ಅಂತರಾಜ್ಯ ಗಡಿಗಳಲ್ಲಿ ಸಂಯುಕ್ತ ಖನಿಜ ಠಾಣೆ ನಿರ್ಮಿಸಿ

| Published : Feb 08 2024, 01:30 AM IST

ಅಂತರಾಜ್ಯ ಗಡಿಗಳಲ್ಲಿ ಸಂಯುಕ್ತ ಖನಿಜ ಠಾಣೆ ನಿರ್ಮಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಂತರಾಜ್ಯ ಗಡಿಗಳಲ್ಲಿ ಸಂಯುಕ್ತ ಖನಿಜ ಠಾಣೆ ನಿರ್ಮಿಸಿ ಅನಧಿಕೃತ ಗಣಿಗಾರಿಕೆ ಹಾಗೂ ಸಾಗಾಣಿಕೆ ತಡೆಗಟ್ಟಬೇಕೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ಜಿಲ್ಲಾ ಟಾಸ್ಕ್ ಫೋರ್ಸ್ (ಗಣಿ), ಜಿಲ್ಲಾ ಮರಳು ಸಮಿತಿ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಯುಕ್ತ ಖನಿಜ ತನಿಖಾ ಠಾಣೆಗಳನ್ನು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯ ಆಡಳಿತಾತ್ಮಕ ವೆಚ್ಚದಲ್ಲಿ ಸ್ಥಾಪಿಸಬೇಕು. ಹೋಂಗಾರ್ಡ್‍ಗಳನ್ನು ನೇಮಕ ಮಾಡಿಕೊಂಡು, ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಅನಧಿಕೃತ ಗಣಿಗಾರಿಕೆ ಹಾಗೂ ಸಾಗಾಣಿಕೆ ತಡೆಗಟ್ಟಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಗಣಿಗಾರಿಕೆ ಹಾಗೂ ಸಾಗಾಣಿಕೆ ತಡೆಗಟ್ಟಲು ಸರ್ಕಾರದಿಂದ ಪ್ರತ್ಯೋಜಿಸಲಾದ ಅಧಿಕಾರದಡಿಯಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಎಲ್ಲಾ ಸದಸ್ಯ ಇಲಾಖೆ ಅಧಿಕಾರಿಗಳು ತಂಡ ರಚಿಸಿಕೊಂಡು ಕಟ್ಟು ನಿಟ್ಟಾಗಿ ಕ್ರಮವಹಿಸಬೇಕು. ಈ ಸಂಬಂಧ ಜಿಲ್ಲೆಯಲ್ಲಿನ ಖನಿಜ ಸಾಗಾಣಿಕೆ ಮಾರ್ಗಗಳಲ್ಲಿ ಬರುವ ಪ್ರಮುಖ ಜಂಕ್ಷನ್‍ಗಳ ಮೇಲೆ ನಿಗಾ ಇಡಬೇಕು ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್ ಮಾಹಿತಿ ನೀಡಿ, ಸರ್ಕಾರದಿಂದ ಜಿಲ್ಲೆಗೆ ವರ್ಷಕ್ಕೆ ₹740 ಕೋಟಿ ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಿದ್ದು, ಜನವರಿ ಅಂತ್ಯದವರೆಗೆ ₹592 ಕೋಟಿ ಸಂಗ್ರಹಣೆ ಗುರಿ ಇದೆ. ಇದಕ್ಕೆ ಬದಲಾಗಿ ಜನವರಿ ಅಂತ್ಯದವರೆಗೆ ಮುಖ್ಯ ಖನಿಜ ಮತ್ತು ಉಪ ಖನಿಜ ಗಣಿ ಗುತ್ತಿಗೆಗಳಿಂದ ₹494.23 ಕೋಟಿ ರಾಜಸ್ವ ಸಂಗ್ರಹಣೆಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು ರವರು ಈ ಆರ್ಥಿಕ ವರ್ಷದ ಅಂತ್ಯಕ್ಕೆ ಶೇ.100ರ ಗುರಿ ಸಾಧಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಉಪನಿರ್ದೇಶಕರಿಗೆ ಸೂಚಿಸಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ಖನಿಜ, ಉಪ ಖನಿಜ ಗಣಿ ಗುತ್ತಿಗೆಗಳ ಮಂಜೂರಾತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳನ್ನು ತ್ವರಿತವಾಗಿ ವಿಲೆಗೊಳಿಸಿ ಆರ್ಥಿಕ ವರ್ಷದ ಅಂತ್ಯಕ್ಕೆ ಶೇ.100ರ ಗುರಿ ಸಾಧಿಸಲು ವಿಳಂಬ ಮಾಡದಂತೆ ನಿಯಮಾನುಸಾರ ಕ್ರಮವಹಿಸಲು ಟಾಸ್ಕ್ ಫೋರ್ಸ್ ಸಮಿತಿ ಎಲ್ಲಾ ಸದಸ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಕೆಎಂಎಂಸಿಆರ್-1994 ರ ನಿಯಮ 3-ಎಫ್ ರಡಿಯಲ್ಲಿ ಕುಲಕಸಬುದಾರರ ಜೀವನೋಪಾಯಕ್ಕೆ ಅನುವು ಮಾಡಿಕೊಡುವ ಸಂಬಂಧ ಈಗಾಗಲೇ 15 ಕಲ್ಲು ಬ್ಲಾಕ್‍ಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಗುರುತಿಸಿ ನಿರಾಕ್ಷೇಪಣಾ ಪತ್ರಗಳಿಗೆ ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ನಕ್ಷೆಯೊಂದಿಗೆ ಪತ್ರ ಬರೆಯಲಾಗಿದೆ. ಹೊಳಲ್ಕೆರೆ ತಾಲೂಕಿನ 3 ಬ್ಲಾಕ್‍ಗಳಿಗೆ ಮತ್ತು ಮೊಳಕಾಲ್ಮುರು ತಾಲೂಕಿನ 1 ಬ್ಲಾಕ್‍ಗೆ ನಿರಾಕ್ಷೇಪಣಾ ಪತ್ರಗಳು ಸ್ವೀಕೃತಿಯಾಗಿದ್ದು, ನಿಯಮಾನುಸಾರ ಅಧಿಸೂಚನೆ ಹೊರಡಿಸಿ ಲಾಟರಿ ಮೂಲಕ ಬ್ಲಾಕ್‍ಗಳನ್ನು ಮಂಜೂರು ಮಾಡಲು ಸಭೆಯಲ್ಲಿ ತಿರ್ಮಾನಿಸಲಾಯಿತು.

ಉಪವಿಭಾಗಾಧಿಕಾರಿ ಕಾರ್ತಿಕ್, ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಕಾಳೆಸಿಂಘೆ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್, ಪರಿಸರ ಅಧಿಕಾರಿ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.