ರೈತರ ವಿರೋಧದ ನಡುವೆಯೂ ಬಿಡದಿ ಟೌನ್‌ಶಿಪ್‌ ಯೋಜನೆ ಮುಂದುವರಿಸಲು ಸರ್ಕಾರದ ಆಂತರಿಕ ಕಾರ್ಯಸೂಚಿ ಕಾರಣ. ಮುಖ್ಯಮಂತ್ರಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದರು.

ಹಾವೇರಿ:ರೈತರ ವಿರೋಧದ ನಡುವೆಯೂ ಬಿಡದಿ ಟೌನ್‌ಶಿಪ್‌ ಯೋಜನೆ ಮುಂದುವರಿಸಲು ಸರ್ಕಾರದ ಆಂತರಿಕ ಕಾರ್ಯಸೂಚಿ ಕಾರಣ. ಮುಖ್ಯಮಂತ್ರಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆಯನ್ನು ಎಚ್.ಡಿ. ಕುಮಾರಸ್ವಾಮಿ ಅವರು ಪ್ರಾರಂಭಿಸಿದ್ದರು. ಆನಂತರ ಯಡಿಯೂರಪ್ಪ ಅವರ ಅವಧಿಯಲ್ಲಿ ಈ ಬಗ್ಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಅವರು ಇದನ್ನು ಪ್ರಾರಂಭಿಸಿದ್ದರೆ, ಪ್ರಸ್ತುತ ಮುಖ್ಯಮಂತ್ರಿಗೆ ಈ ಯೋಜನೆಯ ಮೇಲೆ ಏಕಿಷ್ಟು ಪ್ರೀತಿ? ಎಲ್ಲ ವಿಷಯಗಳಲ್ಲೂ ಕುಮಾರಸ್ವಾಮಿ ಅವರನ್ನು ಟೀಕಿಸುವ ಶಿವಕುಮಾರ, ಈ ಟೌನ್‌ಶಿಪ್ ಯೋಜನೆಯಲ್ಲಿ ಮಾತ್ರ ಅವರನ್ನು ಏಕೆ ಅನುಸರಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕನಸಿನೊಳಗೆ ಮತ್ತೊಂದು ಕನಸಿದೆಯೇ?:ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲೇ ತಾವು ಮುನ್ನಡೆಯುತ್ತಿರುವುದಾಗಿ ಮುಖ್ಯಮಂತ್ರಿ ಹೇಳಿಕೊಳ್ಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೊಮ್ಮಾಯಿ, ಅಣ್ಣಾಜಿ, ಅಪ್ಪಾಜಿ ದಾರಿಯಲ್ಲೇ ಹೋಗುತ್ತಿದ್ದೇವೆ ಎನ್ನುವ ಇವರಿಗೆ ಈ ಯೋಜನೆಯಲ್ಲಿ ಹಿತಾಸಕ್ತಿ ಏನಿದೆ? ಅವರ ಕನಸನ್ನು ನನಸು ಮಾಡಲು ಹೊರಟಿರುವ ಇವರ ಉದ್ದೇಶವೇನು? ಈ ಕನಸಿನ ಹಿಂದೆ ಮತ್ತೊಂದು ಗುಪ್ತ ಕನಸಿದೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಸರ್ಕಾರಿ ಭೂಮಿಯಲ್ಲಿ ಟೌನ್‌ಶಿಪ್ ಮಾಡಿ:ಬೆಂಗಳೂರಿನ ಸುತ್ತಮುತ್ತ ಸ್ಯಾಟಲೈಟ್ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸುವ ಚರ್ಚೆ ಕಳೆದ 30 ವರ್ಷಗಳಿಂದ ನಡೆಯುತ್ತಿದೆ. ರೈತರ ಫಲವತ್ತಾದ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಬದಲು, ಸರ್ಕಾರದ ಬಳಿ ಲಭ್ಯವಿರುವ ಜಮೀನಿನಲ್ಲೇ ಟೌನ್‌ಶಿಪ್ ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು.

ಹಾವೇರಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಮೊಟೇಬೆನ್ನೂರು ಬಳಿ ಜಮೀನು ಗುರುತಿಸಲಾಗಿತ್ತು. ಆದರೆ ಅಲ್ಲಿನ ರೈತರು ಬಂದು, ಇದು ನಮ್ಮ ಫಲವತ್ತಾದ ಜಮೀನು, ನಾವು ಕೊಡುವುದಿಲ್ಲ ಎಂದಾಗ ನಾವು ತಕ್ಷಣ ಆ ಯೋಜನೆಯನ್ನು ಅಲ್ಲಿಂದ ಕೈಬಿಟ್ಟೆವು. ಅಂತಹ ಪ್ರಾಮಾಣಿಕತೆಯನ್ನು ಈಗಿನ ಸರ್ಕಾರವೂ ಪ್ರದರ್ಶಿಸಬೇಕು ಎಂದರು.