿ ಹೊಂಡಗಳು ತುಂಬಿದ್ದು, ರೈತರು ಹರ್ಷಗೊಂಡಿದ್ದಾರೆ.ಮೇ 20ರಂದು ಹರಪನಹಳ್ಳಿ ತಾಲೂಕಲ್ಲಿ 135.6 ಮಿಮೀ ಮಳೆ ಬಿದ್ದಿದ್ದು, ಸರಾಸರಿ 19.3 ಮಿಮೀ ಬಿದ್ದಿದೆ.

ಮೇ 21ರಂದು ಹರಪನಹಳ್ಳಿ -13.8 ಮಿಮೀ, ಅರಸಿಕೇರಿ -2.1 ಮಿಮೀ, ಚಿಗಟೇರಿ -10.2 ಮಿಮೀ, ಹಿರೇಮೇಗಳಗೇರಿ -29.2 ಮಿಮೀ, ಉಚ್ಚಂಗಿದುರ್ಗ -30 ಮಿಮೀ, ತೆಲಿಗಿ -13.2 ಮಿಮೀ, ಹಲುವಾಗಲು -15.2 ಮಿಮೀ ಒಟ್ಟು 113.7 ಮಿಮೀ, ತಾಲೂಕಲ್ಲಿ ಸರಾಸರಿ 16.2 ಮಿಮೀ ಮಳೆ ಸುರಿದಿದೆ.ಅರಸಿಕೇರಿ ರೈತ ಸಂಪರ್ಕ ಕೇಂದ್ರ ಜಲಾವೃತ:

ಅರಸಿಕೇರಿ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಮದ್ಯಾಹ್ನ ಗುಡುಗು ಮಿಂಚಿನಿಂದ ಕೂಡಿದ ಉತ್ತಮ ಮಳೆಯಾಗಿದ್ದು, ಧಾರಾಕಾರ ಮಳೆಗೆ ಅರಸಿಕೇರಿ ಕೋಲಶಾಂತೇಶ್ವರ ಮಠದ ಆವರಣ ಜಲಾವೃತಗೊಂಡಿತ್ತು. ಸಾರ್ವಜನಿಕರ ಸಹಕಾರ ಹಾಗೂ ಯಂತ್ರದ ಮೂಲಕ ನೀರನ್ನು ಹೊರ ಹಾಕಲಾಯಿತು.ಅರಸಿಕೇರಿ ಗ್ರಾಮದಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ನೀರು ನುಗ್ಗಿದ್ದು, ಆವರಣ ಜಲಾವೃತಗೊಂಡಿದ್ದರಿಂದ ರೈತರು ಪರದಾಡಿದರು. ಗ್ರಾಮದ ಚಿಕ್ಕೇರಿ ತುಂಬುವ ಹಂತಕ್ಕೆ ಬಂದಿದೆ.